
ಜೇವರ್ಗಿ: ತಾಲ್ಲೂಕಿನ ಇಟಗಾ, ಜೇರಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಶಾಲೆಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ರಂಜಣಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿದ ಅವರು, ಅಡುಗೆ ಕೊಠಡಿಯ ಶುಚಿತ್ವ ಹಾಗೂ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ ಮಧ್ಯಾಹ್ನದ ಬಿಸಿಯೂಟ ಶಾಲಾ ಮಕ್ಕಳೊಂದಿಗೆ ಸವಿದರು. ಕೆಲಹೊತ್ತು ಮಕ್ಕಳೊಂದಿಗೆ ಕಾಲ ಕಳೆದು ಪಠ್ಯ ಹಾಗೂ ಪತ್ಯೇತರ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.
ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ವಿವಿಧ ಯೋಜನೆಗಳ ಕಡತ ಮತ್ತು ದಾಖಲೆಗಳನ್ನು ಪರಿಶೀಲಿಸಿದರು. ಅನುಷ್ಠಾನ ಹಂತದ ವಿವಿಧ ಕಾಮಗಾರಿ ವೀಕ್ಷಿಸಿದರು. ನಿರಂತರ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.
ಇಟಗಾ, ಅಂಕಲಗಾ, ಹುಲ್ಲೂರ, ಜೇರಟಗಿ, ನೇದಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರು. ಗ್ರಾಮದಲ್ಲಿನ ಪ್ರತಿ ಕುಟುಂಬಗಳಿಗೂ ನೀರು ಸರಬರಾಜು ಮಾಡಲು ಅವಶ್ಯಕವಿರುವ ಕಾಮಗಾರಿಗಳನ್ನು ಮಾರ್ಗಸೂಚಿ ಅನುಸಾರ ಮುಕ್ತಾಯಗೊಳಿಸಿ ಗ್ರಾಪಂಗೆ ಹಸ್ತಾಂತರ ಮಾಡುವಂತೆ ಸೂಚಿಸಿದರು.
ಪೈಪ್‌ಲೈನ್ ಅಳವಡಿಸಲು ಕತ್ತರಿಸಲಾಗಿರುವ ರಸ್ತೆ ಭಾಗವನ್ನು ಸರಿಯಾದ ರೀತಿಯಲ್ಲಿ ಮುಚ್ಚದಿರುವ ಕುರಿತು ಅನೇಕ ದೂರುಗಳು ಕೇಳಿಬರುತ್ತಿವೆ. ಎಂಜಿನಿಯರ್‌ಗಳು ಕೂಡಲೇ ಕ್ರಮ ತೆಗೆದುಕೊಂಡು ಪೈಪ್‌ಲೈನ್ ಅಳವಡಿಸಲು ಕತ್ತರಿಸಿರುವ ಭಾಗವನ್ನು ಮರುಪೂರಣಗೊಳಿಸಿ ವರದಿ ಸಲ್ಲಿಸಬೇಕು‘ ಎಂದರು.
ಗ್ರಾಮ ಪಂಚಾಯಿತಿ ನೀರುಗಂಟಿಗಳು ನೀರು ಸರಬರಾಜು ವಿತರಣಾ ಪೈಪ್‌ಗಳನ್ನು ಪ್ರತಿ ದಿನ ಪರಿಶೀಲಿಸಬೇಕು. ಕಲುಷಿತ ನೀರು ಸಾರ್ವಜನಿಕರಿಗೆ ಸರಬರಾಜು ಆಗದಂತೆ ಎಚ್ಚರಿಕೆ ವಹಿಸಬೇಕು.
ತಾಪಂ ಇಒ ರವಿಚಂದ್ರರೆಡ್ಡಿ ಲಕ್ಕುಂಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗುರುಶಾಂತಯ್ಯ ಗದ್ದಗಿಮಠ, ಶಾಖಾಧಿಕಾರಿ ಉದಯಕುಮಾರ, ನಿಂಗಣ್ಣ ಬಿರಾದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಲಿಂಗಪ್ಪ, ಪಿಡಿಒಗಳಾದ ಮಲ್ಕಣ್ಣ ಹುಲ್ಲೂರ, ರುದ್ರಯ್ಯ ಸ್ವಾಮಿ ಹಿರೇಮಠ, ಇಮ್ತಾಜಾ ಮಮದಾಪೂರ, ಶಿವಾನಂದ ಗೌಂಡಿ, ಮುದಿಗೌಡ ಗಿರಿ ಗೌಡರ್ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.