ADVERTISEMENT

‘ಅಧಿಕಾರದಾಹಿ ರಾಜಕಾರಣಿಗಳಿಗೆ ಅಭಿವೃದ್ಧಿ ಬೇಕಿಲ್ಲ’

ಎಸ್‌.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗಕರ್ಮಿ ಪ್ರಕಾಶ ಬೆಳವಾಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:55 IST
Last Updated 18 ಜುಲೈ 2019, 19:55 IST
ಹಾವೇರಿಯ ರಂಗನಿರ್ದೇಶಕ ಡಾ. ಶ್ರೀಪಾದಭಟ್‌ ಧಾರೇಶ್ವರ ಅವರಿಗೆ ಕಲಬುರ್ಗಿಯ ರಂಗಸಂಗಮ ರಂಗಕಲಾವೇದಿಕೆಯಿಂದ ಎಸ್‌.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಯನ್ನು ರಂಗಕರ್ಮಿ ಪ್ರಕಾಶ ಬೆಳವಾಡಿ ಪ್ರದಾನ ಮಾಡಿದರು. ಡಾ.ಸುಜಾತಾ ಜಂಗಮಶೆಟ್ಟಿ, ಸ್ವಾಮಿರಾವ್‌ ಕುಲಕರ್ಣಿ, ಸುಭದ್ರಾಬಾಯಿ, ವಿದ್ವಾನ್‌ ಸುಧೀರರಾವ್‌, ಎಚ್‌.ಎಸ್‌.ಬಸವಪ್ರಭು, ನಂದಾ ಕೊಲ್ಲೂರ ಇದ್ದಾರೆ
ಹಾವೇರಿಯ ರಂಗನಿರ್ದೇಶಕ ಡಾ. ಶ್ರೀಪಾದಭಟ್‌ ಧಾರೇಶ್ವರ ಅವರಿಗೆ ಕಲಬುರ್ಗಿಯ ರಂಗಸಂಗಮ ರಂಗಕಲಾವೇದಿಕೆಯಿಂದ ಎಸ್‌.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಯನ್ನು ರಂಗಕರ್ಮಿ ಪ್ರಕಾಶ ಬೆಳವಾಡಿ ಪ್ರದಾನ ಮಾಡಿದರು. ಡಾ.ಸುಜಾತಾ ಜಂಗಮಶೆಟ್ಟಿ, ಸ್ವಾಮಿರಾವ್‌ ಕುಲಕರ್ಣಿ, ಸುಭದ್ರಾಬಾಯಿ, ವಿದ್ವಾನ್‌ ಸುಧೀರರಾವ್‌, ಎಚ್‌.ಎಸ್‌.ಬಸವಪ್ರಭು, ನಂದಾ ಕೊಲ್ಲೂರ ಇದ್ದಾರೆ   

ಕಲಬುರ್ಗಿ: ‘ರಾಜಕಾರಣಿಗಳಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ಶಿಕ್ಷಣ, ಉದ್ಯೋಗ ಕೊಟ್ಟು ಸ್ವಾಲವಂಬಿಗಳನ್ನಾಗಿ ಮಾಡುವ ಆಸಕ್ತಿ ಇಲ್ಲ. ಶಿಕ್ಷಣ, ಉದ್ಯೋಗ ನೀಡಿದರೆ ಜನರು ಸುಶಿಕ್ಷಿತರಾಗಿ ತಮ್ಮ ಮಾತು ಕೇಳಲಿಕ್ಕಿಲ್ಲ ಎಂಬ ಆತಂಕವೂ ಅವರಿಗೆ ಇರಬಹುದು’ ಎಂದು ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಹೇಳಿದರು.

ರಂಗ ಸಂಗಮ ರಂಗ ಕಲಾವೇದಿಕೆ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಎಸ್‌.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾವೇರಿಯಡಾ.ಶ್ರೀಪಾದ ಭಟ್‌ ಧಾರೇಶ್ವರ ಅವರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

‘ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ದಂಧೆ ಮಾಡುತ್ತಾರೆಯೇ ಹೊರತು ನಿಮ್ಮ ಸೇವೆ ಮಾಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಬೆಂಗಳೂರಿನಿಂದ ಶೇ 70ರಷ್ಟು ರಾಜ್ಯಕ್ಕೆ ಆದಾಯ ಬರುತ್ತದೆ ಎನ್ನುತ್ತಾರೆ. ಆದರೆ ಬೆಂಗಳೂರು ಅಭಿವೃದ್ಧಿಗಾಗಿ ಶೇ 70ರಷ್ಟು ಹಣವನ್ನು ರಾಜ್ಯದ ಜನರ ಮೇಲೆ ತೆರಿಗೆ ಹೇರುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ರಂಗಭೂಮಿ ರಾಷ್ಟ್ರದ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಕರ್ನಾಟಕದ ವಿವಿಧ ಭಾಗದ ಸಾಧಕರನ್ನು ಗುರುತಿಸುವ ಇಲ್ಲಿಯ ಜನರ ಗುಣ ಮೆಚ್ಚುಬೇಕು’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿದ ರಂಗ ನಿರ್ದೇಶಕ ಡಾ. ಶ್ರೀಪಾದಭಟ್‌ ಮಾತನಾಡಿ, ‘ಸಂಕಟವನ್ನು ಸಂಭ್ರಮಿಸುವ ಗುಣ ನಾಟಕದಲ್ಲಿದೆ. ಅದನ್ನು ನಾವು ಅನುಭವಿಸಬೇಕು. ನಾನು ರಂಗಭೂಮಿಗೆ ಬಂದಿರುವುದು ಆಕಸ್ಮಿಕ. ಒಲವು ಸ್ನೇಹ, ಸಾಮರ್ಥ್ಯವನ್ನು ರಂಗಭೂಮಿಯಲ್ಲಿ ಮಾತ್ರ ಕಂಡುಕೊಳ್ಳಲು ಸಾಧ್ಯ. ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಯಿತು’ ಎಂದು ತಿಳಿಸಿದರು.

ನೃತ್ಯ ಹಾಗೂ ಯಕ್ಷರಂಗ ತಜ್ಞ ಸುಧೀರ್‌ರಾವ್‌, ಹಿರಿಯ ಸಾಹಿತಿ ಡಾ.ಸ್ವಾಮಿರಾವ್‌ ಕುಲಕರ್ಣಿ ಮಾತನಾಡಿದರು. ಸಿದ್ಧಾರ್ಥ ಡಿ. ಚಿಮ್ಮಾಇದಲಾಯಿ ಹಾಗೂ ಸಂಗಡಿಗರು ಗೀತ ಗಾಯನ ಪ್ರಸ್ತುತಪಡಿಸಿದರು.

ರಂಗ ಸಂಗಮ ಕಲಾ ವೇದಿಕೆಯ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ಸಂಘಟಕ ಎಚ್‌.ಎಸ್‌. ಬಸವಪ್ರಭು ಅವರು ದಿ.ಎಸ್‌.ಬಿ. ಜಂಗಮಶೆಟ್ಟಿ ಅವರ ಕುರಿತು ಮಾತನಾಡಿದರು. ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ನಿರೂಪಿಸಿದರು.

ರಂಗ ಸಂಗಮ ವೇದಿಕೆ ಅಧ್ಯಕ್ಷೆ ನಂದಾ ಕೊಲ್ಲೂರು, ರಂಗಾಯಣ ನಿರ್ದೇಶಕ ಮಹೇಶ ಪಾಟೀಲ, ರಂಗಸಂಗಮ ಅಧ್ಯಕ್ಷೆ ನಂದಾ ಕೊಲ್ಲೂರ ಮತ್ತು ಉಪನ್ಯಾಸಕ ಬಿ.ಎಚ್‌. ನಿರಗುಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.