ADVERTISEMENT

ಕಾಗಿಣಾ ಏತ ನೀರಾವರಿ: 25 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ: ತೇಲ್ಕೂರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 4:58 IST
Last Updated 23 ಡಿಸೆಂಬರ್ 2021, 4:58 IST
ರಾಜಕುಮಾರ ಪಾಟೀಲ
ರಾಜಕುಮಾರ ಪಾಟೀಲ   

ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಕಾಗಿಣಾ ನದಿಗೆ ಅಡ್ಡಲಾಗಿ ಕಟ್ಟುವ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದ್ದಾರೆ.

ಸೇಡಂ ತಾಲ್ಲೂಕಿನ 30 ಗ್ರಾಮಗಳ, ಚಿಂಚೋಳಿ ತಾಲ್ಲೂಕಿನ 14 ಹಾಗೂ ಚಿತ್ತಾಪುರ ತಾಲ್ಲೂಕಿನ 4 ಸೇರಿ ಒಟ್ಟಾರೆ 47 ಹಳ್ಳಿಗಳ 25 ಸಾವಿರ ಹೆಕ್ಟೇರ್ ನೀರಾವರಿಯಾಗುವ ಮಹತ್ವದ ಏತ ನೀರಾವರಿ ಯೋಜನೆಗೆ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಇದರಿಂದ ಈ ಭಾಗದ ರೈತರ ಬಹು ದಿನಗಳ ಕನಸು ನನಸಾದಂತಾಗಿದೆ ಎಂದಿದ್ದಾರೆ.

ಕಾಗಿಣಾ ನದಿಗೆ ಈ ಹಿಂದೆಯೇ 2 ಟಿಎಂಸಿ ನೀರು ಹಂಚಿಕೆಯಾಗಿದೆ. ವೀರೇಂದ್ರ ಪಾಟೀಲ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಕಾಗಿಣಾ ನದಿಗೆ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಗ್ರಾಮಗಳ ಮುಳುಗಡೆ ಹಾಗೂ ಆರ್ಥಿಕ ಸಮಸ್ಯೆಯಿಂದ ಕೈ ಬಿಡಲಾಗಿತ್ತು. ಆದರೆ ಈಗ ಸುದೀರ್ಘ ವರ್ಷಗಳ ಬಳೀಕ ನದಿ ನೀರು ಸದುಪಯೋಗಕ್ಕೆ ಚಾಲನೆ ಸಿಕ್ಕಂತಾಗಿದೆ.

ADVERTISEMENT

₹ 639 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಮೊದಲ ಹಂತದ ಯಡ್ಡಳ್ಳಿ, ತರನಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತವಾಗಿ ಈಗ ₹ 143.80 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗೆ ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದ ನಂತರ ₹ 639.30 ಕೋಟಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಯೋಜನೆಗೆ ಅನುಮೋದನೆ ನೀಡಿದ್ದಾರೆ. ಶೀಘ್ರದಲ್ಲೇ ಅವರನ್ನು ಸೇಡಂಗೆ ಕರೆಯಿಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.