ಜೇವರ್ಗಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಿದ್ದು, ಅವುಗಳ ಆಕ್ರಮಣಕಾರಿ ಸ್ವಭಾವವು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ನಾಯಿ ದಾಳಿ ಪ್ರಕರಣಗಳೂ ಹೆಚ್ಚುತ್ತಿವೆ. ಈಚೆಗೆ ಕುರಿಯ ಮೇಲೆ ಗುಂಪು ದಾಳಿ ನಡೆಸಿ ಕೊಂದು ಹಾಕಿರುವುದು ತಾಜಾ ಉದಾಹರಣೆಯಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಪಟ್ಟಣದ ರಸ್ತೆಗಳಲ್ಲಿ ಹತ್ತಾರು ಬೀದಿ ನಾಯಿಗಳ ಹಿಂಡು ನೆರೆದಿರುತ್ತದೆ. ಕೆಲವರು ತಮ್ಮ ಸಾಕು ನಾಯಿಗಳನ್ನೂ ಕೂಡ ಬೀದಿಯಲ್ಲಿ ಬಿಡುತ್ತಾರೆ. ಹೀಗಾಗಿ ಮನುಷ್ಯರು ರಸ್ತೆಯಲ್ಲಿ ನಡೆದುಕೊಂಡು ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಲೆಗೆ ಹೋಗುವ ಮಕ್ಕಳನ್ನು ಅಟ್ಟಾಡಿಸುವುದು, ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟಿ ಮೇಲೆ ದಾಳಿ ನಡೆಸುವ ಘಟನೆಗಳು ಹೆಚ್ಚುತ್ತಿವೆ. ಮನೆಯವರು ಮಕ್ಕಳನ್ನು ಪಕ್ಕದಲ್ಲಿರುವ ಅಂಗಡಿಗೆ ಕಳುಹಿಸಬೇಕಾದರೂ ಹತ್ತಾರು ಬಾರಿ ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅವರನ್ನು ಶಾಲೆಗೆ ಒಬ್ಬೊಬ್ಬರಾಗಿ ಕಳುಹಿಸುವುದಕ್ಕೂ ಸಾಧ್ಯವಾಗದೆ ಸಂಕಷ್ಟ ಅನುಭವಿಸುವಂತಾಗಿದೆ. ಹಲವು ಕಡೆಗಳಲ್ಲಿ ಹೆತ್ತವರು ಜತೆಗೆ ಹೋಗಿಯೇ ಶಾಲೆಗೆ ಮಕ್ಕಳನ್ನು ಬಿಟ್ಟು ಬರುತ್ತಿದ್ದಾರೆ. ಬೆಳಿಗ್ಗೆ ವಾಕಿಂಗ್‌ಗೆ ತೆರಳುವವರ ಕೈಯಲ್ಲಿ ಕಡ್ಡಾಯವಾಗಿ ಕೋಲು ಹಿಡಿದುಹೋಗುವ ಅಭ್ಯಾಸ ರೂಢಿಯಾಗಿದೆ.
ಪಟ್ಟಣದ ಖಾಜಾ ಕಾಲೊನಿ, ಲಕ್ಕಪ್ಪ ಲೇಔಟ್, ವಿದ್ಯಾನಗರ, ಕನಕದಾಸ ವೃತ್ತ, ಜಗಜೀವನರಾಂ ಬಡಾವಣೆ, ಲಕ್ಷ್ಮೀ ಚೌಕ, ಜೋಪಡಪಟ್ಟಿ ಬಡಾವಣೆಗಳಲ್ಲಿ ಹಾಗೂ ಮುಖ್ಯ ಹೆದ್ದಾರಿ ಸೇರಿದಂತೆ ವಿವಿಧೆಡೆ ಬೀದಿ ನಾಯಿಗಳ ಹಿಂಡು ಕಾಣ ಸಿಗುತ್ತದೆ. ಅಡ್ಡ ಬರುವ ಬೀದಿ ನಾಯಿಗಳಿಂದಾಗಿ ದ್ವಿಚಕ್ರ ಸವಾರರು ಅಪಘಾತದಲ್ಲಿ ಸಿಲುಕಿ ಒದ್ದಾಟ ಅನುಭವಿಸುತ್ತಿದ್ದು, ಅಂಗವೈಕಲ್ಯಕ್ಕೂ ತುತ್ತಾಗುತ್ತಿದ್ದಾರೆ. ಖಾಜಾ ಕಾಲೊನಿ ಬಡಾವಣೆಯಲ್ಲಿ ತ್ಯಾಜ್ಯ ರಾಶಿಯೊಂದರ ಬಳಿ ನಿತ್ಯವೂ ಕಾಣ ಸಿಗುವ ಬೀದಿ ನಾಯಿಗಳು ಕುರಿಗಳನ್ನು ಕಚ್ಚಿ ಕೊಂದು ಹಾಕಿದ ಘಟನೆ ಕಳೆದ ತಿಂಗಳು ನಡೆದಿದೆ ಎಂದು ಬಡಾವಣೆಯ ನಾಗರಿಕರು ಆರೋಪಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಮಾಡಿದ ಬಳಿಕ ನಾಯಿಗಳಿಗೆ ಆಹಾರ ಸಿಗದಿರುವ ಸಂದರ್ಭದಲ್ಲಿ ದನ ಹಾಗೂ ಕುರಿಗಳ ಮೇಲೆರಗಿ ಕೊಂದು ಹಾಕಿದ್ದಲ್ಲದೆ ಮಾಂಸ ಭಕ್ಷಣೆಗೆ ಯತ್ನಿಸಿರುವ ಘಟನೆಗಳು ನಡೆದಿವೆ. ಖಾಜಾ ಕಾಲೊನಿಯಲ್ಲಿ ವಾರದಲ್ಲಿ ಮೂರು ಕುರಿಗಳು ನಾಯಿ ದಾಳಿಗೆ ಬಲಿಯಾಗಿವೆ. ಈ ಕುರಿತು ಖಾಜಾ ಕಾಲೊನಿ ಬಡಾವಣೆಯ ನಿವಾಸಿಗಳು ಪುರಸಭೆಗೆ ನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಮನವಿ ಪತ್ರ ನೀಡಿದ್ದಾರೆ.
ಬೀದಿ ನಾಯಿಗಳಿಂದ ದಾಳಿಯಾದಾಗ ಯಾರೂ ಇರುವುದಿಲ್ಲ. ನಾಯಿಗಳಿಗೆ ಸಮಸ್ಯೆಯಾದಾಗ ಕೇಳಲು ಹಲವರು ಮುಂದೆ ಬರುತ್ತಾರೆ ಎನ್ನುವುದು ನಾಗರಿಕರ ಆಕ್ರೋಶ. ಪ್ರತಿ ವರ್ಷ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಮತ್ತು ಶಸ್ತ್ರ ಚಿಕಿತ್ಸೆ ಮಾಡಲು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಪಾಲನೆ ಎಷ್ಟಾಗುತ್ತಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಮಾತ್ರ ಅವುಗಳ ಸಂಖ್ಯೆ ಹಾಗೂ ರೇಬಿಸ್ ರೋಗ ತಡೆಗಟ್ಟಲು ಸಾಧ್ಯ ಎನ್ನುತ್ತಾರೆ ನಾಗರಿಕರು.
ನಾಯಿಗಳ ಹಾವಳಿ ಕುರಿತು ದೂರು ನೀಡಿದರೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಚೆಗೆ ನಮ್ಮ ಕುರಿ ಮೇಲೆ ಗುಂಪು ದಾಳಿ ನಡೆಸಿ ಕೊಂದು ಹಾಕಿವೆ. ನಾಯಿಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದುರುಕುಂ ಪಟೇಲ ನಿವಾಸಿ
ಬೀದಿನಾಯಿಗಳು ಕುರಿಗಳನ್ನು ತಿಂದು ಹಾಕಿರುವ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಅಂತಹ ಘಟನೆ ಜರುಗಿದ್ದರೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದುಶಂಭುಲಿಂಗ ದೇಸಾಯಿ ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.