ADVERTISEMENT

ಜಗದಂಬಾ ಉತ್ಸವ ಕಣ್ತುಂಬಿಕೊಂಡ ಭಕ್ತರು

ಒಂಬತ್ತೂ ದಿನ ವೈವಿಧ್ಯಮಯ ಕಾರ್ಯಕ್ರಮ, ವಿಶೇಷ ಅಲಂಕಾರ, ಮಹಾಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:47 IST
Last Updated 8 ಅಕ್ಟೋಬರ್ 2019, 15:47 IST
ವಿಜಯದಶಮಿ ಪ್ರಯುಕ್ತ ಕಲಬುರ್ಗಿಯ ಶಹಾಬಜಾರ್‌ ಜಗದಂಬಾ ದೇವಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲು ತರಲಾಯಿತು
ವಿಜಯದಶಮಿ ಪ್ರಯುಕ್ತ ಕಲಬುರ್ಗಿಯ ಶಹಾಬಜಾರ್‌ ಜಗದಂಬಾ ದೇವಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲು ತರಲಾಯಿತು   

ಕಲಬುರ್ಗಿ: ವಿಜಯದಶಮಿ ಪ್ರಯುಕ್ತ ಇಲ್ಲಿನ ಶಹಾಬಜಾರ್‌ನಲ್ಲಿರುವ ಜಗದಂಬಾ ದೇವಿಯ ಪಲ್ಲಕ್ಕಿ ಮರವಣಿಗೆ ಅದ್ಧೂರಿಯಾಗಿ ನಡೆಯಿತು. ವೈವಿಧ್ಯಮಯ ವಾದ್ಯಮೇಳ ಸಮೇತ ಮಹಿಳೆಯರು, ಭಕ್ತರು ಪಾಲ್ಗೊಂಡರು.

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ಈ ಬಾರಿ ನವರಾತ್ರಿ ಉತ್ಸವಗಳು ಸಾಂಗವಾಗಿ ನೇರವೇರಿದವು. ದೇವಿಯ ಮೂರ್ತಿಗೆ ಒಂದು ವಾರಕ್ಕೂ ಹೆಚ್ಚು ಕಾಲ ವೈವಿಧ್ಯಮಯ ಅಲಂಕಾರ ಮಾಡಲಾಯಿತು. 10ನೇ ದಿನವಾದ ಮಂಗಳವಾರ ‘ಮಹಿಷಾಸುರ ಮರ್ದಿನಿ’ ಅಲಂಕಾರ ಮಾಡಲಾಯಿತು. ನಸುಕಿನ 5 ರಿಂದಲೇ ವಿವಿಧ ಅಭಿಷೇಕ, ಪೂಜಾ ವಿಧಾನ, ಆರತಿ, ಮಹಾಮಂಗಳಾರತಿ ಹಾಗೂ ಭಕ್ತಿಗೀತೆಗಳ ಗಾಯನ ನೆರವೇರಿತು.

ಬೆಳಿಗ್ಗೆ 11ಕ್ಕೆ ರಾಮತೀರ್ಥ ನಗರದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮುಡಿಯಲಾಯಿತು. ಸಮಾಜದ ಮುಖಂಡರು ಹಾಗೂ ಭಕ್ತರು ಪರಸ್ಪರ ಬನ್ನಿ ಮರದ ಎಲೆಗಳನ್ನು ವಿನಿಮಯ ಮಾಡಿಕೊಂಡು ದಸರೆಯ ಶುಭಾಶಯ ಕೋರಿದರು. ಮಧ್ಯಾಹ್ನ 12ರಿಂದ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಸಂಜೆ 4ಕ್ಕೆ ದೇವಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಿಜಯ ಮೆರವಣಿಗೆ ಆರಂಭಿಸಲಾಯಿತು.

ADVERTISEMENT

ಶಹಾಬಜಾರ್‌ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಮರಗೆಮ್ಮ ದೇವಸ್ಥಾನ, ಪ್ರಕಾಶ್‌ ಚಿತ್ರಮಂದಿರ ರಸ್ತೆ, ಕೋಟೆ ರಸ್ತೆ, ಕಿರಾಣಾ ಬಜಾರ್‌, ಅಯಾರ ವಾಡಿ ಮೂಲಕ ಸಂಚರಿಸಿತು. ಆಯಾರವಾಡಿಯಲ್ಲಿ ಇರುವ ಕ್ಷತ್ರಿಯ ಸಮಾಜದ ಜಗದಂಬಾ ದೇವಸ್ಥಾನದ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಯಿತು. ಈ ದೇವಸ್ಥಾನವನ್ನು ಪಲ್ಲಕ್ಕಿಯಲ್ಲಿ ಐದು ಸುತ್ತು ಹಾಕಿ, ಮತ್ತೆ ಅದೇ ಮಾರ್ಗದಲ್ಲಿ ಮಂದಿಕ್ಕೆ ಮರಳಲಾಯಿತು.

ಪ್ರತಿ ದಿನವೂ ವೈಭವ:ನವರಾತ್ರಿ ಪ್ರಯುಕ್ತ ಒಂಬತ್ತು ದಿನ ಜಗದಂಬಾ ದೇವಸ್ಥಾನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನೆರವೇರಿದವು.

ಪ್ರತಿ ದಿನ ಬೆಳಿಗ್ಗೆ ಅಭಿಷೇಕ, ದೇವಿಯ ಮೂರ್ತಿಗೆ ಒಂದೊಂದು ರೂಪದ ಅಲಂಕಾರ ಮಾಡಲಾಯಿತು. ಪ್ರತಿ ದಿನ ಸಂಜೆ 7ಕ್ಕೆ ದೀಪೋತ್ಸವ, ರಾತ್ರಿ 8ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮಹಿಳೆಯರು ಹಾಗೂ ಮಕ್ಕಳಿಗಾಗಿ ದಾಂಡಿಯಾ, ಕೋಲಾಟ, ಭರತನಾಟ್ಯ, ಭಾಜನೆ, ವಿವಿಧ ಚಿತ್ರಗಳ ಡಾನ್ಸ್‌, ಗಾಯನ ಹೀಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ನೀಡಲಾಯಿತು.

ಕೊನೆಯ ದಿನ ಉತ್ಸವಕ್ಕೆ ಶ್ರಮಿಸಿದ ಕಾರ್ಯಕರ್ತರು, ದೀಪಾಲಂಕಾರ ಮಾಡಿದವರು, ಬ್ಯಾಂಡ್‌ಸೆಟ್‌ನವರು, ಗಣ್ಯರು, ಪೊಲೀಸ್‌ ಸಿಬ್ಬಂದಿ ಹಾಗೂ ಅಲಂಕಾರ ನೆರವೇರಿಸಿದ ಭಕ್ತರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಶ್ರೀರಾಮ ಪವಾರ, ಪ್ರಕಾಶ ಮಂಗಜಿ, ವಿಷ್ಣು ಬಿರಾದಾರ, ಡಾ.ಸುಭಾಷ ಕಮಲಾಪುರೆ, ರವೀಂದ್ರ ಮಂಗಜಿ ನೇತೃತ್ವದಲ್ಲಿ ಉತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.