
ಜೇವರ್ಗಿ: ‘ಬಿಲ್ಲವ, ನಾಮಧಾರಿ ಸೇರಿದಂತೆ 26 ಉಪ ಪಂಗಡಗಳಿರುವ ಈಡಿಗ ಸಮುದಾಯ ಈ ರಾಜ್ಯದಲ್ಲಿ ಸರಿಸುಮಾರು 70 ರಿಂದ 80 ಲಕ್ಷ ಸಂಖ್ಯಾಬಲ ಹೊಂದಿದ್ದು, ನಿಗಮ ನೀಡುವುದಾಗಿ ಸರ್ಕಾರ ಭರವಸೆ ನೀಡಿ, ಮಾತು ತಪ್ಪಿದೆ’ ಎಂದು ತೆಲಂಗಾಣದ ಮಾಜಿಸಚಿವ ಶ್ರೀನಿವಾಸಗೌಡ ಆರೋಪಿಸಿದರು.
ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಕರದಾಳದಿಂದ ಬೆಂಗಳೂರುವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಣವಾನಂದ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆಯ ಬಹಿರಂಗ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಮೊದಲಿನಿಂದಲೂ ಸಾಮಾಜಿಕ, ಶೈಕ್ಷಣಿಕವಾಗಿ ಈಡಿಗ ಸಮುದಾಯ ತುಳಿತಕ್ಕೊಳಗಾಗುತ್ತಿದೆ. ಈಡಿಗರು ವಿಶಾಲ ಮನೋಭಾವ ಹೊಂದಿರುವವರು. ಬೇರೆ ರಾಜ್ಯಗಳಲ್ಲಿ ಬೇರೆ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಅನೇಕ ಮಹನೀಯರು ಈ ಸಮುದಾಯದಿಂದ ಬಂದು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ತೆಲಂಗಾಣದಲ್ಲಿ ಅಬಕಾರಿ ಸಚಿವನಾಗಿ ಈಡಿಗ ಸಮುದಾಯ ಸೇರಿದಂತೆ ಹಿಂದುಳಿದ ವರ್ಗದವರ ಏಳ್ಗೆಗೆ ಸಾಕಷ್ಟು ಶ್ರಮಿಸಲಾಗಿದೆ. ಹೈದರಾಬಾದ್‌ನಲ್ಲಿ ₹300 ಕೋಟಿ ವೆಚ್ಚದ ಗೌಡಭವನ ನಿರ್ಮಾಣ, ಹಿಂದುಳಿದ ವರ್ಗದ ಸಂತರ ದಾರ್ಶನಿಕರ ಪುತ್ಥಳಿ ಅನಾವರಣ ಸೇರಿದಂತೆ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಈ ಸಮುದಾಯವನ್ನು ಕಡೆಗಣಿಸಲಾಗಿದೆ’ ಎಂದು ಹೇಳಿದರು.
ಪಾದಯಾತ್ರೆ ನೇತೃತ್ವ ವಹಿಸಿದ್ದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಬಿಡುಗಡೆ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತ ಈಡಿಗರ ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ಮಂಜೂರು ಮಾಡಬೇಕು. ಈಡಿಗ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ವಿಧಾನಸೌಧದ ಎದುರು ನಾರಾಯಣಗುರು ಪುತ್ಥಳಿ ನಿರ್ಮಾಣ ಮಾಡಬೇಕು. ಮದ್ಯ ಮಾರಾಟದಲ್ಲಿ ಈಡಿಗ ಸಮುದಾಯಕ್ಕೆ ಶೇ 50ರಷ್ಟು ಮೀಸಲಾತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಈಡಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ’ ಎಂದರು.
ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗರಾಜ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಭಗೀರಥ ಸ್ವಾಮೀಜಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ, ಸಂತೋಷ ಗುತ್ತೇದಾರ ಆಳಂದ, ಮಹೇಶ ಗುತ್ತೇದಾರ ಸೇರಿದಂತೆ ಹಲವರು ಹಾಜರಿದ್ದರು.
ಶುಕ್ರವಾರ ಪಟ್ಟಣದಿಂದ ಆರಂಭವಾಗುವ ನಾಲ್ಕನೇ ದಿನದ ಪಾದಯಾತ್ರೆ ಮುದಬಾಳ ಗ್ರಾಮದವರೆಗೆ ಸಾಗಿ ವಾಸ್ತವ್ಯ ಮಾಡಲಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆಯು ಮೂರನೇಯ ದಿನವಾದ ಗುರುವಾರ ಬೆಳಿಗ್ಗೆ ಶಹಾಬಾದದಿಂದ ಶುರುವಾಯಿತು. ನಾರಾಯಣಗುರು ಪ್ರತಿಮೆ ಹೊತ್ತ ಸಾರೋಟಿನೊಂದಿಗೆ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಗುರುವಾರ ಸಂಜೆ ಜೇವರ್ಗಿ ಪಟ್ಟಣ ತಲುಪಿತು. ಪಾದಯಾತ್ರೆ ಪಟ್ಟಣದ ರಿಲ್ಯಾಯನ್ಸ್ ಪೆಟ್ರೋಲ್ ಬಂಕ್ ತಲುಪುತ್ತಿದ್ದಂತೆ ನೂರಾರು ಜನ ಈಡಿಗ ಸಮಾಜದ ಬಾಂಧವರು ಅದ್ದೂರಿ ಸ್ವಾಗತ ಕೋರಿದರು. ಪಟ್ಟಣದ ಅಖಂಡೇಶ್ವರ ವೃತ್ತದ ಮೂಲಕ ಸಜ್ಜನ ಕಲ್ಯಾಣ ಮಂಟಪದ ವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಇಂದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.