ಜೇವರ್ಗಿ: ಸಾರ್ವಜನಿಕ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನಿರ್ಮಿಸಲಾದ ಟೌನ್‌ಹಾಲ್ ಹೆಸರಿಗೆ ಮಾತ್ರವಿದ್ದು, ಮೂಲಸೌಕರ್ಯ ವಿಲ್ಲದೆ ಇದನ್ನು ಬಳಸುವರ ಸಂಖ್ಯೆ ಗಣನೀಯ ಕಡಿಮೆಯಾಗಿದೆ.
2015-16ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹1.96 ಕೋಟಿ ವೆಚ್ಚದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರಿ ನಿರ್ಮಿಸಲಾಗಿರುವ ಟೌನ್‌ಹಾಲ್ ಕಟ್ಟಡಕ್ಕೆ, 2017 ಮಾರ್ಚ 17ಕ್ಕೆ ಅಡಿಗಲ್ಲು ನೆರವೇರಿಸಿ, 2018 ಫೆಬ್ರುವರಿ 5ಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗಿದೆ.
2021-22ರಲ್ಲಿ ಕೆಕೆಆರ್‌ಡಿಬಿ ₹50 ಲಕ್ಷ ಅನುದಾನ ನೀಡಿದ್ದು, ಬಾಕಿ ಕಾಮಗಾರಿ, ಪೀಠೋಪಕರಣ ಹಾಗೂ ಕಂಪೌಂಡ್ ಗೋಡೆ ನಿರ್ಮಾಣ ಮಾಡಲಾಗಿದೆ. ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾಗಿರುವ ಟೌನ್‌ಹಾಲ್ ಆಡಳಿತವನ್ನು ಪುರಸಭೆಗೆ ಹಸ್ತಾಂತರಿಸಿ ಎರಡ್ಮೂರು ವರ್ಷ ಕಳೆದಿದೆ. ಆದರೂ ಸಮಸ್ಯೆಗಳಿಗೆ ಪರಿಹಾರ ಸಿಗದೆ ಕಟ್ಟಡ ಉಪಯೋಗಿಸುವವರು ಸಂಕಷ್ಟ ಅನುಭವಿಸುವಂತಾಗಿದೆ.
ಟೌನ್‌ಹಾಲ್ ಜಿಟಿಜಿಟಿ ಮಳೆಗೆ ಸೋರಲು ಆರಂಭಿಸಿದೆ. ‘ಬಾಹರ್ ಶೇರವಾನಿ ಅಂದರ್ ಪರೇಶಾನಿ’ ಎಂಬ ಮಾತಿನಂತೆ ಕಟ್ಟಡ ಹೊರಗೆ ನೋಡಲು ಅದ್ಭುತವಾಗಿದ್ದು, ಒಳಗೆ ಕಾಲಿಟ್ಟರೇ ಸಾಕು ಧೂಳು ಹಿಡಿದಿರುವ ಆಸನಗಳು, ಕಿತ್ತು ಹೋಗಿರುವ ತಾತ್ಕಾಲಿಕ ಮೇಲ್ಛಾವಣಿ, ಒಡೆದ ಕಿಡಕಿ ಗ್ಲಾಸ್‌ಗಳು, ಕಟ್ಟಡದ ಸುತ್ತ ಬೆಳೆದ ಹುಲ್ಲು-ಜಾಲಿ ಕಂಟಿಗಳು ಕಟ್ಟಡದ ಅಂದವನ್ನೇ ಹಾಳು ಮಾಡಿದೆ.
ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶ, 50-700 ಜನರ ಆಸನ ಸಾಮರ್ಥ್ಯದ ಸಭಾಂಗಣ ಹೊಂದಿದ್ದರೂ ಮಳೆಗಾಲದಲ್ಲಿ ಕಟ್ಟಡ ಸೋರುವುದು, ಮೂಲ ಸೌಕರ್ಯದ ಕೊರತೆಯಿಂದ ಕಾರ್ಯಕ್ರಮ ನಡೆಸಲು ಸಂಘಟಕರು ಹಿಂದೇಟು ಹಾಕುತ್ತಿದ್ದಾರೆ.
‘ಪುರಸಭೆಯಿಂದ ಟೌನ್‌ಹಾಲ್ ಬಾಡಿಗೆಗೆ ನೀಡಲಾಗುತ್ತಿದೆ. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ ಇಲ್ಲಿ ಕಡಿಮೆ ಕಾರ್ಯಕ್ರಮ ನಡೆಯುವಂತಾಗಿದೆ. ಹೆಚ್ಚಿನ ಅನುದಾನ ಒದಗಿಸಿ ಮೂಲ ಸೌಕರ್ಯ ಕಲ್ಪಿಸಿ, ಉತ್ತಮ ನಿರ್ವಹಣೆ ಮಾಡಬೇಕು’ ಎನ್ನುತ್ತಾರೆ ಇಲ್ಲಿನ ಸ್ಥಳಿಯರು.
‘ಮೂಲ ಸೌಕರ್ಯ ಕಲ್ಪಿಸಿ’
‘ಟೌನ್‌ಹಾಲ್‌ನಲ್ಲಿ ಶೌಚಾಲಯ ಕೈ ತೊಳೆಯುವ ಬೇಸಿನ್ ವ್ಯವಸ್ಥೆ ಸರಿಯಿಲ್ಲ. ಊಟಕ್ಕೆ ಪ್ರತ್ಯೇಕ ಹಾಲ್ ಕೊರತೆ. ಕೆಟ್ಟು ನಿಂತಿರುವ ಬಹುತೇಕ ಫ್ಯಾನ್‌ಗಳು ಪರದೆ ವ್ಯವಸ್ಥೆ ಜನರೇಟರ್ ಹ್ಯಾಲೋಜನ್ ಲೈಟ್ ಆಧುನಿಕ ಮಾದರಿಯ ಆಸನ ಅಳವಡಿಕೆ ಮೇಜು ಟೀಪಾಯಿ ಏಣಿ ವ್ಯವಸ್ಥೆ ಒದಗಿಸಬೇಕು. ಪುರಭವನದ ಮುಂಭಾಗ ಇಂಟರ್‌ಲಾಕ್ ಅಳವಡಿಸುವುದು ಗಾರ್ಡನ್ ನಿರ್ಮಾಣ ಮಾಡಿದರೆ ಹೆಚ್ಚಿನ ಕಾರ್ಯಕ್ರಮ ನಡೆಯಬಹುದು’ ಎಂಬುದು ಕಾರ್ಯಕ್ರಮ ಸಂಘಟಕರ ಅನಿಸಿಕೆ. ‘ಪ್ರಸ್ತುತ ದಿನಕ್ಕೆ ₹5000 ಬಾಡಿಗೆ ನಿಗದಿ ಮಾಡಲಾಗಿದೆ. ಆದರೆ ಮದುವೆ ಕಾರ್ಯಕ್ರಮ ಹೊರತಾದ ಸಭೆ-ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಿಯಾಯಿತಿ ನೀಡಬೇಕು’ ಎಂಬುದು ಕಲಾವಿದರ ಬೇಡಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.