ಬಂಧನ
(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ತಾಲ್ಲೂಕಿನ ಬಸವಪಟ್ಟಣ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಕಂಬಕ್ಕೇ ನೇಣುಹಾಕಿಕೊಂಡು ಜೆಸ್ಕಾಂ ಗ್ರೇಡ್–2 ಮೆಕ್ಯಾನಿಕ್ ಪರಮೇಶ್ವರ ಚೊಬಚಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಫರಹತಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಜೆಸ್ಕಾಂ ಫರಹತಾಬಾದ್ ವಿಭಾಗದ ಜೆಇ ಮಾಣಿಕರಾವ್, ಜೆಸ್ಕಾಂ ಗುತ್ತಿಗೆದಾರ ಅಂಕುಶ, ಕಾರ್ಮಿಕ ನಾಗೇಶ ಬಂಧಿತರು.
‘ಪರಮೇಶ್ವರ ಅವರಿಗೆ ಕವಲಗಾ–ಕೆ, ಬಸವಪಟ್ಟಣ, ಅವರಾದ (ಕೆ) ಹಾಗೂ ಬೆಳಗುಂಪಾ (ಕೆ) ಗ್ರಾಮಗಳ ಹೊಣೆ ನೀಡಲಾಗಿತ್ತು. ನ.16ರಂದು ಕವಲಗಾ (ಕೆ) ಲೈನ್ ವೈರಿಂಗ್ ಕೆಲಸಕ್ಕಾಗಿ ಗುತ್ತಿಗೆದಾರ ಅನುಮತಿ ಕೇಳಿದ್ದರು. ಬಳಿಕ ವಿದ್ಯುತ್ ಕಂಬದ ಕೆಳಗಿನ ಕೆಲಸ ಮಾಡುವಂತೆ ಸೂಚಿಸಿ ಪರಮೇಶ್ವರ ಅನುಮತಿ ಕೊಟ್ಟಿದ್ದರು. ಬಳಿಕ ಗುತ್ತಿಗೆದಾರರ ಅನುಪಸ್ಥಿತಿಯಲ್ಲಿ ಕಾರ್ಮಿಕರು ಕುಡಿದ ಮತ್ತಿನಲ್ಲಿ ಕಂಬ ಏರಿ ಮೇಲಿಂದ ಬಿದ್ದು ಗಾಯಗೊಂಡಿದ್ದರು. ಅವರ ಆಸ್ಪತ್ರೆ ವೆಚ್ಚ ನೀಡುವಂತೆ ಜೆಸ್ಕಾಂ ಅಧಿಕಾರಿಯೂ ಸೇರಿದಂತೆ ಎಲ್ಲರೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದುಕೊಂಡು ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪರಮೇಶ್ವರ ಅವರ ಮಗ ಯಲ್ಲಾಲಿಂಗ ಚೊಬಚಿ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.