ADVERTISEMENT

ಕಲಬುರ್ಗಿ: ಗ್ರಾ.ಪಂ ನೌಕರರಿಗೂ ₹ 30 ಲಕ್ಷ ವಿಮೆ

ಗ್ರಾಮ ಮಟ್ಟದಲ್ಲಿ ಕೊರೊನಾ ಕಟ್ಟಿಹಾಕಲು ಹೋರಾಡುತ್ತಿರುವ 61 ಸಾವಿರ ನೌಕರರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 16:05 IST
Last Updated 1 ಸೆಪ್ಟೆಂಬರ್ 2020, 16:05 IST
ಎಚ್‌.ಶಿವಾನಂದ
ಎಚ್‌.ಶಿವಾನಂದ   

ಕಲಬುರ್ಗಿ: ಗ್ರಾಮ ಮಟ್ಟದಲ್ಲಿ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಹಗಲಿರುಳು ದುಡಿಯುತ್ತಿರುವ ಗ್ರಾಮ ಪಂಚಾಯಿತಿಯ ಎಲ್ಲ ನೌಕರರಿಗೂ ₹ 30 ಲಕ್ಷ ಜೀವವಿಮೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಆಗಸ್ಟ್‌ 27ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ನಿರ್ದೇಶಕರು ಆದೇಶ ಪತ್ರ ಹೊರಡಿಸಿದ್ದಾರೆ.

ಪಂಚಾಯಿತಿಗಳಲ್ಲಿ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುವ ಬಿಲ್‌ ಕಲೆಕ್ಟರ್, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮ್ಯಾನ್, ಪಂಪ್‌ ಆಪರೇಟರ್‌, ಪಂಪ್‌ ಮೆಕ್ಯಾನಿಕ್‌, ಜವಾನ ಮತ್ತು ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿಯೂ ಈ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ADVERTISEMENT

ಕೋವಿಡ್‌ ಕೆಲಸ ಮಾಡುವ ಸಂದರ್ಭದಲ್ಲಿ ಸೋಂಕು ತಗುಲಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ ₹ 30 ಲಕ್ಷ ವಿಮೆ ಸಿಗಲಿದೆ. ಅಲ್ಲದೇ, ಸೋಂಕಿಗೆ ಉಚಿತ ಚಿಕಿತ್ಸೆಯನ್ನೂ ಕೊಡಿಸಲಾಗುತ್ತದೆ.

ತಮ್ಮನ್ನೂ ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಬೇಕು, ವಿಮೆ ಸೌಲಭ್ಯ ನೀಡಬೇಕು, ಸೇವಾಭದ್ರತೆ ಕೊಡಬೇಕು, ವೇತನ ಪರಿಷ್ಕರಣೆ ಮಾಡಬೇಕು, ಬಾಕಿ ಇರುವ ವೇತನ ನೀಡಬೇಕು ಎಂಬ ಇತ್ಯಾದಿ ಬೇಡಿಕೆಗಳ ಕುರಿತು ಗ್ರಾಮ ಪಂಚಾಯಿತಿ ನೌಕರರು ಹಲವು ಬಾರಿ ಹೋರಾಟ ಮಾಡಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಜುಲೈ 27ರಂದು ವಿಶೇಷ ವರದಿ ಮೂಲಕ ಬೆಳಕು ಚೆಲ್ಲಲಾಗಿತ್ತು.

‘ಗ್ರಾಮ ಮಟ್ಟದಲ್ಲಿ ಈಗ ಕೋವಿಡ್‌ ವಿಪರೀತವಾಗಿದೆ. ಹೀಗಾಗಿ, ರೋಗದ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಸೋಂಕಿತರನ್ನು ಗುರುತಿಸಿವುದು, ಲಾಕ್‌ಡೌನ್‌ ಮತ್ತು ಕೋವಿಡ್‌ ವಲಯಗಳಲ್ಲಿ ಅವಶ್ಯಕ ಸೇವೆಗಳನ್ನು ಮುಟ್ಟಿಸುವುದು, ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಆಹಾರ ಪದಾರ್ಥ ತಲುಪಿಸುವುದು, ಕಂದಾಯ ಬಿಲ್ ಸಂಗ್ರಹ, ಗ್ರಾಮ ಆರೋಗ್ಯ ಸೇವಾ ಕೇಂದ್ರ, ಕ್ವಾರಂಟೈನ್‌ ಕೇಂದ್ರಗಳಲ್ಲಿ ಮೇಲ್ವಿಚಾಣೆ... ಹೀಗೆ ಹಲವು ಕಠಿಣ ಕೆಲಗಳಲ್ಲಿಯೂ ಪಂಚಾಯಿತಿ ನೌಕರರು ಭಾಗಿಯಾಗಿದ್ದಾರೆ. ರಜೆ ಪಡೆಯದೇ ಜೀವದ ಹಂಗು ತೊರೆದು ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಕನಿಷ್ಠ ಒಂದು ಮಾಸ್ಕ್‌ ಕೂಡ ನೀಡಲಾಗುತ್ತಿಲ್ಲ. ಆದರೂ ಸರ್ಕಾರಗಳು ಈವರೆಗೆ ನಮ್ಮನ್ನು ವಾರಿಯರ್ಸ್‌ ಎಂದು ಪರಿಗಣಿಸಿರಲಿಲ್ಲ. ಈಗ ಜೀವವಿಮೆಗೆ ಒಳಪಡಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಹಲವು ನೌಕರರು ಕೋವಿಡ್‌ ಕಾರಣ ಮೃತಪಟ್ಟಿದ್ದಾರೆ. ಅವರಿಗೂ ವಿಮೆ ಒಳಪಡಬೇಕು ಎಂಬುದು ನಮ್ಮ ಕೋರಿಕೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಚ್‌. ಶಿವಾನಂದ ಮನವಿ ಮಾಡಿದ್ದಾರೆ.

‘ಪಂಚಾಯಿತಿ ನೌಕರರ ವೇತನಕ್ಕೆ ಇನ್ನೂ ಕೇವಲ‌ ₹ 382 ಕೋಟಿ ಅನುದಾನ ಒದಗಿಸಿದರೆ ನೌಕರರ ಜೀವನಕ್ಕೆ ಸಹಾಯ ಆಗುತ್ತದೆ. ರಾಜ್ಯ ಸರ್ಕಾರ ಈ ಹಣ ಒದಗಿಸಿ, ಜೀವನ ಭದ್ರಗೊಳಿಸಬೇಕು’ ಎಂದೂ ಅವರು ಕೋರಿದ್ದಾರೆ.

ಎಲ್ಲಿ ಎಷ್ಟು ನೌಕರರು ಪ್ರದೇಶ; ನೌಕರರ ಸಂಖ್ಯೆ

ಕಲಬುರ್ಗಿ;2,932

ಯಾದಗಿರಿ;1,250

ಬೀದರ್‌;2,250

ಕೊಪ್ಪಳ;1564

ರಾಯಚೂರು;2,214

ಬಳ್ಳಾರಿ;1,650

ಕ.ಕ.ಭಾಗ;11,560

ರಾಜ್ಯ;61,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.