ADVERTISEMENT

ಕಾರ್ಪೊರೇಟ್ ಕಂಪನಿಗಳೇ ಬೇಸಾಯ ಬಿಟ್ಟು ತೊಲಗಿ: ಹೋರಾಟ

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:01 IST
Last Updated 11 ಆಗಸ್ಟ್ 2020, 4:01 IST
ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಗಳವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಗಳವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ‘ಕೇಂದ್ರ ಸರ್ಕಾರವು ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳ ಮೂಲಕ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ಮತ್ತು ರೈತ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ’ ಎಂದು ಆರೋಪಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತಿ ಮಾನಪಡೆ ಮಾತನಾಡಿ, ‘ರಾಜ್ಯ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ವರಮಾನ ಮತ್ತು ಬೃಹತ್ ಪ್ರಮಾಣದ ಉದ್ಯೋಗ ನಷ್ಟದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರಿಸಿರುವುದನ್ನು ನೋಡಿದರೆ ವಲಸೆ ಕಾರ್ಮಿಕರು ಲಾಕ್‌ ಡೌನ್ ಅವಧಿಯಲ್ಲಿ ಕಂಡಂತಹ ಮಾನವೀಯ ಬಿಕ್ಕಟ್ಟಿನ ಹೊರತಾಗಿಯೂ ಪಾಠ ಕಲಿತಿಲ್ಲವೆಂಬುವದು ವೇದ್ಯವಾಗುತ್ತದೆ’ ಎಂದರು.

‘ಕಾರ್ಮಿಕರ ಕಲ್ಯಾಣ ಮಂಡಳಿಗೆ ಹಣಕಾಸು ನೆರವು ನೀಡುವ ಬಗ್ಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಗೆ ನೀಡಿದ್ದ ಭರವಸೆ ಈಡೇರಿಸುವ ದಿಸೆಯಲ್ಲಿ ಸರ್ಕಾರ ಏನೂ ಮಾಡುತ್ತಿಲ್ಲ. ಸರ್ಕಾರವು ನೆಲಮಟ್ಟದಲ್ಲಿ ಜನರ ಬದುಕಿನ ಜೊತೆ ಸಂಪರ್ಕವನ್ನು ಸಂಪೂರ್ಣ ಕಳೆದುಕೊಂಡಿದೆ. ರಾಜ್ಯದಲ್ಲಿ ಕಾರ್ಮಿಕರು ಎರಡನೇ ದರ್ಜೆಯ ನಾಗರಿಕರಾಗಿದ್ದಾರೆ. ಅವರು ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನೆರವಿಗೆ ಅರ್ಹರಲ್ಲವೆ’ ಎಂದು ಪ್ರಶ್ನಿಸಿದರು.

ADVERTISEMENT

ನೂತನ ಶಿಕ್ಷಣ ನೀತಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಸಾರ್ವತ್ರಿಕ ಮೂಲ ವರಮಾನ ಯೋಜನೆ, ನಿರುದ್ಯೋಗ ಭತ್ಯೆ ಮತ್ತು ನಗರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮುಂತಾದ ವಿಷಯಗಳನ್ನು ಚರ್ಚಿಸಲು ಪಾರ್ಲಿಮೆಂಟ್, ರಾಜ್ಯ ವಿಧಾನಮಂಡಲಗಳ ವಿಶೇಷ ಅಧಿವೇಶನ ಕರೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೇಂದ್ರೀಯ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ, ಐಎನ್‌ಟಿಯುಸಿ, ಎನ್‌ಸಿಎಲ್, ರೈತ ಸಂಘಟನೆಗಳಾದ ಕೆಪಿಆರ್‌ಎಸ್‌, ಕೆಆರ್‌ಆರ್‌ಎಸ್, ಎಐಕೆಎಸ್‌, ಆರ್‌ಕೆಎಸ್‌, ವಿದ್ಯಾರ್ಥಿ ಸಂಘಟನೆಗಳಾದ ಎಐಡಿಎಸ್‌ಒ, ಎಐಎಸ್‌ಎಫ್, ಎಸ್‌ಎಫ್‌ನ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.