ADVERTISEMENT

ಜೇವರ್ಗಿ ಪುರಸಭೆ | ಸದಸ್ಯರಿಗೆ ಅಧಿಕಾರವಿಲ್ಲ, ಸಮಸ್ಯೆಗೆ ಪರಿಹಾರವೂ ಇಲ್ಲ

ಜೇವರ್ಗಿ ಪುರಸಭೆಯಲ್ಲಿ ಸಮಸ್ಯೆ ಕೇಳುವವರೇ ಇಲ್ಲ: ಸಾರ್ವಜನಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 5:44 IST
Last Updated 28 ಮಾರ್ಚ್ 2025, 5:44 IST
ಜೇವರ್ಗಿ ಪುರಸಭೆ ಕಚೇರಿ
ಜೇವರ್ಗಿ ಪುರಸಭೆ ಕಚೇರಿ   

ಜೇವರ್ಗಿ: ಸ್ಥಳೀಯ ಪುರಸಭೆಯ ಸದಸ್ಯರ ಸ್ಥಿತಿ ಅಧಿಕಾರವಿಲ್ಲದೆ ಹಲ್ಲಿಲ್ಲದ ಹಾವಿನಂತಾಗಿದ್ದು, ಇದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂಬ ಕೂಗು ಕೇಳಿಬರುತ್ತಿದೆ.

ಪುರಸಭೆಯಲ್ಲಿರುವ 23 ಜನ ಸದಸ್ಯರು ಚುನಾಯಿತರಾಗಿ ಆರೂವರೆ ವರ್ಷ ಕಳೆದಿವೆ. ಅವರು ಇಲ್ಲಿಯವರೆಗೆ ಅಧಿಕಾರ ನಡೆಸಿದ್ದು ಮಾತ್ರ 30 ತಿಂಗಳು. ಇದರಿಂದ ಸಾರ್ವಜನಿಕ ಕೆಲಸ ಹಾಗೂ ಅಭಿವೃದ್ಧಿ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಜೇವರ್ಗಿ ಪುರಸಭೆಗೆ 2018ರ ಆಗಸ್ಟ್ ತಿಂಗಳಲ್ಲಿ ಚುನಾವಣೆ ನಡೆದು ಸೆ. 3ರಂದು ಫಲಿತಾಂಶ ಪ್ರಕಟವಾಗಿತ್ತು. ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ 2020ರ ನವೆಂಬರ್‌ವರೆಗೆ ಅಧಿಕಾರ ಇಲ್ಲದೇ ಕಾಲಹರಣವಾಯಿತು. ಅದೇ ನವೆಂಬರ್‌ನಲ್ಲಿ ತಡೆಯಾಜ್ಞೆ ತೆರವಾದ ನಂತರ ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಸರಳ ಬಹುಮತದೊಂದಿಗೆ ಅಧಿಕಾರ ಹಿಡಿದ ಬಿಜೆಪಿ 30 ತಿಂಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ10 ತಿಂಗಳಂತೆ ಮೂರು ಜನರಿಗೆ ಅಧಿಕಾರ ಹಂಚಿಕೆ ಮಾಡಿತು.

ADVERTISEMENT

ಲೋಕಸಭಾ, ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯಿಂದ ಹಾಗೂ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರ ಮತ್ತೇ ಕೋರ್ಟ್‌ ಮೆಟ್ಟಿಲೇರಿ ವಿಳಂಬವಾದ ನಂತರ ಇತ್ತೀಚೆಗೆ 2025ರ ಫೆ.12 ರಂದು ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಜೆಡಿಎಸ್‌ನ ಗುರುಲಿಂಗಪ್ಪಗೌಡ ಮಾಲಿಪಾಟೀಲ ಅಧ್ಯಕ್ಷ ಹಾಗೂ ಗಂಗುಬಾಯಿ ಜೆಟ್ಟೆಪ್ಪ ಉಪಾಧ್ಯಕ್ಷರಾಗಿ ಚುನಾಯಿತರಾದರು. ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಸದಸ್ಯರು ಮತ್ತೇ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಸದಸ್ಯರಿಗೆ ತಲೆನೋವಾಗಿದೆ. ಬರುವ 2025ರ ನವೆಂಬರ್ 6ರಂದು ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ.

ಮೀಸಲಾತಿ ವಿಳಂಬ ಹಾಗೂ ಜೆಡಿಎಸ್-ಬಿಜೆಪಿ ನಾಯಕರ ರಾಜಕೀಯ ಗುದ್ದಾಟದಿಂದ ಪುರಸಭೆ ಸದಸ್ಯರು ಚಲಾವಣೆಯಾಗದ ನಾಣ್ಯದಂತಾಗಿದ್ದಾರೆ. ಪುರಸಭೆಯಲ್ಲಿ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಲ್ಲಿದೆ. ಪುರಸಭೆಯ ವಿವಿಧ ವಾರ್ಡಿನ ಜನರ ಸಮಸ್ಯೆ ಅರಿಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಅಧಿಕಾರಿ ಆಡಳಿತದಲ್ಲಿ ನಡೆಯುತ್ತಿರುವ ಪುರಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರ ಇದ್ದರೂ ಇಲ್ಲದಂತಾಗಿದ್ದಾರೆ.

ಪಟ್ಟಣದಲ್ಲಿ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಈಗಾಗಲೇ ಬೇಸಿಗೆ ಆರಂಭವಾಗಿ ಕುಡಿಯುವ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಬಹುತೇಕ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಹಕವಾರು ಸಮಸ್ಯೆಗಳಿದ್ದು, ಸ್ಪಂದಿಸುವ ಸದಸ್ಯರಿಗೆ ಅಧಿಕಾರ ಇಲ್ಲದಂತಾಗಿದೆ. ಜನ ಸಾಮಾನ್ಯರ ಕುಂದು ಕೊರತೆಗಳನ್ನು ಬಗೆಹರಿಸುವಲ್ಲಿ ವಿಳಂಬವಾಗುತ್ತಿದೆ. ಅಧಿಕಾರಿಗಳಿಗೆ ವಾರ್ಡ್‌ಗಳ ತಳಮಟ್ಟದ ಸಮಸ್ಯೆಗಳ ಮಾಹಿತಿ ಇಲ್ಲದಿರುವುದರಿಂದ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತಿದೆ.

ಅಧ್ಯಕ್ಷ ಉಪಾಧ್ಯಕ್ಷರಿರುವಾಗ ಪ್ರತಿ ತಿಂಗಳಿಗೊಮ್ಮೆ ಸರ್ವಸಾಧಾರಣ ಸಭೆಯಾಗುತ್ತಿತ್ತು. ಜನರ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತಿತ್ತು. ಕ್ರಿಯಾ ಯೋಜನೆಗೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳ ಅನುಮತಿ ಪಡೆಯಬೇಕಾಗಿತ್ತು. ಆದರೆ ಈಗ ಅದ್ಯಾವುದೂ ನಡೆಯುತ್ತಿಲ್ಲ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಸಮಸ್ಯೆಗೆ ಸೂಕ್ತ ಸ್ಪಂದನೆಯೇ ಇಲ್ಲ
ಹಾಜೀರಾಬೇಗಂ ಬಾಗವಾನ್ 6ನೇ ವಾರ್ಡ್ ಸದಸ್ಯೆ
ಕೋರ್ಟ್ ತಡೆಯಾಜ್ಞೆ ನೀಡಿದ ಪರಿಣಾಮ ನಾವು ಅಧಿಕೃತ ಅಧಿಕಾರ ಹೊಂದದೇ ಇರುವುದರಿಂದ ವಾರ್ಡ್‌ನ ಸಾರ್ವಜನಿಕರಿಗೆ ಪೂರ್ಣ ಪ್ರಮಾಣದ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಮತ ನೀಡಿದವರಿಂದಲೇ ಟೀಕೆಗೊಳಗಾಗುವ ಮುಜುಗರ ಪ್ರಸಂಗಗಳು ಅನುಭವಿಸಬೇಕಾಗಿದೆ
ಸಂಗನಗೌಡ ಪಾಟೀಲ ರದ್ದೇವಾಡಗಿ 13ನೇ ವಾರ್ಡ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.