ಜೇವರ್ಗಿ: ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದ ವರೆಗೆ ಸುರಿದ ಭಾರಿ ಮಳೆ, ತಾಲ್ಲೂಕಿನಾದ್ಯಂತ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಹೊಲ, ಮನೆಗಳಲ್ಲಿ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ದಿನ ಬಳಕೆಯ ವಸ್ತುಗಳು ಸೇರಿದಂತೆ ವಿವಿಧ ಸಾಮಗ್ರಿಗಳು ನೀರು ಪಾಲಾಗಿವೆ.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಪಕ್ಕದ ಜೋಪಡಪಟ್ಟಿ ಬಡಾವಣೆ, ಷಣ್ಮುಖ ಶಿವಯೋಗಿಗಳ ವಿರಕ್ತಮಠದ ಆವರಣ, ಷಣ್ಮುಖ ಶಿವಯೋಗಿ ಪ್ರೌಢಶಾಲೆ, ಬುಗ್ಗಿ ಬಡಾವಣೆ, ಜೇವರ್ಗಿ ಕೆ. ಬಡಾವಣೆ, ಮೌನೇಶ್ವರ ಕಾಲೊನಿ ಬಡಾವಣೆಯ ಮನೆಗಳಲ್ಲಿ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.
ಹಳ್ಳದ ಪ್ರವಾಹದಿಂದ ಜೇವರ್ಗಿ-ಗೌನಳ್ಳಿ ಗ್ರಾಮಕ್ಕೆ ತೆರಳುವ ಬ್ರಿಡ್ಜ್ ಮುಳುಗಡೆಯಾಗಿ ಸಂಚಾರ ಬಂದ್ ಮಾಡಲಾಗಿದೆ. ಪಟ್ಟಣದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯ ನೀರಿನೊಂದಿಗೆ ಒಳಚರಂಡಿ ತ್ಯಾಜ್ಯ ಮನೆಗಳಲ್ಲಿ ನುಗ್ಗಿದೆ.
ಪಟ್ಟಣದ ಜೋಪಡಪಟ್ಟಿ ಬಡಾವಣೆಯಲ್ಲಿ 250ಕ್ಕೂ ಹೆಚ್ಚು ಮನೆಗಳಲ್ಲಿ ಹಳ್ಳದ ನೀರು ಹೊಕ್ಕು ದಿನಸಿ ಸಾಮಗ್ರಿ ಹಾಳಾಗಿದೆ. ಅಖಂಡೇಶ್ವರ ವೃತ್ತದ ಬಳಿ ಪುರಸಭೆ ಮಳಿಗೆಯ ನೆಲ ಮಹಡಿಯಲ್ಲಿ ನೀರು ನಿಂತು ವರ್ತಕರು ಪರದಾಡಿದರು. ಹತ್ತಕ್ಕೂ ಹೆಚ್ಚು ರಸಗೊಬ್ಬರ ಅಂಗಡಿಗಳಲ್ಲಿ ನೀರು ನಿಂತು ಲಕ್ಷಾಂತರ ಮೌಲ್ಯದ ಬೀಜ, ಗೊಬ್ಬರ ಹಾಳಾಗಿದೆ.
ತಾಲ್ಲೂಕಿನ ಗಂವ್ಹಾರ, ಆಂದೋಲಾ, ನೆಲೋಗಿ, ಮುದಬಾಳ ಬಿ., ಬಿರಾಳ ಬಿ., ಬಿರಾಳ ಕೆ., ಮಲ್ಲಾ, ಕಟ್ಟಿಸಂಗಾವಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೆಳೆಗಳು ಜಲಾವೃತಗೊಂಡಿವೆ. ತೊಗರಿ, ಹತ್ತಿ ಬೆಳೆಗಳಲ್ಲಿ ನೀರು ನಿಂತು ಕೊಳೆಯುತ್ತಿವೆ. ಹೆಸರು ಬೆಳೆ ಹೊಲದಲ್ಲಿಯೇ ಕೊಳೆತು ಹೋಗಿದೆ.
ಬುಧವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಯಾಳವಾರ-2, ಚಿಗರಹಳ್ಳಿ-1, ಗುಡೂರ ಎಸ್.ಎನ್-2, ಬಿಲ್ಲಾಡ-1, ಮಯೂರ-1, ಬದನಿಹಾಳ-2, ನೇದಲಗಿ-1, ಹಿಪ್ಪರಗಾ ಎಸ್.ಎನ್-1, ಕಲ್ಲೂರ.ಕೆ-2, ರಂಜಣಗಿ-2, ಕೂಡಲಗಿ-2, ರಾಸಣಗಿ-2, ಕೆಲ್ಲೂರ-1, ಕೋಬಾಳ-1 ಮನೆಗಳು ಕುಸಿದುಬಿದ್ದಿವೆ.
ಆಂದೋಲಾ ಗ್ರಾಮದಲ್ಲಿ ಮಳೆಗೆ 21 ಕುರಿಗಳು ಸಾವನಪ್ಪಿವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿಯೇ ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚು 149.5 ಮಿ.ಮೀ ಮಳೆಯಾಗಿರುವ 3ನೇ ತಾಲ್ಲೂಕು ಎಂದು ವರದಿಯಾಗಿದೆ.
ನರಿಬೋಳ ಬೇಟಿ: ಪಟ್ಟಣದ ಜೋಪಡಪಟ್ಟಿ, ಬುಗ್ಗಿ ಬಡಾವಣೆಗೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಹಾನಿಯಾದ ಮನೆಗಳ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ಭೇಟಿ ಜೇವರ್ಗಿ ಪಟ್ಟಣದ ವಿವಿಧ ಬಡಾವಣೆಗಳಿಗೆ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೋಪಡಪಟ್ಟಿ ಜೇವರ್ಗಿ ಕೆ. ಖಾಜಾ ಕಾಲೊನಿ ಬುಗ್ಗಿ ಏರಿಯಾ ವಿದ್ಯಾನಗರ ಬಡಾವಣೆಯಲ್ಲಿ ಮಳೆಯಿಂದ ಹಾನಿಯಾದ ಮನೆಗಳ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು. ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಮೇಶ ಶರ್ಮಾ ವೈದ್ಯಾಧಿಕಾರಿ ಡಾ.ಸುರೇಶ ಮೇಕಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.