ADVERTISEMENT

ಕಲಬುರ್ಗಿ: ಸಮಸ್ಯೆಯಲ್ಲೇ ಉಳಿದ ಉಮರ್ ಕಾಲೊನಿ

ಚರಂಡಿಮಯ ರಸ್ತೆಯಲ್ಲಿ ಸಾಗಲು ವಿದ್ಯಾರ್ಥಿಗಳು, ನಾಗರಿಕರ ಹರಸಾಹಸ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:30 IST
Last Updated 24 ಡಿಸೆಂಬರ್ 2020, 19:30 IST
ಕಲಬುರ್ಗಿ ನಗರದ ಉಮರ್ ಕಾಲೊನಿಯ ರಸ್ತೆಯಲ್ಲಿ ಚರಂಡಿ ನೀರು ನಿಂತಿದ್ದು, ವಿದ್ಯಾರ್ಥಿಗಳು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ  ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌.ಜಿ
ಕಲಬುರ್ಗಿ ನಗರದ ಉಮರ್ ಕಾಲೊನಿಯ ರಸ್ತೆಯಲ್ಲಿ ಚರಂಡಿ ನೀರು ನಿಂತಿದ್ದು, ವಿದ್ಯಾರ್ಥಿಗಳು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ  ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌.ಜಿ   

ಕಲಬುರ್ಗಿ: ರಸ್ತೆ ಮಧ್ಯದ ತಗ್ಗು ಗುಂಡಿಗಳಲ್ಲಿ ನಿಂತಿರುವ ಚರಂಡಿ ನೀರು, ಅದರಲ್ಲೇ ಸಂಚರಿಸುವ ವಾಹನ, ಇಡೀ ರಸ್ತೆಯಲ್ಲಿ ಕೆಸರಿಲ್ಲದ ಜಾಗ ಹುಡುಕಿ ಪ್ರಯಾಸಪಟ್ಟು ಸಾಗುವ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು, ನಾಗರಿಕರು..

ಕಲಬುರ್ಗಿ ನಗರದ ಹಾಗರಗಾಕ್ರಾಸ್‌ ಬಳಿಯ ಉಮರ್ ಕಾಲೊನಿಯ ದುಸ್ಥಿತಿ ಇದು. ಇಲ್ಲಿನ ಲಿಟಲ್ ಏಂಜಲ್ಸ್‌ ಪಬ್ಲಿಕ್ ಸ್ಕೂಲ್‌ ಪಕ್ಕದ ಮುಖ್ಯರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು, ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ.

‘ಈ ರಸ್ತೆಯು ಅಬುಬೂಕರ್, ಅರ್ತಾಫ್‌ ಹಾಗೂ ಗರೀಬ್ ನವಾಜ್ ಕಾಲೊನಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸದಾ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಹೀಗಿದ್ದರೂ ರಸ್ತೆ ಸರಿಪಡಿಸುವ ಗೋಜಿಗೆಯಾರೂ ಹೋಗಿಲ್ಲ’ ಎಂದು ಕಾಲೊನಿ ನಿವಾಸಿ ಮಹಮ್ಮದ್ ಸಲಾಹುದ್ದೀನ್ ಆರೋಪಿಸುತ್ತಾರೆ.

ADVERTISEMENT

ಈ ಬಡಾವಣೆ ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತೆ. ವಾರ್ಡ್‌ ಸಂಖ್ಯೆ 13ಕ್ಕೆ ಒಳಪಡುವ ಈ ಕಾಲೊನಿಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. 3,500ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಒಂದು ಅಂಗನವಾಡಿ ಶಾಲೆ ಹಾಗೂ ಫಿರೋಜ್ ಶಾ ಅನುದಾನಿತ ಶಾಲೆ ಇದೆ.

ಹದಗೆಟ್ಟಿರುವ ರಸ್ತೆ, ಸಿಗದ ಶುದ್ಧ ಕುಡಿಯುವ ನೀರು, ಅಸಮರ್ಪಕ ಚರಂಡಿ ನೀರಿನ ವ್ಯವಸ್ಥೆಯಂತಹ ಪ್ರಮುಖ ಸಮಸ್ಯೆಗಳಿಂದ ಇಲ್ಲಿನ ಜನ ಹೈರಾಣಾಗಿದ್ದಾರೆ. ರಸ್ತೆ ಪಕ್ಕವೇ ಶಾಲೆ ಹಾಗೂ ಮಸೀದಿ ಇದೆ. ಇಲ್ಲಿ ನಡೆದಾಡಲು ಚಿಕ್ಕ ಮಕ್ಕಳು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರು.

ಎಲ್ಲೆಂದರಲ್ಲಿ ತ್ಯಾಜ್ಯ:

ಕಾಲೊನಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಹಸಿ ಮತ್ತು ಒಣ ಕಸದೊಂದಿಗೆ ಪ್ಲಾಸ್ಟಿಕ್‌ ಎಸೆಯಲಾಗುತ್ತಿದೆ. ಇದರಿಂದ ಸ್ವಚ್ಛತೆಯೇ ಮಾಯವಾಗಿ ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ನಿವಾಸಿಗಳಿದ್ದಾರೆ. ಒಣ ಕಸಕ್ಕೆ ಸ್ಥಳೀಯರೇ ಬೆಂಕಿ ಹಚ್ಚುವುದು ಇಲ್ಲಿ ಸಾಮಾನ್ಯವಾಗಿದೆ.

ನೀರಿನ ಅಭಾವ:

‘8ರಿಂದ 10 ದಿನಕ್ಕೊಮ್ಮೆ ಪಾಲಿಕೆಯಿಂದ ನೀರು ಬರುತ್ತೆ. ಇಲ್ಲಿನ 6 ವಾರ್ಡ್‌ಗಳಿಗೆ ಒಂದೇ ನೀರಿನ ಟ್ಯಾಂಕ್‌ ಇದೆ. ಹೀಗಾಗಿ 6 ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ಇದೆ. ಇನ್ನೊಂದು ನೀರಿನ ಟ್ಯಾಂಕ್ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಕಾಲೊನಿಯ ನಿವಾಸಿ ಮಹಮ್ಮದ್ ಸಾದಿರ್ ಅಲಿ.

ಅಭಿವೃದ್ಧಿ ಕಾಣದ ಗರೀಬ್ ನವಾಜ್ ಕಾಲೊನಿ

ಉಮರ್ ಕಾಲೊನಿ ಪಕ್ಕದಲ್ಲಿನ ಗರೀಬ್ ನವಾಜ್ ಕಾಲೊನಿಯು ಹಲವು ಸಮಸ್ಯೆಗಳ ಗೂಡಾಗಿದೆ. ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು, ಬೀದಿ ದೀಪದಂತಹ ಕನಿಷ್ಠ ಸೌಲಭ್ಯಗಳೂ ಇಲ್ಲಿ ಕಾಣದಾಗಿದೆ. 500ಕ್ಕೂ ಹೆಚ್ಚು ಮನೆಗಳಿದ್ದು, 3000ಕ್ಕೂ ಹೆಚ್ಚು ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ನಿವಾಸಿಗಳ ಪೈಕಿಶೇ 90ರಷ್ಟು ಮುಸ್ಲಿಂ ಸಮುದಾಯದವರೇ ಇದ್ದಾರೆ. ಇಲ್ಲಿ ಅತಿ ಹೆಚ್ಚು ಬಡವರೇ ಇದ್ದು, ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರವೇ ಇಲ್ಲಿಗೆ ಬರುವ ರಾಜಕಾರಣಿಗಳು ಉಳಿದ ದಿನಗಳಲ್ಲಿ ಇತ್ತ ಸುಳಿಯುವುದೇ ಇಲ್ಲ. ಮೂಲ ಸೌಕರ್ಯಗಳಿಲ್ಲದೆ ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ನಿವಾಸಿ ಇಬ್ರಾಹಿಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.