ADVERTISEMENT

ಜಾಧವ ‘ಮತ ಬೇಟೆ’ ಆರಂಭ

ಟಿಕೆಟ್ ಖಚಿತ; ರಾಜಕೀಯ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 14:27 IST
Last Updated 22 ಮಾರ್ಚ್ 2019, 14:27 IST
ಡಾ.ಉಮೇಶ ಜಾಧವ ಅವರು ಡಾ.ಶರಣಬಸವಪ್ಪ ಅಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು
ಡಾ.ಉಮೇಶ ಜಾಧವ ಅವರು ಡಾ.ಶರಣಬಸವಪ್ಪ ಅಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು   

ಕಲಬುರ್ಗಿ: ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

ಬೆಂಗಳೂರಿನಿಂದ ಶುಕ್ರವಾರತಮ್ಮ ನಿವಾಸಕ್ಕೆ ಬಂದ ನಿಯೋಜಿತ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ಬಿ.ಜಿ.ಪಾಟೀಲ, ಬಸವರಾಜ ಮತ್ತಿಮೂಡ ಹಾಗೂ ಪ್ರಮುಖ ಮುಖಂಡರೊಂದಿಗೆ ‘ಮತ ಬೇಟೆ’ ಬಗ್ಗೆ ಚರ್ಚೆ ನಡೆಸಿದರು.

ಇದಾದ ಬಳಿಕ ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರಿಂದ ಆಶೀರ್ವಾದ ಪಡೆದುಕೊಂಡರು.ತದನಂತರ ಶಾಸಕ ಬಿ.ಜಿ.ಪಾಟೀಲ, ಬಸವರಾಜ ಮತ್ತಿಮೂಡ ಹಾಗೂ ವಿವಿಧ ಸಮುದಾಯಗಳ ಮುಖಂಡರಾದ ಪಾಂಡುರಂಗರಾವ್ ದೇಶಮುಖ, ಧರ್ಮಣ್ಣ ದೊಡ್ಮನಿ, ರಾಜು ವಾಡೇಕರ್ ಸೇರಿದಂತೆ ಹಲವರ ನಿವಾಸಗಳಿಗೆ ಭೇಟಿ ನೀಡಿ ಚುನಾವಣೆಯ ಬಗ್ಗೆ ಸಮಾಲೋಚನೆ ನಡೆಸಿದರು.

ADVERTISEMENT

ಮುಖಂಡರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ಅಮರನಾಥ ಪಾಟೀಲ, ಸುಭಾಸ ಬಿರಾದಾರ, ವಿದ್ಯಾಸಾಗರ ಶಾಬಾದಿ, ಶರಣು ಸಲಗರ ಇದ್ದರು.

ಸ್ಪರ್ಧೆ ಖಚಿತ–ಗೊಂದಲ ಬೇಡ:ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಾಧವ, ‘ಲೋಕಸಭೆ ಚುನಾವಣೆಗೆ ಸ್ಪರ್ಧೆ ಖಚಿತ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಬೆಂಬಲಿಗರು ಈ ಬಗ್ಗೆ ತಲೆಕೆಡಿಸಿಕೊಳ್ಳಬಾರದು’ ಎಂದು ಮನವಿ ಮಾಡಿದರು.

‘ರಾಜೀನಾಮೆ ಅಂಗೀಕಾರವಾಗಲ್ಲ, ಜಾಧವ ಸ್ಪರ್ಧಿಸಲ್ಲ ಎಂದು ಗೊಂದಲ ಸೃಷ್ಟಿಸಲಾಗುತ್ತಿದೆ. ಈ ಬಗ್ಗೆ ಅನೇಕರು ದೂರವಾಣಿ ಕರೆ ಮಾಡಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಳ್ಳಿಯವರು ಕೂಡ ಫೋನ್ ಮಾಡಿ ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ’ ಎಂದರು.

‘ಪಕ್ಷದ ವರಿಷ್ಠರು ಎಲ್ಲ ಕಡೆಗೆ ವಿಚಾರಿಸಿ ಟಿಕೆಟ್ ಅಂತಿಮಗೊಳಿಸಿದ್ದಾರೆ. ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ. ನಾನು ಕೂಡ ಕಾನೂನು ಪುಸ್ತಕಗಳನ್ನು ಅಧ್ಯಯನ ಮಾಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎನ್.ರವಿಕುಮಾರ್ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸಲು ಜಾಧವ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ಖರ್ಗೆ ಅವರು ಬೇರೆಯವರನ್ನು ಮಂತ್ರಿ ಮಾಡಲಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಮುಖಂಡರು ಎಲ್ಲರೂ ಮೌನವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಜಾಧವ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.