
ಜೇವರ್ಗಿ (ಕಲಬುರಗಿ ಜಿಲ್ಲೆ): ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಸಭೆಯಲ್ಲೇ ಸಿಬ್ಬಂದಿ ಬಳಿ ಹಣ ಕೇಳಿದರು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ತಹಶೀಲ್ದಾರ್ ಹಾಗೂ ಸಿಬ್ಬಂದಿ ಸಂಭಾಷಣೆಯದ್ದು ಎನ್ನಲಾದ ಆಡಿಯೊದಲ್ಲಿ ‘ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ, ಹೀಗಾಗಿ ನನಗೂ ನೀಡಿ’ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಬ್ಬಂದಿ, ‘ನನಗೆ ಆರ್.ಐ ಜವಾಬ್ದಾರಿಯೇ ಬೇಡ, ನನ್ನನ್ನು ಕಚೇರಿ ಕೆಲಸಕ್ಕೆ ಹಾಕಿ, ಹಣ ನೀಡಲು ಆಗಲ್ಲ’ ಎಂದಿದ್ದಾರೆ.
‘ಸರ್ಕಾರಿ ಜಯಂತಿಗಳು, ಶಾಸಕರು ಹೇಳುವ ಕೆಲಸಗಳಿಗೆಲ್ಲ ಹಣ ಕೊಡಬೇಕು. ಎಲ್ಲಿಂದ ದುಡ್ಡು ಕೊಡೋದು?’ ಎಂದು ತಹಶೀಲ್ದಾರ್ ಎನ್ನಲಾ್ಗು ವ್ಯಕ್ತಿ ಸಿಬ್ಬಂದಿಗೆ ಪ್ರಶ್ನಿಸಿದ್ದಾರೆ. ‘ಎಲ್ಲಾ ಇಲಾಖೆಯವರು ಹಣ ಕೊಡ್ತಾರೆ, ನೀವೂ ಕೊಡಿ. ಇಲ್ಲವಾದರೆ ನಿಮ್ಮ ವಿರುದ್ಧ ತನಿಖೆಗೆ ಆದೇಶಿಸುವೆ’ ಎಂದು ಎಚ್ಚರಿಕೆ ನೀಡಿರುವುದು ಆಡಿಯೊದಲ್ಲಿ ದಾಖಲಾಗಿದೆ.
‘ಆರು ತಿಂಗಳ ಹಿಂದೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಆಗ ಸಿಬ್ಬಂದಿ ಜೊತೆ ಚರ್ಚಿಸಿದ್ದೇನೆಯೋ ಹೊರತು, ಹಣಕ್ಕೆ ಬೇಡಿಕೆ ಇಟ್ಟಿಲ್ಲ’ ಎಂದು ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಪ್ರತಿಕ್ರಿಯಿಸಿದ್ದಾರೆ.
‘ಶರಣು ಎಂಬ ಗ್ರಾಮ ಲೆಕ್ಕಾಧಿಕಾರಿಯನ್ನು ಆರು ತಿಂಗಳ ಹಿಂದೆ ಅಮಾನತುಗೊಳಿಸಿದ್ದೆ. ಆತನೇ ಇದನ್ನೆಲ್ಲ ಮಾಡಿ, ದೂರು ಕೊಟ್ಟಿದ್ದಾನೆ. ಹಿಂದಿನ ತಹಶೀಲ್ದಾರ್ ಅವರಿಗೂ ಆತ ಬ್ಲ್ಯಾಕ್ಮೇಲ್ ಮಾಡಿದ್ದ. ಅದೇ ರೀತಿ ನನಗೂ ಮಾಡಲು ಬಂದಿದ್ದಾನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.