ಜೇವರ್ಗಿ: ‘ಮನುಷ್ಯನಲ್ಲಿ ಭಕ್ತಿಯಿದ್ದರೆ ಸಾಕು. ಒಳ್ಳೆಯ ಮನಸ್ಸಿನಿಂದ ಪೂಜಿಸಿದರೆ, ದೇವರು ಒಲಿಯುತ್ತಾನೆ. ಒಳ್ಳೆಯತನ ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ’ ಎಂದು ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಸಿದ್ದತೋಟೇಂದ್ರ ಶಿವಾಚಾರ್ಯರು ತಿಳಿಸಿದರು.
ತಾಲ್ಲೂಕಿನ ಕಟ್ಟಿಸಂಗಾವಿಯ ಭೀಮಾ ಬ್ರಿಡ್ಜ್ ಹತ್ತಿರದ ಬಸಯ್ಯ ತಾತನವರ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಧರ್ಮಸಭೆಯ ಸಾನ್ನಿದ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಮನುಷ್ಯನಿಗೆ ಹಸಿವಾದಾಗ ಆಹಾರ ಸೇವಿಸುತ್ತಾನೆ. ಹಾಗೆಯೇ ಆತ್ಮ ಮತ್ತು ಮನಸ್ಸಿಗೆ ಹಸಿವಾದಾಗ ಶಾಂತಿ ಸಿಗಬೇಕಾದರೆ ಧಾರ್ಮಿಕ ಕಾರ್ಯಗಳು ನಡೆಯಬೇಕು. ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ನಮ್ಮ ಕೆಲಸಗಳು ನಿರ್ವಿಘ್ನದಿಂದ ಸಾಗುತ್ತವೆ. ಒಳ್ಳೆಯ ವಿಚಾರಗಳನ್ನು ಸ್ವೀಕರಿಸುವುದರಿಂದ ಜೀವನ ಪಾವನವಾಗುತ್ತದೆ. ಭಗವಂತನ ಆರಾಧನೆಯಿಂದ ನಮಗೆ ಯಶಸ್ಸು ದೊರೆಯುತ್ತದೆ. ಭಗವಂತನ ಆರಾಧನೆಯಂತೆ ಪ್ರಕೃತಿ ಆರಾಧನೆಯೂ ಮುಖ್ಯವಾಗುತ್ತದೆ. ಸಮಾಜದಲ್ಲಿನ ಜನರು ಅಹಂ ತೊರೆದು ಪ್ರೀತಿ, ವಿಶ್ವಾಸ, ಭಕ್ತಿಯಿಂದ ಪೂಜೆ ಮತ್ತು ದಾಸೋಹ ಪರಂಪರೆಯನ್ನು ನಡೆಸಿದರೆ ಬದುಕಿಗೆ ಬೆಲೆ ಬರುತ್ತದೆ’ ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರಭು ಬಸಯ್ಯ ತಾತನವರ ರಥೋತ್ಸವದಲ್ಲಿ ಸಹಸ್ರ ಭಕ್ತರು ಭಾಗವಹಿಸಿ, ಭಕ್ತಿಭಾವಗಳಲ್ಲಿ ಜಯ ಘೋಷ ಮೊಳಗಿಸಿದರು.
ಹೊನ್ನಕಿರಣಗಿ ರಾಚೋಟೇಶ್ವರ ಮಠದ ಚಂದ್ರಗುಂಡ ಶಿವಾಚಾರ್ಯರು, ರೋಜಾ ಹಿರೇಮಠದ ಕೆಂಚ ವೃಷಭೇಂದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಶೋಕ ಸಾಹುಗೋಗಿ, ಆನಂದಕುಮಾರ ಮದರಿ, ಬಸಯ್ಯಸ್ವಾಮಿ ಹಿರೇಮಠ, ಮಲ್ಲಯ್ಯ ಸ್ವಾಮಿ ವಡಗೇರಿ, ದೇವೇಂದ್ರಪ್ಪ ಗoವ್ಹಾರ, ಶಿವರಾಜ ನಾಯ್ಕೋಡಿ, ಮಹಾದೇವ ಗoವಾರ ಮುಂತಾದವರು ಉಪಸ್ಥಿತರಿದ್ದರು.
ರಥೋತ್ಸವಕ್ಕೂ ಮುನ್ನ ನಾಲವಾರ ಶ್ರೀಗಳನ್ನು ಭಕ್ತರು ಪೂರ್ಣ ಕುಂಭಕಳಸ, ಕನ್ನಡಿ, ಡೊಳ್ಳು, ಹಲಿಗೆ ವಾದ್ಯಗಳ ಮೂಲಕ ಬರಮಾಡಿಕೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.