ADVERTISEMENT

ಚಿತ್ತಾಪುರ: ಕಾಗಿಣಾ ಸೇತುವೆ ಮುಳುಗಡೆ, ಸಂಚಾರ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 7:00 IST
Last Updated 28 ಸೆಪ್ಟೆಂಬರ್ 2021, 7:00 IST
   

ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ಇಲ್ಲಿಂದ ಉತ್ತರಕ್ಕೆ ಏಳು ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಯಲ್ಲಿ ಮಂಗಳವಾರ ಪ್ರವಾಹ ಉಕ್ಕಿ ಬಂದು ಸೇತುವೆ ಮುಳುಗಡೆಯಾಗಿದೆ.

ಚಿತ್ತಾಪುರದಿಂದ ದಂಡೋತಿ ಮಾರ್ಗದ ಸಾರಿಗೆ ಸಂಚಾರ ಬೆಳಗ್ಗೆಯಿಂದ ಸಂಪೂರ್ಣ ಸ್ತಬ್ಧಗೊಂಡಿದೆ. ಜಿಲ್ಲಾ ಕೇಂದ್ರ ಕಲಬುರ್ಗಿ ಹಾಗೂ ಕಾಳಗಿ ತಾಲ್ಲೂಕುಗಳ ಸಂಪರ್ಕ ಕಡಿದು ಜನಜೀವನ ಅಸ್ತವ್ಯಸ್ತಗೊಂಡಿದೆ.

ದಂಡೋತಿ ಗ್ರಾಮ ಸೇರಿದಂತೆ ಕಾಗಿಣಾ ನದಿ ಅಚೆಗಿರುವ ಅನೇಕ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಪಟ್ಟಣದ ಶಾಲಾ ಕಾಲೇಜುಗಳಿಗೆ ಬರಲಾಗದೆ ತೊಂದರೆ ಅನುಭವಿಸಿದ್ದಾರೆ. ದಿನಾಲೂ ಈ ಮಾರ್ಗದಿಂದ ಬಸ್ ಮೂಲಕ ಬರುತ್ತಿದ್ದ ಸರ್ಕಾರಿ ಅಧಿಕಾರಿ, ನೌಕರರು, ಉಪನ್ಯಾಸಕರು, ಶಿಕ್ಷಕರು ಕಲಬುರ್ಗಿಯಿಂದ ಶಹಾಬಾದ್ ಮಾರ್ಗವಾಗಿ ಆಗಮಿಸಿ ಕರ್ತವ್ಯಕ್ಕೆ ಹಾಜರಾದರು.

ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಬಂದು ಜನರು ನದಿಯತ್ತ ಹೋಗದಂತೆ ಚಿತ್ತಾಪುರ ಮತ್ತು ಮಾಡಬೂಳ ಪೊಲೀಸರು ನದಿಯ ಸೇತುವೆಯ ಎರಡೂ ದಂಡೆಯಲ್ಲಿ ಕಾವಲಿದ್ದು ಕಟ್ಟೆಚ್ಚರ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.