
ಸೇಡಂ: ‘ಚೆನ್ನಾಗಿದ್ದ ರಸ್ತೆ ಅಗೆದ ಕಾರಣ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆ ಕಡೆ ನಲ್ಲಿಗಳಲ್ಲಿ ನೀರೂ ಬರುತ್ತಿಲ್ಲ. ಈ ಕಡೆ ಜನ ಸಂಚಾರಕ್ಕೆ ಅನುಕೂಲವೂ ಆಗುತ್ತಿಲ್ಲ. ಬೇಗ ಕೆಲಸ ಮುಗಿಸಿ. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ನಾಚವಾರ ಗ್ರಾಮದಲ್ಲಿ ಸಿ.ಸಿ ರಸ್ತೆ ಕೆಲಸ ಆಗಿಲ್ಲ. ಬೇಗ ಮುಗಿಸಬೇಕು. ನೀರಿನ ಟ್ಯಾಂಕ್ ನಿರ್ಮಿಸಿದ ಕಡೆ ಅದಕ್ಕೆ ಸಂಪರ್ಕ ಕಲ್ಪಿಸಬೇಕು. ಜನರು ನೀರು ಕುಡಿದಾಗ ಮಾತ್ರ ಅನುಕೂಲವಾಗಲಿದೆ. ಹೆಸರಿಗೆ ಮಾತ್ರ ಕೆಲಸ ಮಾಡಬಾರದು. ಜನರಿಗೆ ಅನು ಕೂಲವಾಗುತ್ತದೆ ಎನ್ನುವುದನ್ನ ಗಮನದಲ್ಲಿಟ್ಟುಕೊಂಡು ಕಾಮಗಾರಿ ಮುಗಿಸಬೇಕು’ ಎಂದು ಹೇಳಿದರು.
ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರಿಗೆ ನೋಟಿಸ್ ನೀಡುವುದರ ಜೊತೆಗೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸ್ಥಳದ ಸಮಸ್ಯೆ ಇದ್ದಲ್ಲಿ, ಖಾಸಗಿ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದರೆ ಪೊಲೀಸ್ ಇಲಾಖೆಯ ಸಹಾಯ ಪಡೆದುಕೊಳ್ಳಬೇಕು. ತಮ್ಮ ವ್ಯಾಪ್ತಿಯ ಕೆಲಸಗಳ ಮೇಲೆ ನಿಗಾ ವಹಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಎಇಇ ಶಿವಶರಣಪ್ಪ ಜೇವರ್ಗಿ ಅವರಿಗೆ ಸೂಚಿಸಿದ ಅವರು ಸೇಡಂ ಕ್ಷೇತ್ರದ ಚಿಂಚೋಳಿ ತಾಲ್ಲೂಕಿನ ಶಾಲೆ, ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು.
ಪಿಆರ್‌ಇ ವಿಭಾಗದ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲಿಸಿದ ಅವರು,‘ಶೀಘ್ರದಲ್ಲಿಯೇ ಇಲಾಖೆ ಕಾಮಗಾರಿಗಳನ್ನು ಮುಗಿಸಬೇಕು’ ಎಂದರು.
‘ಕೆಲವು ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಇನ್ನೂ ಕೆಲವುಗಳಿಗೆ ದೊರೆಯಬೇಕಿದೆ’ ಎಂದು ಎಇಇ ವಿಶ್ವನಾಥ ಮಾವಿನಗಿಡ ಅವರು ಸಚಿವರ ಗಮನಕ್ಕೆ ತಂದರು.
‘ಇಲಾಖೆ ಇಇ ಅವರಿಗೆ ಕರೆ ಮಾಡಿ 6 ತಿಂಗಳಾದರೂ ಟೆಂಡರ್ ಕರೆಯದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿ,‘ಶೀಘ್ರವೇ ಕಳಿಸಬೇಕು. ಇಲ್ಲದಿದ್ದರೆ ಅಮಾತು ಮಾಡಬೇಕಾಗುತ್ತದೆ’ ಎಂದು ಸಚಿವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ನೂತನ ನಾಮನಿರ್ದೇಶಿತ ಸದಸ್ಯರಾದ ಶರಣಗೌಡ ನಾಚವಾರ, ರಮೇಶ ಕಂದೂರ, ವೆಂಕಟೇಶ ನಾಡೆಪಲ್ಲಿ, ಮನ್ಯಾನಾಯಕ ರಾಠೋಡ, ಮಿರ್ಜಾ ಮುತ್ಯಾರ ಮತ್ತು ರಜಿಯಾ ಬೇಗಂ ಅವರನ್ನು ಸತ್ಕರಿಸಲಾಯಿತು.
ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ ರಾಯಣ್ಣನವರ್ ಇದ್ದರು.
ಕೆಲ ವರ್ಷಗಳ ಹಿಂದಿನ ಕಾಮಗಾರಿಗಳು ಪೂರ್ಣಗೊಳಿಸದೆ ಇರುವುದು ಸರಿಯಲ್ಲ. ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕುಡಾ.ಶರಣಪ್ರಕಾಶ ಪಾಟೀಲ ಸಚಿವ
ಮುಖಂಡರಿಗೆ ಕರೆ
ಸಭೆಯಲ್ಲಿ ಜೆಜೆಎಂ ಕಾಮಗಾರಿ ಪ್ರಗತಿಯ ಕುರಿತು ಅಧಿಕಾರಿಗಳು ನೀಡಿದ ಮಾಹಿತಿಯ ಬಗ್ಗೆ ಸಚಿವರು ಗ್ರಾಮದ ಮುಖಂಡರಿಗೆ ಕರೆ ಮಾಡಿ ಖಚಿತಪಡಿಸಿಕೊಂಡರು. ಸ್ಟೇಷನ್ ತಾಂಡಾದಲ್ಲಿ ಪಿಆರ್‌ಇ ವಿಭಾಗದ ಚರಂಡಿ ಕಾಮಗಾರಿಯ ಮಾಹಿತಿಯನ್ನು ಗ್ರಾಮಗಳ ಮುಖಂಡರಿಗೆ ಕರೆ ಮಾಡಿ ಪಡೆದರು.
ಯುಜಿಡಿ ಕಾಮಗಾರಿಗೆ ಸಚಿವ ಗರಂ
2016ರಿಂದ ಪಟ್ಟಣದಲ್ಲಿ ಯುಜಿಡಿ ಕೆಲಸ ನಡೆಯುತ್ತಲೇ ಇದೆ. ಇದುವರೆಗೂ ಪೂರ್ಣಗೊಂಡಿಲ್ಲ. ಜನ ಆಕ್ರೋಶ ವ್ಯಕ್ತಪಡಿಸುದ್ದಾರೆ. ಕೆಲ ಕಡೆ ಯುಜಿಡಿ ನೀರು ಹೊಲಗಳಿಗೆ ಹೋಗಿ ಬೆಳೆ ಹಾಳಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಹೇಳಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು ಕಾಮಗಾರಿಗಳ ಮೇಲೆ ನಿಗಾವಹಿಸಬೇಕು ಎಂದು ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಅವರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.