
ಚಿಂಚೋಳಿ: ತಾಲ್ಲೂಕಿನ ಇಂದ್ರಪಾಡಹೊಳ್ಳಿ ಗ್ರಾಮದಲ್ಲಿ ನಿಧಿಗಳ್ಳರು ಜೆಸಿಬಿಯಿಂದ ನಂದಿಬಸವಣ್ಣ ಕಟ್ಟೆ ಧ್ವಂಸಗೊಳಿಸಿ ನೆಲ ಅಗೆದು ನಿಧಿ ಶೋಧಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಗ್ರಾಮದ ಮಲ್ಲಿಕಾರ್ಜುನ ಚಂದ್ರಪ್ಪ ನೀಲಗಾರ ಅವರ ಹೊಲದಲ್ಲಿರುವ ನಂದಿ ಬಸವಣ್ಣ ಕಟ್ಟೆಯೂ ಹಲವು ಶತಮಾನಗಳ ಹಳೆಯದಾಗಿದ್ದು, ಹಲವು ತಲೆಮಾರುಗಳಿಂದ ಗ್ರಾಮಸ್ಥರು ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ನಿಧಿಗಳ್ಳರು ನಿಧಿಯ ಆಸೆಗಾಗಿ ಕಟ್ಟೆ ಮೇಲಿದ್ದ ಜೋಡಿ ಬಸವಣ್ಣನ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದಿದ್ದು ಕಂಡು ಬಂದಿದೆ. ಇದು ನಿಧಿಗಳ್ಳರ ಕೃತ್ಯವೇ ಇರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಕೃಷಿಕರಾದ ಮಲ್ಲಿಕಾರ್ಜುನ ನೀಲಗಾರ ಸುಲೇಪೇಟ ಠಾಣೆಗೆ ದೂರು ನೀಡಿದ್ದು ಸಬ್ ಇನ್‌ಸ್ಪೆಕ್ಟರ್ ಅಮರ ಕುಲಕರ್ಣಿ ಸ್ಥಳಕ್ಕೆ ಬಂದು ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಗ್ರಾಮದ ಹಿರಿಯ ಮುಖಂಡ ಶರಣಪ್ಪ ತಳವಾರ, ರಾಜಶೇಖರ ಪಾಟೀಲ, ವೀರೇಂದ್ರ ರಾಜಾಪುರ, ದೇವೇಂದ್ರ ಹೊಸಮನಿ, ರಾಜು ತಳವಾರ, ರಾಜಶೇಖರ ಭೀಮಶಾ, ರವಿ ನೀಲಗಾರ, ಬಸವರಾಜ ಹೊಸಮನಿ ಮೊದಲಾದವರು ಘಟನೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.