
ಕಲಬುರಗಿ: ‘ರೊಟ್ಟಿ ತಿಂದವನ ರಟ್ಟೆ ಗಟ್ಟಿ’ ಎಂಬ ಮಾತಿದೆ. ಅದು ಜೋಳದ ಮಹತ್ವ ಸಾರುತ್ತದೆ. ‘ಕಲಬುರಗಿ ರೊಟ್ಟಿ’ಯಿಂದ ಬ್ರ್ಯಾಂಡ್ ಆಗಿರುವ ‘ಜೋಳ’ವನ್ನು ಇನ್ನಷ್ಟು ಮೌಲ್ಯವರ್ಧನೆ ಮಾಡಲು ಜಿಲ್ಲೆಯಲ್ಲಿ ವೇದಿಕೆ ಸಿದ್ಧವಾಗಿದೆ. ಇದಕ್ಕಾಗಿ ಕಾಳಗಿ ತಾಲ್ಲೂಕಿನ ಕೋಡ್ಲಿಯಲ್ಲಿ ‘ಜೋಳ ಸಂಸ್ಕರಣಾ ಘಟಕ’ ಸ್ಥಾಪಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಕೃಷಿ ಉತ್ಪನ್ನಗಳ ಸಂಸ್ಕರಣಾ ಮೂಲಸೌಕರ್ಯ ಬಲಪಡಿಸಿ, ಮಾರುಕಟ್ಟೆ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಅದರಂತೆ ಕಲಬುರಗಿ ಜಿಲ್ಲೆಯಿಂದ ತೊಗರಿ, ಕಬ್ಬು ಹಾಗೂ ಜೋಳ ಅತಿ ಹೆಚ್ಚು ಬೆಳೆಯುವ ಬೆಳೆಗಳು ಎಂದು ಗುರುತಿಸಲಾಗಿತ್ತು. ಈಗಾಗಲೇ ತೊಗರಿ ಸಂಸ್ಕರಣೆಗೆ ದಾಲ್‌ಮಿಲ್‌ಗಳಿವೆ. ಕಬ್ಬಿಗೂ ಗಾಣಗಳು, ಸಕ್ಕರೆ ಕಾರ್ಖಾನೆಗಳಿವೆ. ಹೀಗಾಗಿ ಜಿಲ್ಲೆಯಿಂದ ಜೋಳವು ‘ಮೌಲ್ಯವರ್ಧನೆ’ ಬೆಳೆಯಾಗಿ ಆಯ್ಕೆಯಾಗಿತ್ತು.
ಅದರಂತೆ ಒಟ್ಟು ₹2.31 ಕೋಟಿಗಳಷ್ಟು ವೆಚ್ಚದಲ್ಲಿ ‘ತರಬೇತಿ ಕೇಂದ್ರ ಹಾಗೂ ಜೋಳ ಸಂಸ್ಕರಣಾ ಸೌಲಭ್ಯ ಕೇಂದ್ರ’ ತಲೆಎತ್ತಿದೆ. ಇದಕ್ಕೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸಂಸದರ ನಿಧಿಯಿಂದ ₹50 ಲಕ್ಷ ಅನುದಾನ ಒದಗಿಸಿದ್ದಾರೆ. ಇನ್ನುಳಿದ ಹಣವನ್ನು ₹1.28 ಕೋಟಿಯಷ್ಟು ನಬಾರ್ಡ್ ಅನುದಾನ, ₹50 ಲಕ್ಷ ನಬಾರ್ಡ್ ಸಾಲದಿಂದ ಪಡೆಯಲಾಗಿದೆ. ₹12 ಲಕ್ಷದಷ್ಟು ಹಣವನ್ನು ರೈತ ಉತ್ಪಾದಕ ಸಂಸ್ಥೆ ಭರಿಸಿದೆ.
ಏನೇನು ಸೌಲಭ್ಯ?:
19 ಸಾವಿರ ಚದರಡಿಗಳಷ್ಟು ವಿಶಾಲ ಪ್ರದೇಶದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ಒಂದೇ ಸೂರಿನಡಿ ನಾಲ್ಕು ಯಂತ್ರಗಳನ್ನು ಸ್ಥಾಪಿಸಲಾಗಿದೆ. ಜೋಳ ಸ್ವಚ್ಛತಾ ಯಂತ್ರ, ಜೋಳದ ಹಿಟ್ಟು ಬೀಸುವ ಯಂತ್ರ, ಜೋಳದ ಪಾಪ್‌ಕಾರ್ನ್(ಅರಳು) ತಯಾರಿಸುವ ಯಂತ್ರ ಹಾಗೂ ಜೋಳದ ಫ್ಲ್ಯಾಕ್ಸ್ (ಅವಲಕ್ಕಿಯಂತದ್ದು) ಮಾಡುವ ಯಂತ್ರ ಅಳವಡಿಸಲಾಗಿದೆ. ರೈತರ ಉತ್ಪಾದಕ ಸಂಸ್ಥೆಯೊಂದು ಈ ಘಟಕದ ನಿರ್ವಹಣೆ ಹೊಣೆ ಹೊರಲಿದೆ.
ಜೋಳ ಸ್ವಚ್ಛತಾ ಯಂತ್ರವು ಪ್ರತಿ ಗಂಟೆಗೆ 500 ಕೆ.ಜಿ ಶುಚಿಗೊಳಿಸುವ ಸಾಮರ್ಥ್ಯ ಹೊಂದಿದ್ದರೆ, ಜೋಳದ ಅರಳು ಮಾಡುವ ಯಂತ್ರವು ಪ್ರತಿ ಗಂಟೆಗೆ 50 ಕೆ.ಜಿ ಅರಳು ಹುರಿಯುವ ಸಾಮರ್ಥ್ಯ ಹೊಂದಿದೆ. ಪ್ರತಿ ಗಂಟೆಗೆ 100ರಿಂದ 250 ಕೆ.ಜಿಗಳಷ್ಟು ಫ್ಲ್ಯಾಕ್ಸ್ (ಅವಲಕ್ಕಿಯಂತದ್ದು) ತಯಾರಿಸುವ ಯಂತ್ರ ಹಾಗೂ ಗಂಟೆಗೆ 150 ಕೆ.ಜಿ ಹಿಟ್ಟು ಬೀಸುವ ಯಂತ್ರವನ್ನು ಈ ಘಟಕವು ಒಳಗೊಂಡಿದೆ.
ಲಾಭವೇನು?:
ಜಿಲ್ಲೆಯು ಪ್ರಧಾನವಾಗಿ ಕಪ್ಪುಮಣ್ಣು ಹೊಂದಿದೆ. ಮೊದಲೆಲ್ಲ ಜೋಳವನ್ನೇ ಹೆಚ್ಚಾಗಿ ಬೆಳೆಯಲಾಗುತಿತ್ತು. ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ತೋಟಗಾರಿಕೆ, ಕಬ್ಬು ಬೆಳೆಯುವ ಪ್ರದೇಶ ವಿಸ್ತರಣೆಯಾಗುತ್ತಿದ್ದು, ಜೋಳ ಬೆಳೆಯುವ ಪ್ರದೇಶ ಕುಗ್ಗುತ್ತಿದೆ. ಜೋಳದ ಮೌಲ್ಯವರ್ಧನೆ ತಂತ್ರವು ಜಿಲ್ಲೆಯ ರೈತರನ್ನು ಜೋಳ ಬೆಳೆಯುವತ್ತ ಆಕರ್ಷಿಸಲಿದೆ ಎಂಬುದು ಅಧಿಕಾರಿಗಳ ಅಂಬೋಣ.
ತರಬೇತಿ ಕೇಂದ್ರವೂ ಉಂಟು
ಕೋಡ್ಲಿಯಲ್ಲಿ ಸ್ಥಾಪಿಸಿರುವ ಜೋಳದ ಸಂಸ್ಕರಣಾ ಘಟಕದಲ್ಲಿ ಅನ್ನದಾತರ ತರಬೇತಿ ಕೇಂದ್ರವೂ ಇರೋದು ವಿಶೇಷ. ಜೋಳದ ಶುಚಿತ್ವ ಪ್ರಕ್ರಿಯೆ ರೊಟ್ಟಿ ಸೇರಿದಂತೆ ತಯಾರಿಸಬಹುದಾದ ಹತ್ತಾರು ಉತ್ಪನ್ನಗಳ ಬಗೆಗೆ ರೈತರಿಗೆ ಇಲ್ಲಿ ತರಬೇತಿಯೂ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಎರಡೂ ಬೆಳೆಯಾಗಿ ‘ಜೋಳ’ ಜಿಲ್ಲೆಯಲ್ಲಿ ಮುಂಗಾರು– ಹಿಂಗಾರು ಎರಡೂ ಹಂಗಾಮುಗಳಲ್ಲಿ ಜೋಳವನ್ನು ಬೆಳೆಯಲಾಗುತ್ತದೆ. ವಾರ್ಷಿಕ ಸರಾಸರಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯಾಗುತ್ತಿದ್ದು ಅಂದಾಜು 99 ಸಾವಿರ ಮೆಟ್ರಿಕ್ ಟನ್ ಇಳುವರಿ ದೊರೆಯುತ್ತಿದೆ.
ಸಂಸ್ಕರಣಾ ಘಟಕದಿಂದ ಜೋಳದ ಖಾದ್ಯಗಳ ತಯಾರಿ ಅವಕಾಶ ಮಾರುಕಟ್ಟೆ ಸಾಧ್ಯತೆಗಳನ್ನು ತೆರೆದಿಡಲಿದ್ದು ಜಿಲ್ಲೆಯಲ್ಲಿ ಜೋಳ ಕೃಷಿಗೆ ಪುಷ್ಟಿ ಸಿಗಲಿದೆ.ಸಮದ್ ಪಟೇಲ್, ಕಲಬುರಗಿ ಜಂಟಿ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.