ADVERTISEMENT

ಹೆರಿಗೆ ಪ್ರಮಾಣ: ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಗೆ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 13:50 IST
Last Updated 17 ಡಿಸೆಂಬರ್ 2018, 13:50 IST
ಡಾ.ಶಿವಕುಮಾರ್‌
ಡಾ.ಶಿವಕುಮಾರ್‌   

ಕಲಬುರ್ಗಿ: ‘ಇಲ್ಲಿಯ ಜಿಮ್ಸ್‌ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ)ಯಲ್ಲಿ ಪ್ರತಿದಿನ ಸಿಜೇರಿಯನ್‌ ಸೇರಿದಂತೆ ಸರಾಸರಿ 50 ಹೆರಿಗೆಗಳಾಗುತ್ತವೆ. ಹೆರಿಗೆ ಪ್ರಮಾಣದಲ್ಲಿ ಈ ಆಸ್ಪತ್ರೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ’ ಎಂದು ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ.ಸಿ.ಆರ್. ಹೇಳಿದರು.

‘ನಗರದಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು, ಹೊರ ಜಿಲ್ಲೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಕ್ಲಿಷ್ಟಕರ ಹೆರಿಗೆ ಪ್ರಕರಣಗಳು ಜಿಲ್ಲಾ ಆಸ್ಪತ್ರೆಗೆ ಬರುತ್ತವೆ. ಹೀಗಾಗಿ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿದ್ಧಗೊಳ್ಳುತ್ತಿದ್ದು ಇದು ಪ್ರಾರಂಭಗೊಂಡರೆ ಹೆರಿಗೆ ಮತ್ತು ನವಜಾತ ಶಿಶುಗಳ ಆರೈಕೆಗೆ ಅನೂಕುಲವಾಗಲಿದೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಜಿಮ್ಸ್ ಆಸ್ಪತ್ರೆ ಹಾಗೂ ಹಳೆ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 675 ಹಾಸಿಗೆಗಳಿವೆ. ಇಲ್ಲಿ ನೀರಿನ ಸಮಸ್ಯೆ ಇದೆ.ಆಸ್ಪತ್ರೆಗೆ 24x7 ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ.ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಲು ಟ್ಯಾಂಕ್‌ ನಿರ್ಮಾಣಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಭಾರತೀಯ ವೈದ್ಯಕೀಯ ಮಂಡಳಿಯ ಮಾನದಂಡದಂತೆ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಆದರೆ, ರೋಗಿಗಳ ಸಂಖ್ಯೆಗೆ ಹೋಲಿಸಿದರೆ ವೈದ್ಯರು, ನರ್ಸಿಂಗ್‌ ಹಾಗೂ ಗ್ರೂಪ್ ಡಿ ನೌಕರರ ಕೊರತೆಯಿದೆ’ ಎಂದರು.

ವೈದ್ಯರಿಗೆ ಟ್ರಾಮಾ ನಿರ್ವಹಣೆ ತರಬೇತಿ: ಅಪಘಾತಗಳಿಂದ ಆಘಾತಕ್ಕೊಳಗಾದವರಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ನೀಡುವ ವಿಷಯವಾಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಯಿಂದ ಡಿ.19 ರಂದು ವೈದ್ಯರಿಗೆ ಶಸ್ತ್ರಚಿಕಿತ್ಸೆಯ ತರಬೇತಿ ಆಯೋಜಿಸಲಾಗಿದೆ ಎಂದು ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ.ಆರ್. ತಿಳಿಸಿದರು.

ಆಘಾತ ಮತ್ತು ಅದರ ಸ್ವರೂಪ, ಗಂಭೀರತೆಯ ಬಗ್ಗೆ ಆಸ್ಟ್ರೇಲಿಯಾದ ಬಲ್ಲಾರ್ತ್‌ನಆರೋಗ್ಯ ಸೇವಾ ಸಂಸ್ಥೆಯ ತುರ್ತು ಔಷಧಿ ವಿಭಾಗದ ನಿರ್ದೇಶಕ ಡಾ.ರಾಜೇಶ ಸಣ್ಣಪ್ಪ ರೆಡ್ಡಿ, ಬೆಂಗಳೂರಿನ ಮಹಾವೀರ ಜೈನ ಅಸ್ಪತ್ರೆಯ ತಜ್ಞರಾದ ಡಾ.ಮಮತಾ.ಎಸ್.ಎಚ್ (ಪುರುಂತಗಿ) ಹಾಗೂ ಬೆಂಗಳೂರಿನ ಗ್ಲೋಬಲ್‌ ಆಸ್ಪತ್ರೆಯ ಡಾ.ಮನೀಷ್ ಜೋಶಿ ತರಬೇತಿ ನೀಡುವರು.

ಜಿಮ್ಸ್ ಅಸ್ಪತ್ರೆ ಆವರಣದಲ್ಲಿ ಟ್ರಾಮಾ ಸೆಂಟರ್ ಕಟ್ಟಡ ಪೂರ್ಣಗೊಂಡಿದ್ದು, ಈಗ ಟ್ರಾಮಾ ನಿರ್ವಹಣೆ, ಚಿಕಿತ್ಸೆ ಕುರಿತು ವೈದ್ಯರಿಗೆ ನೀಡುತ್ತಿರುವ ಶಿಕ್ಷಣವು ಮುಂದಿನ ದಿನದಲ್ಲಿ ಸಹಾಯವಾಗಲಿದೆ ಎಂದರು.

ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಸಂದೀಪ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.