ಜೇವರ್ಗಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಾಲೆಯ ಆವರಣದಲ್ಲಿ ನೀರು ನಿಂತುಕೊಂಡಿದ್ದು, ಮಕ್ಕಳು ಶಾಲೆಗೆ ಹೋಗಲಾಗದೆ ಪರದಾಡುವ ಸ್ಥಿತಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗಿದೆ.
ಪಟ್ಟಣದ ಜೆಸ್ಕಾಂ ಕಚೇರಿಯ ಎದುರು ಹೆದ್ದಾರಿ ಮೇಲಿರುವ ಈ ಶಾಲೆಯ ಆವರಣದಲ್ಲಿ ಮಳೆ ನೀರು ನಿಂತು ಹುಲ್ಲು ಬೆಳೆದು ವಿಷ ಜಂತುಗಳ ಹಾವಳಿ ಕಾಡುತ್ತಿದೆ. ನಿಂತ ನೀರಿನಲ್ಲಿ ಪಾಚಿ ಕಟ್ಟಿದ್ದು, ದುರ್ವಾಸನೆ ಬರತೊಡಗಿದೆ. ಮಕ್ಕಳು ಪ್ರತಿದಿನ ಆತಂಕದಲ್ಲೇ ಶಾಲೆಗೆ ಬರುವಂತ್ತಾಗಿದೆ.
ಸೋರುತ್ತಿರುವ ಕಟ್ಟಡದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದು, ಭಯದಲ್ಲಿಯೇ ಪಾಠ ಕೇಳಬೇಕಾದ ಸ್ಥಿತಿಯೂ ಮಕ್ಕಳಿಗೆ ಬಂದಿದೆ. ಒಂದರಿಂದ ಏಳನೇಯ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಒಟ್ಟು 192 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಮಕ್ಕಳು ಶಾಲೆಗೆ ಬರಲು ಹಿಂದೆಟು ಹಾಕುವಂತ ಸ್ಥಿತಿ ಎದುರಾಗಿದೆ.
ಶಾಲೆಯ ಆವರಣದಲ್ಲಿ ನೀರು ನಿಂತಿದ್ದರೂ ಇಲಾಖೆ, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪಾಲಕರು ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಕೊಠಡಿಗಳು ಸಹ ಬಿರುಕು ಬಿಟ್ಟಿದ್ದು, ಮಳೆಯಾದರೆ ಕೊಠಡಿಗಳು ಸೊರುತ್ತಿವೆ. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
ಒಂದು ತಿಂಗಳಿಂದ ಶಾಲಾ ಆವರಣದಲ್ಲಿ ನೀರು ನಿಂತುಕೊಂಡಿದೆ. ನೀರು ಪಾಚಿ ಗಟ್ಟಿ ಹುಲ್ಲು ಬೆಳೆಯ ತೊಡಗಿದೆ. ಅದನ್ನ ಕ್ಲೀನ್ ಮಾಡುವ ಗೋಜಿಗೆ ಯಾರು ಹೋಗಿಲ್ಲ. ನಮ್ಮ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದಲೇ ಮಕ್ಕಳ ಹಕ್ಕುಗಳ ಉಲ್ಲಘನೆಯಾಗುತ್ತಿದ್ದರೂ ಯಾರು ಮಾತನಾಡುತ್ತಿಲ್ಲ. ಇನ್ನು ಶಾಲೆಯ ಆವರಣದಲ್ಲಿ ನೀರು ನುಗ್ಗತ್ತಲಿದ್ದು, ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯಿಂದ ಶಿಕ್ಷಣ ಇಲಾಖೆ ಮುಕ್ತಿ ಕೊಡಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಶಾಲಾ ಆವರಣದಲ್ಲಿ ನೀರು ನಿಂತು ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಶಾಸಕ ಡಾ.ಅಜಯಸಿಂಗ್ ಜಿಲ್ಲಾಧಿಕಾರಿಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ–ಬಂದೇನವಾಜ್ ಎಸ್‌ಡಿಎಂಸಿ ಅಧ್ಯಕ್ಷ
ಶಾಲೆಯಲ್ಲಿ 8ಕ್ಕೂ ಹೆಚ್ವು ಕೋಣೆಗಳು ಮಳೆಗೆ ಸೋರುತ್ತಿವೆ. 5 ಕೋಣೆಗಳು ಮಾತ್ರ ಸರಿಯಾಗಿದೆ. ಆವರಣದಲ್ಲಿ ಕಳೆದ ಅನೇಕ ದಿನಗಳಿಂದ ನೀರು ನಿಂತ ಪರಿಣಾಮ ವಾಸನೆ ಬರುತ್ತಿದೆ.–ಅನಿತಾ ಪಾಟೀಲ ಮುಖ್ಯಶಿಕ್ಷಕಿ
ಕೆಕೆಆರ್‌ಡಿಬಿಯಿಂದ ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಕಳಿಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು–ವೀರಣ್ಣ ಬೊಮ್ಮನಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಜೇವರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.