ADVERTISEMENT

‘ಜಲಾಮೃತ’ ಅನುಷ್ಠಾನಕ್ಕೆ ಸಮಿತಿ ರಚನೆ

ಅಂತರ್ಜಲ ಹೆಚ್ಚಿಸುವುದು, ಜಲಸಂಗ್ರಹಣೆಗೆ ಒತ್ತು ನೀಡುವ ಯೋಜನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:34 IST
Last Updated 20 ಜುಲೈ 2019, 14:34 IST
ಜಿಲ್ಲಾ ಮಟ್ಟದ ಜಲಾಮೃತ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿದರು. ಉಪವಿಭಾಗಾಧಿಕಾರಿ ರಾಹುಲ್‌ ಪಾಂಡ್ವೆ, ಜಿ.ಪಂ. ಸಿಇಒ ಡಾ.ಪಿ.ರಾಜಾ ಇದ್ದಾರೆ
ಜಿಲ್ಲಾ ಮಟ್ಟದ ಜಲಾಮೃತ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿದರು. ಉಪವಿಭಾಗಾಧಿಕಾರಿ ರಾಹುಲ್‌ ಪಾಂಡ್ವೆ, ಜಿ.ಪಂ. ಸಿಇಒ ಡಾ.ಪಿ.ರಾಜಾ ಇದ್ದಾರೆ   

ಕಲಬುರ್ಗಿ: ರಾಜ್ಯ ಸರ್ಕಾರವು 2019ನೇ ವರ್ಷವನ್ನು ‘ಜಲ ವರ್ಷ’ ಎಂದು ಘೋಷಿಸಿದ್ದು, ಅದರಂತೆ ಜಲಾಮೃತ ಯೋಜನೆಗಳ ಅನುಷ್ಠಾನಕ್ಕಾಗಿ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಮಟ್ಟದಲ್ಲಿ ಜಲಾಮೃತ ಸಮಿತಿಯನ್ನು ರಚಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಇಲ್ಲಿ ಜಿಲ್ಲಾ ಮಟ್ಟದ ಜಲಾಮೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹಾಗೂ ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಕೃಷಿ, ಜಲಾನಯನ, ಸಣ್ಣ ನೀರಾವರಿ, ತೋಟಗಾರಿಕೆ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು, ಆಸಕ್ತ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು, ಪರಿಣತ ಜಲ ತಜ್ಞರು, ಪರಿಸರ ತಜ್ಞರು, ಪ್ರಗತಿಪರ ರೈತರು, ಸಾರ್ವಜನಿಕರು ಸೇರಿದಂತೆ ಒಟ್ಟು 9ರಿಂದ 15 ಸದಸ್ಯರನ್ನೊಳಗೊಂಡ ಸಮಿತಿ ರಚಿಸಬೇಕಾಗಿದೆ ಎಂದರು.

ADVERTISEMENT

ಜಲಮೂಲಗಳ ಪುನರುತ್ಥಾನ, ಕಾಲುವೆ ಮತ್ತು ಝರಿಗಳಿಗೆ ಪುನರ್ವಸತಿ ಕಲ್ಪಿಸುವುದು, ಚೆಕ್ ಡ್ಯಾಂ ಮತ್ತು ಸಣ್ಣ ಜಲಾಶಯಗಳ ನಿರ್ಮಾಣ, ಭೂ ಸಂರಕ್ಷಣೆ ಮತ್ತು ಜಲಚಲನೆಯನ್ನು ತಡೆಯುವುದು ಸೇರಿದಂತೆ ಒಟ್ಟಾರೆ ಅಂತರ್ಜಲ ಹೆಚ್ಚಿಸುವುದು ಮತ್ತು ನೀರು ಸಂಗ್ರಹಣೆಗೆ ಒತ್ತು ನೀಡುವುದೇ ಯೋಜನೆಯ ಮೂಲ ಉದ್ದೇಶ. ಶೇ 92ರಷ್ಟು ಒಣಭೂಮಿ ಹೊಂದಿರುವ ಬರದ ನಾಡು ಕಲಬುರ್ಗಿ ಜಿಲ್ಲೆಗೆ ಈ ಯೋಜನೆ ವರದಾನವಾಗಿದೆ. ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಜಲಾಮೃತ ಯೋಜನೆಗಳನ್ನು ಜನಾಂದೋಲನದ ರೂಪದಲ್ಲಿ ಅನುಷ್ಠಾನಗೊಳಿಸಬೇಕು. ನರೇಗಾ, ಕೃಷಿ ಭಾಗ್ಯ, ಕೆರೆ ಸಂಜೀವಿನಿ, ಹಸಿರು ಕರ್ನಾಟಕ ಯೋಜನೆಗಳ ಆರ್ಥಿಕ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ಈ ಯೋಜನೆ ಸಾಕಾರಗೊಳಿಸಬೇಕಾಗಿದೆ ಎಂದರು.

ಚೆಕ್‍ಡ್ಯಾಂಗೆ ನಾಲಾಗಳನ್ನು ಗುರುತಿಸಿ: ಗ್ರಾಮೀಣ ಭಾಗದಲ್ಲಿ ಬಹುಗ್ರಾಮಗಳಲ್ಲಿ ಹಾದು ನದಿಗಳಿಗೆ ಸೇರುವ ಸುಮಾರು 15–20 ಕಿ.ಮೀ. ಉದ್ದದ ನಾಲಾಗಳ ನಡುವೆ ನೀರು ಇಂಗುವಿಕೆ ಮತ್ತು ಸಂಗ್ರಹಣೆಗಾಗಿ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೂಡಲೇ ನಾಲಾಗಳನ್ನು ಗುರುತಿಸಿ 15 ದಿನದೊಳಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಾಲ್ಲೂಕುಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೋಸಗಾ ಕೆರೆ ಅಭಿವೃದ್ಧಿಗೆ ಪ್ರಸ್ತಾವ: ರಾಜ್ಯ ಸರ್ಕಾವು 2019–20ನೇ ಸಾಲಿನ ಬಜೆಟ್‌ನಲ್ಲಿ ಜಲಾಮೃತ ಯೋಜನೆಗೆ ಒಟ್ಟಾರೆ ₹ 100 ಕೋಟಿ ಅನುದಾನ ಮೀಸಲಿಟ್ಟಿದೆ. ಮೊದಲು ಪ್ರಸ್ತಾವ ಸಲ್ಲಿಸಿದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ಕಲಬುರ್ಗಿ ನಗರಕ್ಕೆ ಹೊಂದಿಕೊಂಡಿರುವ ಭೋಸಗಾ ಮತ್ತು ಖಾಜಾ ಕೋಟನೂರ ಕೆರೆಗಳ ಸಮಗ್ರ ಅಭಿವೃದ್ಧಿಗೆ 2 ದಿನದೊಳಗಾಗಿ ಲೈನ್ ಎಸ್ಟಿಮೇಟ್ ಪ್ರಸ್ತಾವ ಸಲ್ಲಿಸಬೇಕು ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ಅಂಬಲಗಿ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಸಿಇಒ ಡಾ.ಪಿ.ರಾಜಾ ಮಾತನಾಡಿ, ಗ್ರಾಮ ಮತ್ತು ತಾಲ್ಲೂಕು ಮಟ್ಟದಲ್ಲಿ ಕೂಡಲೇ ಜಲಾಮೃತ ಅನುಷ್ಠಾನ ಸಮಿತಿ ರಚಿಸಿ ವರದಿ ಸಲ್ಲಿಸಬೇಕು. ಜಿಲ್ಲೆಯಾದ್ಯಂತ 300 ಸರ್ಕಾರಿ ಕೊಳವೆಬಾವಿಗಳ ಜಲಮೂಲಗಳ ಪುನರುತ್ಥಾನಕ್ಕೆ ಈಗಾಗಲೆ ಅನುಮೋದನೆ ನೀಡಲಾಗಿದೆ. ಅವಶ್ಯವಿದ್ದಲ್ಲಿ ಇನ್ನು ಹೆಚ್ಚಿನ ಕೊಳವೆಬಾವಿಗಳ ಜಲಮೂಲ ಉತ್ತಮಗೊಳಿಸಲು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮಹಾದೇವ, ಉಪವಿಭಾಗಾಧಿಕಾರಿ ರಾಹುಲ್‌ ಪಾಂಡ್ವೆ, ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.