ADVERTISEMENT

ದೇಶದ ಆರ್ಥಿಕ ಅಭಿವೃದ್ಧಿಗೆ ಹೂಡಿಕೆ ಮುಖ್ಯ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:02 IST
Last Updated 2 ಸೆಪ್ಟೆಂಬರ್ 2025, 5:02 IST
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು   

ಕಲಬುರಗಿ: ‘ಸಂಪತ್ತು ಸೃಷ್ಟಿಗೆ ಹೂಡಿಕೆ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಬೇಕು. ದೇಶದ ಆರ್ಥಿಕ ಅಭಿವೃದ್ಧಿಗೆ ಹೂಡಿಕೆ ಮುಖ್ಯ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ದಿನದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹೂಡಿಕೆ ಎಂದರೆ ಷೇರು ಮಾರುಕಟ್ಟೆಯಲ್ಲಿ ಮಾತ್ರ ಹೂಡಿಕೆ ಮಾಡುವುದು ಎಂದಲ್ಲ. ಚಿನ್ನ ಮತ್ತು ಭೂಮಿಯನ್ನು ಖರೀದಿಸುವುದು, ಮನೆ ನಿರ್ಮಿಸುವುದು, ಮ್ಯೂಚುವಲ್ ಫಂಡ್‌ ಮತ್ತು ಇತರ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಎಂದರ್ಥ’ ಎಂದರು.

ADVERTISEMENT

‘ಈಗ ನೀವು ವಿದ್ಯಾರ್ಥಿಗಳಾಗಿದ್ದೀರಿ. ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ. ಆದರೆ, ನೀವು ಗಳಿಸಿದಾಗ ಹೂಡಿಕೆ ಮಾಡಲು ಆ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಲು ಇದು ಸರಿಯಾದ ಸಮಯ. ಸಣ್ಣದಾಗಿ ಹೂಡಿಕೆ ಮಾಡಲು ಪ್ರಾರಂಭಿಸಿ. ಅದು ಸ್ವಲ್ಪ ಸಮಯದ ನಂತರ ದೊಡ್ಡದಾಗುತ್ತದೆ. ಈ ಕಾರ್ಯಕ್ರಮದ ಸದುಪಯೋಗ ಪಡೆದು ಹೂಡಿಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿರಿ’ ಎಂದು ಹೇಳಿದರು.

ಪುಣೆಯ ಎಂಐಟಿ ವರ್ಲ್ಡ್ ಪೀಸ್ ಯೂನಿವರ್ಸಿಟಿಯ ಕುನಾಲ್ ಗೌರವ್ ಮಾತನಾಡಿ, ‘ಆರ್ಥಿಕವಾಗಿ ಸ್ವತಂತ್ರರಾಗಲು ಮೂರು ಪಾಠಗಳಿವೆ. ಮೊದಲ ಪಾಠ ನಿಮ್ಮ ಜ್ಞಾನ, ಕೌಶಲ ಮತ್ತು ವ್ಯಕ್ತಿತ್ವದಲ್ಲಿ ಹೂಡಿಕೆ ಮಾಡಿ ಎನ್ನುವುದು. ಎರಡನೆಯದು ನಿಮಗಾಗಿ ಪಾವತಿಸಿ, ಅಂದರೆ ನಿಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಿ. ಮೂರನೆಯದು ಬರಿ ಹಣವನ್ನು ಉಳಿಸಬೇಡಿ. ಅದನ್ನು ಹೂಡಿಕೆ ಮಾಡಿ. ನೀವು ಗಳಿಸಲು ಪ್ರಾರಂಭಿಸಿದ ತಕ್ಷಣ ಹೂಡಿಕೆ ಮಾಡಲು ಪ್ರಾರಂಭಿಸಿ. ಸರಿಯಾದ ಸಮಯ ಮತ್ತು ಹೂಡಿಕೆಯ ಪ್ರಕಾರಕ್ಕಾಗಿ ಹೂಡಿಕೆ ಮಾರ್ಗಗಳನ್ನು ಅನ್ವೇಷಿಸಿ’ ಎಂದರು.

ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‌ನ ಡೀನ್ ಪ್ರೊ. ಪಾಂಡುರಂಗ ವಿ.ಪತ್ತಿ ಮಾತನಾಡಿದರು. ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಜೋಹೈರ್ ಸ್ವಾಗತಿಸಿದರು. ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಮಹೇಂದರ್ ವಂದಿಸಿದರು. ಸಯ್ಯದ್ ಸಾಹಿಲ್ ಎಕ್ಬಾಲ್ ಮತ್ತು ಪರೋಮಿತ್ ರಾಯ್ ನಿರೂಪಿಸಿದರು.

ಜಯದೇವಿ ಜಂಗಮಶೆಟ್ಟಿ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕರಾದ ಶೈಲಜಾ ಕೊನೆಕ್, ಸುಮಾ ಸ್ಕಾರಿಯಾ, ವಿಜಯಕುಮಾರ್, ದೇವರಾಜಪ್ಪ, ಪದ್ಮಶ್ರೀ, ಗೌತಮ್, ಸುಷ್ಮಾ, ಸಫಿಯಾ ಪರ್ವೀನ್, ರಂಗನಾಥನ್, ನಟರಾಜ್, ನವೀನ್, ಜಗದೀಶ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.