ADVERTISEMENT

ದೇವಲ ಗಾಣಗಾಪುರ: ಇಂದಿನಿಂದ ಜಾತ್ರಾ ಮಹೋತ್ಸವ

ಗೋಪಾಲ ಕಾವಲಿ, ಪಲ್ಲಕ್ಕಿ ಉತ್ಸವಕ್ಕೆ ದೇವಸ್ಥಾನ ಸಮಿತಿ ಭರ್ಜರಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:01 IST
Last Updated 1 ಫೆಬ್ರುವರಿ 2026, 6:01 IST
ನರಸಿಂಹ ಸರಸ್ವತಿ ಮಹಾರಾಜರು
ನರಸಿಂಹ ಸರಸ್ವತಿ ಮಹಾರಾಜರು   

ಅಫಜಲಪುರ: ತಾಲ್ಲೂಕಿನ ದೇವಲಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದಲ್ಲಿ ಮಾಘ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಾದ ಫೆ.1 ರಿಂದ 5ರವರೆಗೆ ಜಾತ್ರಾ ಮಹೋತ್ಸವ ಹಾಗೂ ವಿಶೇಷವಾಗಿ ಗೋಪಾಲ ಕಾವಲಿ (ಮೊಸರು ಗಡಿಗೆ ಒಡೆಯ) ಕಾರ್ಯಕ್ರಮ, ಪಲ್ಲಕ್ಕಿ ಉತ್ಸವಕ್ಕಾಗಿ ಈಗಾಗಲೇ ದೇವಸ್ಥಾನ ಸಮಿತಿಯವರು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ದೇವಸ್ಥಾನದ ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ್ ಪೂಜಾರಿ ಅವರು, ‘ಗೋಪಾಲ ಕಾವಲಿ ಹಾಗೂ ನರಸಿಂಹ ಸರಸ್ವತಿ ಪಲ್ಲಕ್ಕಿ ಉತ್ಸವ ನಿಮಿತ್ತ ಫೆ.5ರ ಗುರುವಾರ ಬೆಳಿಗ್ಗೆ ನಿರ್ಗುಣ ಪಾದುಕೆಗಳಿಗೆ ಕೇಸರ ಚಂದನ ಅತ್ತರ ಲೇಪನ ನಂತರ 6 ಗಂಟೆಗೆ ಮಹಾಮಂಗಳಾರತಿ, 10 ಗಂಟೆ ನೈವೇದ್ಯ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ಗೋಪಾಲ ಕಾವಲಿ ಉತ್ಸವ ಜರಗುವುದು’ ಎಂದರು.

‘ಮಧ್ಯಾಹ್ನ 12:30ಕ್ಕೆ ದತ್ತ ಮಹಾರಾಜರ ಹಾಗೂ ನರಸಿಂಹ ಸರಸ್ವತಿ ಅವರ ಬೆಳ್ಳಿ ಪಾದುಕೆಗಳು ಪಲ್ಲಕ್ಕಿ ಉತ್ಸವ ಜರುಗುಲಿದೆ. ದತ್ತ ದೇವಸ್ಥಾನದಿಂದ ಭೀಮಾ ನದಿಯಲ್ಲಿ ಇರುವ ರುದ್ರ ಪಾದ ತೀರ್ಥಕ್ಕೆ ಪಲ್ಲಕ್ಕಿ ಕೊಂಡೊಯ್ದು ಅಲ್ಲಿ ರುದ್ರ ಪಾದ ತೀರ್ಥದ ಮೇಲೆ ಪಲ್ಲಕ್ಕಿ ಇಡಲಾಗುತ್ತದೆ. ನಂತರ ನರಸಿಂಹ ಸರಸ್ವತಿ ಅವರ ಬೆಳ್ಳಿ ಪಾದುಕೆಗಳನ್ನು ರುದ್ರ ಪಾದ ತೀರ್ಥದಲ್ಲಿ ಸ್ನಾನ ಮಾಡಿಸಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತಮ್ಮ ಮಾಹಿತಿ ನೀಡಿ, ‘ದತ್ತಾತ್ರೇಯ ಮಹಾರಾಜರ ಜಾತ್ರಾ ಮಹೋತ್ಸವಕ್ಕಾಗಿ ಆಗಮಿಸಿರುವ ಯಾತ್ರಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಸರಳವಾಗಿ ಮಹಾರಾಜರ ದರ್ಶನ ಮಾಡಲು ಅನುಕೂಲ ಮಾಡಲಾಗಿದೆ. ಫೆ.5ರ ಗುರುವಾರ ನಡೆಯುವ ಗೋಪಾಲ ಕಾವಲಿ ಕಾರ್ಯಕ್ರಮ ವೀಕ್ಷಣೆ ಮಾಡಲು ಸೂಕ್ತ ರೀತಿಯಲ್ಲಿ ಅನುಕೂಲ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಸಂಗಮದಲ್ಲಿ ಪುಣ್ಯ ಸ್ನಾನ: ‘ದತ್ತಾತ್ರೇಯ ಮಹಾರಾಜರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಯಾತ್ರಿಕರಿಗಾಗಿ ಭೀಮಾ-ಅಮರ್ಜಾ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಯಾತ್ರಿಕರ ವಾಹನಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಂಗಮದಲ್ಲಿ ನೀರು ಸಾಕಷ್ಟು ಇರುವುದರಿಂದ ಯಾತ್ರಿಕರು ಜಾಗೃತೆಯಿಂದ ಸ್ನಾನ ಮಾಡಬೇಕು’ ಎಂದು ಸಂಗಮದ ಸ್ಥಾಪಕ ಮಡಿವಾಳಪ್ಪ ವಡಿಗೇರಿ ಮನವಿ ಮಾಡಿದರು.

ತ್ರಿಮೂರ್ತಿ ದತ್ತಾತ್ರೇಯ ಮಹಾರಾಜರು

Quote - 5 ದಿನಗಳವರೆಗೆ ನಡೆಯುವ ದತ್ತಾತ್ರೇಯ ಮಹಾರಾಜರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸರಳವಾಗಿ ದರ್ಶನ ಪಡೆಯಲು ಹಾಗೂ ಗೋಪಾಲ ಕಾವಲಿ (ಮೊಸರು ಗಡಿಗೆ ಒಡೆಯುವ) ಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ ಪ್ರಿಯಾಂಕ್‌ ಪೂಜಾರಿ ದೇವಸ್ಥಾನದ ಸಾಲಕಾರಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.