ADVERTISEMENT

ಜೇವರ್ಗಿ: 1.18 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಮುಂಗಾರು ಕೃಷಿ ಚಟುವಟಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 4:19 IST
Last Updated 5 ಜೂನ್ 2020, 4:19 IST
ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಹೊಲ ಹದಗೊಳಿಸುತ್ತಿರುವ ರೈತ
ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಹೊಲ ಹದಗೊಳಿಸುತ್ತಿರುವ ರೈತ   

ಜೇವರ್ಗಿ: ತಾಲ್ಲೂಕಿನಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಗೂ 8.25 ಲಕ್ಷ ಟನ್ ಉತ್ಪಾದನಾ ಗುರಿ ಹೊಂದಲಾಗಿದೆ ಎಂದು ಜೇವರ್ಗಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸುನೀಲಕುಮಾರ ಜವಳಗಿ ತಿಳಿಸಿದ್ದಾರೆ.

ತಾಲ್ಲೂಕಿನ ಪ್ರಮುಖ ಬೆಳೆಗಳಾದ ತೊಗರಿ 64,450 ಹೆಕ್ಟೇರ್, ಹತ್ತಿ 42,725 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ ಮತ್ತು ಮೆಕ್ಕೆ ಜೋಳಗಳನ್ನು 1000 ಹೆಕ್ಟೇರ್, ಹೆಸರು 1250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಒದಗಿಸಲು ತೊಗರಿ, ಹೆಸರು, ಸಜ್ಜೆ ಸೂರ್ಯಕಾಂತಿ, ಮೆಕ್ಕೆ ಜೋಳ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.

ADVERTISEMENT

ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರವನ್ನು ಎಲ್ಲಾ ಹೋಬಳಿಗಳ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಹಾಗೂ ಅಧಿಕೃತ ಮಾರಾಟಗಾರರ ಮೂಲಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ರೈತರು ಬಿತ್ತನೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಭೂಮಿಯ ಹದ ಅರಿತು ಬಿತ್ತನೆ ಕಾರ್ಯ ಕೈಗೊಳ್ಳಬಹುದಾಗಿದೆ. ಬಿತ್ತನೆಗೆ ಮುನ್ನ ರೋಗ ಮತ್ತು ಕೀಟಗಳ ಹತೋಟಿಗಾಗಿ ಬೀಜೋಪಚಾರ ಕೈಗೊಳ್ಳಲು ತಾಂತ್ರಿಕ ಸಲಹೆಗಳನ್ನು ಅನುಸರಿಸಲು ಕೋರಲಾಗಿದೆ.

ಕೊರೊನಾ ಪ್ರಯುಕ್ತ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಪರಿಕರಗಳನ್ನು ತೆಗೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳು: ಜೇವರ್ಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಹರನೂರ, ಕೂಡಿ, ಸೊನ್ನ, ನೆಲೋಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಅಂಕಲಗಾ, ಮಂದೇವಾಲ, ಜೇರಟಗಿ, ಆಂದೋಲಾ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಚಿಗರಳ್ಳಿ ಕ್ರಾಸ್, ನರಿಬೋಳ, ಇಜೇರಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಬಿಳವಾರ, ಯಲಗೋಡ ಹಾಗೂ ಯಡ್ರಾಮಿ ಕೇಂದ್ರ ವ್ಯಾಪ್ತಿಯ ಅರಳಗುಂಡಗಿ, ಕುಕನೂರ, ಮಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.