ADVERTISEMENT

ಚಿಂಚೋಳಿ: ಚೆಟ್ಟಿನಾಡ್ ಸಿಮೆಂಟ್ಸ್ ಮೇಲೆ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 8:16 IST
Last Updated 9 ಡಿಸೆಂಬರ್ 2020, 8:16 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಬಳಿ ಇರುವ ಚೆಟ್ಟಿನಾಡ್ ಸಿಮೆಂಟ್ಸ್ ಕಂಪೆನಿ ಮೇಲೆ ಐಟಿ (ಆದಾಯ ತೆರಿಗೆ ಇಲಾಖೆ) ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 7.15ರ ಸುಮಾರಿಗೆ 15ಕ್ಕೂ ಹೆಚ್ಚು ಜನರಿರುವ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಬೆಳಿಗ್ಗೆ ಕಾರ್ಖಾನೆಗೆ ಬಂದ ಅಧಿಕಾರಿಗಳು ಹಣಕಾಸು ಶಾಖೆ, ಮಾನವ ಸಂಪನ್ಮೂಲ ಶಾಖೆ ಬಂದ್ ಮಾಡಿ ಲೆಕ್ಕಪತ್ರ ತಪಾಸಣೆ ನಡೆಸಿದರು. ಅಧಿಕಾರಿಗಳು ವಸತಿ ಗೃಹಗಳಲ್ಲಿ ಇರುವಾಗಲೇ ಮನೆಗಳಿಗೆ ಹೋಗಿ ಅವರನ್ನು ಕರೆದುಕೊಂಡು ಕಂಪನಿಯ ಆಡಳಿತ ಶಾಖೆಗೆ ಬಂದು ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿದರು.

ಎಲ್ಲೆಡೆ ದಾಳಿ: ಚೆಟ್ಟಿನಾಡ ಸಮೂಹದ ಮೇಲೆ ಎಲ್ಲಾ ಕಡೆಗಳಲ್ಲಿ ಬುಧವಾರ ಐಟಿ ದಾಳಿ ನಡೆದಿದೆ. ಬೇರೆ ಕಡೆಗಳಲ್ಲಿ ಇದು ಎರಡನೇ ದಾಳಿಯಾಗಿದ್ದರೆ, ಚಿಂಚೋಳಿಯ ಚೆಟ್ಟಿನಾಡ ಸಿಮೆಂಟ್ ಕಾರ್ಪೊರೇಷನ್ ಘಟಕದ ಮೇಲೆ ಇದು ಮೊದಲನೆ ದಾಳಿಯಾಗಿದೆ. ಕಂಪೆನಿಯ ಆಡಳಿತ, ಹಣಕಾಸು ಹಾಗೂ ಎಚ್‌ಆರ್ ಶಾಖೆಯ ಕಟ್ಟಡಗಳು ಬಂದ್ ಮಾಡಿದ್ದು ಕಿಟಕಿಗಳ ಗಾಜು ಮುಚ್ಚಲು ಪರದೆ ಅಳವಡಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಐಟಿ ದಾಳಿಯಿಂದ ಕೆಲವು ಅಧಿಕಾರಿಗಳು ಕಟ್ಟಡದ ಒಳಗಡೆ ಇದ್ದರೆ, ಕೆಲಸಕ್ಕೆ ತೆರಳ ಬೇಕಿದ್ದ ಇನ್ನೂ ಕೆಲವರು ಸುದ್ದಿ ತಿಳಿದು ವಾಪಸ್ ಹೋಗಿದ್ದಾರೆ.

ತಮಿಳುನಾಡಿನ ಕರಿಕಲ್, ಆಂಧ್ರಪ್ರದೇಶದ ದಾಚೆಪಳ್ಳಿ, ಗುಂಟೂರು, ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಕರ್ನಾಟದ ಕಲ್ಲೂರು ರೋಡ್ ಬಳಿಯ ಸಿಮೆಂಟ್ ಘಟಕಗಳು, ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.