ADVERTISEMENT

ಶೈಕ್ಷಣಿಕ ಕ್ಷೇತ್ರದ ಸೌಲಭ್ಯ ಉನ್ನತೀಕರಣ ಅಗತ್ಯ: ಡಾ.ಅಜಯಸಿಂಗ್ ಅಭಿಮತ

ಶರಣಬಸವ ವಿಶ್ವವಿದ್ಯಾಲ ವತಿಯಿಂದ ಅಂತರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 14:49 IST
Last Updated 24 ನವೆಂಬರ್ 2023, 14:49 IST
ಕಲಬುರಗಿ ಶರಣಬಸವ ವಿ.ವಿ. ವತಿಯಿಂದ ಹಮ್ಮಿಕೊಂಡ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 2024ರ ಕ್ಯಾಲೆಂಡರ್‌ಗಳನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ ಬಿಡುಗಡೆ ಮಾಡಿದರು. ಪ್ರೊ. ಲಕ್ಷ್ಮಿ ಪಾಟೀಲ ಮಾಕಾ, ಅನಿಲ ಕುಮಾರ ಬಿಡವೆ, ಡಾ. ನಿರಂಜನ ನಿಷ್ಠಿ, ಬಸವರಾಜ ದೇಶಮುಖ, ವಿ.ಡಿ. ಮೈತ್ರಿ ಇದ್ದರು
ಕಲಬುರಗಿ ಶರಣಬಸವ ವಿ.ವಿ. ವತಿಯಿಂದ ಹಮ್ಮಿಕೊಂಡ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 2024ರ ಕ್ಯಾಲೆಂಡರ್‌ಗಳನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ ಬಿಡುಗಡೆ ಮಾಡಿದರು. ಪ್ರೊ. ಲಕ್ಷ್ಮಿ ಪಾಟೀಲ ಮಾಕಾ, ಅನಿಲ ಕುಮಾರ ಬಿಡವೆ, ಡಾ. ನಿರಂಜನ ನಿಷ್ಠಿ, ಬಸವರಾಜ ದೇಶಮುಖ, ವಿ.ಡಿ. ಮೈತ್ರಿ ಇದ್ದರು   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಅನುದಾನ ಹಂಚಿಕೆಯಲ್ಲಿ ಶಿಕ್ಷಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಈ ವರ್ಷ ಒಟ್ಟು ಶೇ 25ರಷ್ಟು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ಮುಂದಿನ ವರ್ಷ 30ಕ್ಕೆ ಹೆಚ್ಚಿಸಲಾಗುವುದು’ ಎಂದು ಮಂಡಳಿ ಅಧ್ಯಕ್ಷ ಡಾ.ಅಜಯ್‍ಸಿಂಗ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಶರಣಬಸವ ವಿಶ್ವವಿದ್ಯಾಲಯ ವತಿಯಿಂದ ‘ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್ (ಐಸಿಐಐಸಿಎಸ್-23)’ ಕುರಿತ ಎರಡು ದಿನಗಳ ಐಇಇಇ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ವಲಯದ ಸುಧಾರಣೆಯೊಂದಿಗೆ ಪ್ರಯೋಗಾಲ, ಶಾಲಾ ಕಟ್ಟಡಗಳಂತಹ ಇತರ ಮೂಲಸೌಕರ್ಯಗಳ ಉನ್ನತೀಕರಣವು ಈ ಸಮಯದ ಅಗತ್ಯವಾಗಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ ವಲಯದ ಮೂಲಸೌಕರ್ಯಗಳ ಸುಧಾರಣೆಗೆ ಕೆಕೆಆರ್‌ಡಿಬಿ ಹೆಚ್ಚಿನ ಅನುದಾನ ಒದಗಿಸುತ್ತದೆ. ಇದರಿಂದ ಕಲ್ಯಾಣ ಕರ್ನಾಟಕದ ಮಕ್ಕಳ ವೃತ್ತಿಪರ ಜ್ಞಾನ ಹೆಚ್ಚಿಸಲು ಮತ್ತು ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಅನುಕೂಲಕರ ಕಲಿಕೆಯ ವಾತಾವರಣ ನಿರ್ಮಿಸಲು ಸಹಾಯವಾಗುತ್ತದೆ’ ಎಂದರು.

ADVERTISEMENT

‘ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲ ಶಾಲಾ–ಕಾಲೇಜುಗಳನ್ನು ತೆರೆದು ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಶ್ರಮಿಸುತ್ತಿದೆ. ಮಹಿಳೆಯರ ಶೈಕ್ಷಣಿಕ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಮಹಿಳೆಯರಿಗಾಗಿಯೇ ವಿಶೇಷ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದೆ, ಇದು ರಾಜ್ಯದಲ್ಲಿ ಮಹಿಳೆಯರಿಗಾಗಿ ಸ್ಥಾಪಿಸಲಾದ ಎರಡನೇ ಕಾಲೇಜು’ ಎಂದು ಹೇಳಿದರು. 

ಶರಣಬಸವೇಶ್ವರ ಸಂಸ್ಥಾನ ಹೊರತಂದಿರುವ ಸಮ್ಮೇಳನದ ಸ್ಮರಣ ಸಂಚಿಕೆ ಹಾಗೂ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ವಿಶ್ವವಿದ್ಯಾಲಯದ ಡೀನ್ ಲಕ್ಷ್ಮಿ ಪಾಟೀಲ ಮಾಕಾ ಮಾತನಾಡಿ, ‘ಸಮ್ಮೇಳನಕ್ಕಾಗಿ ವಿವಿಧ ದೇಶಗಳ ತಜ್ಞರು, ಸಂಪನ್ಮೂಲ ವ್ಯಕ್ತಿಗಳಿಂದ 1,457 ಪ್ರಬಂಧಗಳನ್ನು ಸ್ವೀಕರಿಸಲಾಗಿದೆ. ‘ಐಇಇಇ’ ಪರಿಶೀಲನೆ ಪ್ರಕ್ರಿಯೆ ಬಳಿಕ 260 ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದ್ದು ಅವುಗಳಲ್ಲಿ ಶೇ 50ಕ್ಕಿಂತ ವಿದೇಶಿ ತಜ್ಞರ, ಸಂಶೋಧಕರ ಪ್ರಬಂಧಗಳಾಗಿವೆ’ ಎಂದು ಮಾಹಿತಿ ನೀಡಿದರು.

ಶುಕ್ರವಾರ ಸಮ್ಮೇಳನದಲ್ಲಿ ಸ್ಪೇನ್‍ನ ಜೇನ್ ವಿಶ್ವವಿದ್ಯಾಲಯದ ರೋಸಿಯೊ ಪೆರೆಜ್ ಡಿ ಪ್ರಾಡೊ, ಥೈಲ್ಯಾಂಡ್‍ನ ಮಹೈಡೋಲ್ ವಿಶ್ವವಿದ್ಯಾಲಯದ ಸುಪ್ಪವಾಂಗ್ ಟುರಾಲ್, ಹೈದರಾಬಾದ್‍ ಐಐಟಿಯ ಸಿ.ಕೃಷ್ಣ ಮೋಹನ್ ಮತ್ತು ಐಐಎಸ್‍ಸಿ ಬೆಂಗಳೂರಿನ ಸಧಾನ್ ಮಾಜ್ಹಿ ಅವರು ಪ್ರಬಂಧ ಮಂಡಿಸಿದರು.

ಶರಣಬಸವ ವಿ.ವಿ ಕುಲಪತಿ ಡಾ.ನಿರಂಜನ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಕುಲಸಚಿವ ಅನಿಲಕುಮಾರ ಬಿಡವೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಾಸಕ ಅಲ್ಲಮಪ್ರಭು ಪಾಟೀಲ ವೇದಿಕೆಯಲ್ಲಿದ್ದರು.

ಪ್ರಥಮ ಬಾರಿಗೆ ಖಾಸಗಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಬಹು ಶಿಸ್ತೀಯ ಕೋರ್ಸ್‍ಗಳನ್ನು ನೀಡುತ್ತಿದೆ. ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯಗಳ ಸುಧಾರಣೆಗಾಗಿ ಶರಣಬಸವ ವಿಶ್ವವಿದ್ಯಾಲಯಕ್ಕೆ ಕೆಕೆಆರ್‌ಡಿಬಿ ಅನುದಾನ ನೀಡುತ್ತದೆ
- ಡಾ.ಅಜಯಸಿಂಗ್, ಕೆಕೆಆರ್‌ಡಿಬಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.