ADVERTISEMENT

ಕಲಬುರಗಿ: ಕಂಪನಿಗಳಿಂದ ₹ 53.50 ಕೋಟಿ ವೇತನ ವಸೂಲಿ

ಮನೋಜ ಕುಮಾರ್ ಗುದ್ದಿ
Published 29 ಮೇ 2025, 5:39 IST
Last Updated 29 ಮೇ 2025, 5:39 IST
<div class="paragraphs"><p>ವೇತನ (ಸಾಂದರ್ಭಿಕ ಚಿತ್ರ)</p></div>

ವೇತನ (ಸಾಂದರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ಕಲಬುರಗಿ: ಕೆಲಸ ಮಾಡಿಸಿಕೊಂಡು ಉದ್ಯೋಗ ನೀಡದೇ ವರ್ಷಗಟ್ಟಲೇ ಉದ್ಯೋಗಿಗಳಿಗೆ ಸತಾಯಿಸುತ್ತಿದ್ದ ಕಂಪನಿ, ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿರುವ ಕಾರ್ಮಿಕ ಇಲಾಖೆಯು ಮೂರು ವರ್ಷಗಳಲ್ಲಿ 613 ಪ್ರಕರಣಗಳಲ್ಲಿ ₹ 53.50 ಕೋಟಿ ವೇತನವನ್ನು ವಸೂಲಿ ಮಾಡಿಕೊಟ್ಟಿದೆ.

ADVERTISEMENT

ಅಲ್ಲದೇ, ಕನಿಷ್ಠ ವೇತನ ಕಾಯ್ದೆಯಡಿ 688 ಪ್ರಕರಣಗಳಲ್ಲಿ 4,362 ಜನ ಉದ್ಯೋಗಿಗಳಿಗೆ ₹ 11.26 ಕೋಟಿ ಹಣವನ್ನು ಸಂಬಂಧಪಟ್ಟ ಉದ್ಯೋಗದಾತರಿಂದ ವಸೂಲಿ ಮಾಡಿಸಿಕೊಟ್ಟಿದೆ.

ಕಲಬುರಗಿಯಲ್ಲಿರುವ ಕಾರ್ಮಿಕ ಇಲಾಖೆಯ ವಿಭಾಗ ಕಚೇರಿಯ ವ್ಯಾಪ್ತಿಯಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳು ಬರುತ್ತವೆ. ಅದರಲ್ಲಿ ವೇತನ ಪಾವತಿ ಕಾಯ್ದೆಯಡಿ 2025–26ನೇ ಸಾಲಿನಲ್ಲಿ ಅತಿ ಹೆಚ್ಚು ಅಂದರೆ 440 ಪ್ರಕರಣಗಳು ಕಲಬುರಗಿಯಿಂದಲೇ ದಾಖಲಾಗಿದ್ದವು. ಅತಿ ಕನಿಷ್ಠ ಚಿತ್ರದುರ್ಗದಿಂದ ಏಳು ಪ್ರಕರಣಗಳು ಉಪ ಆಯುಕ್ತರ ಕಚೇರಿ ಮುಂದೆ ಬಂದಿದ್ದವು. ಈ ಸಂಬಂಧ ಸಂಬಂಧಪಟ್ಟ ಸಂಸ್ಥೆ, ಕಂಪನಿಗಳಿಗೆ ನೋಟಿಸ್ ನೀಡಿದ ಕಾರ್ಮಿಕ ಇಲಾಖೆಯು ವೇತನ ಪಾವತಿ ಕಾಯ್ದೆ 1936ರ ಅನ್ವಯ ಕಲಬುರಗಿ ಜಿಲ್ಲೆಯ 858 ಕಾರ್ಮಿಕರಿಗೆ ₹ 16.36 ಕೋಟಿ, ಬೀದರ್ ಜಿಲ್ಲೆಯ 694 ಕಾರ್ಮಿಕರಿಗೆ ₹ 3.34 ಕೋಟಿ, ರಾಯಚೂರು ಜಿಲ್ಲೆಯ 319 ಕಾರ್ಮಿಕರಿಗೆ ₹ 1.34 ಕೋಟಿ, ಕೊಪ್ಪಳ ಜಿಲ್ಲೆಯ 409 ಕಾರ್ಮಿಕರಿಗೆ ₹ 64.13 ಲಕ್ಷ, ದಾವಣಗೆರೆ ಜಿಲ್ಲೆಯ 99 ಕಾರ್ಮಿಕರಿಗೆ ₹ 13.42 ಲಕ್ಷ, ಬಳ್ಳಾರಿ ಜಿಲ್ಲೆಯ 429 ಕಾರ್ಮಿಕರಿಗೆ ₹ 94.48 ಲಕ್ಷ, ಚಿತ್ರದುರ್ಗದಲ್ಲಿ 5 ಕಾರ್ಮಿಕರಿಗೆ ₹ 9.47 ಲಕ್ಷ, ವಿಜಯನಗರ ಜಿಲ್ಲೆಯ 89 ಕಾರ್ಮಿಕರಿಗೆ ₹ 49.8 ಲಕ್ಷ ವೇತನವನ್ನು ಕೊಡಿಸಲಾಗಿದೆ.

‘ಕನಿಷ್ಠ ವೇತನ ಕಾಯ್ದೆಯಡಿ 688 ಪ್ರಕರಣಗಳಲ್ಲಿ 4,362 ಉದ್ಯೋಗಿಗಳಿಗೆ ₹ 11.26 ಕೋಟಿ ವೇತನವನ್ನು ಕೊಡಿಸಿದೆ. ಎಷ್ಟೋ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಕನಿಷ್ಠ ವೇತನ ಕಾಯ್ದೆಯ ಬಗ್ಗೆ ಮಾಹಿತಿಯನ್ನೇ ನೀಡುತ್ತಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಬಾಕಿ ಇರುವ ಹಣವನ್ನು ಸಂಬಂಧಪಟ್ಟ ಕಂಪನಿ, ಹೊರಗುತ್ತಿಗೆ ಸಂಸ್ಥೆಯಿಂದ ಕೊಡಿಸಲಾಗಿದೆ’ ಎನ್ನುತ್ತಾರೆ ಕಲಬುರಗಿ ವಿಭಾಗದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ. ಇದರಲ್ಲಿಯೂ ಕಲಬುರಗಿ ಜಿಲ್ಲೆಯಲ್ಲಿಯೇ ಹೆಚ್ಚಿನ ಕಾರ್ಮಿಕರು ಸಂತ್ರಸ್ತರಾಗಿದ್ದರು. 510 ಪ್ರಕರಣಗಳಲ್ಲಿ 2,919 ಕಾರ್ಮಿಕರಿಗೆ ₹ 8.12 ಕೋಟಿ ಕನಿಷ್ಠ ವೇತನವನ್ನು ಕೊಡಿಸಲಾಗಿದೆ. ಕೊಪ್ಪಳದ 1,223 ಕಾರ್ಮಿಕರಿಗೆ ₹ 2.63 ಕೋಟಿ, ಯಾದಗಿರಿಯ 220 ಕಾರ್ಮಿಕರಿಗೆ ₹ 50 ಲಕ್ಷ ವೇತನವನ್ನು ಬಿಡುಗಡೆ ಮಾಡಿಸಲಾಗಿದೆ.

ಕಲಬುರಗಿ ವಿಭಾಗ ವ್ಯಾಪ್ತಿಯಲ್ಲಿ ಉದ್ಯೋಗಿ ಕಂಪನಿಗಳು ಸಕಾಲಕ್ಕೆ ವೇತನ ನೀಡದಿರುವ ನಿಗದಿತ ವೇತನ ನೀಡದೇ ಕಡಿಮೆ ಮೊತ್ತ ನೀಡುವುದರ ಬಗ್ಗೆ ನಮ್ಮ ತಂಡಗಳು ನಿರಂತರ ನಿಗಾ ಇರಿಸಿವೆ
ವೆಂಕಟೇಶ ಶಿಂದಿಹಟ್ಟಿ ಉಪ ಕಾರ್ಮಿಕ ಆಯುಕ್ತ ಕಲಬುರಗಿ

ತಂಗುದಾಣ: ಎರಡು ಕಡೆ ಸ್ಥಳ ಅಂತಿಮ ಕೂಲಿಗೆ ಕರೆದೊಯ್ಯುವ ನೆಪದಲ್ಲಿ ಕಲಬುರಗಿಯ ಗಂಜ್ ಬಳಿ ನಿಂತಿದ್ದ ಮಹಿಳೆಯರಿಬ್ಬರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ಕದ್ದಿದ್ದ ಪ್ರಕರಣ ಮರುಕಳಿಸಬಾರದು ಎಂಬ ಉದ್ದೇಶದಿಂದ ಕಾರ್ಮಿಕ ಇಲಾಖೆಯು ಕಲಬುರಗಿಯ ಎರಡು ಕಡೆ ತಂಗುದಾಣಗಳನ್ನು ನಿರ್ಮಿಸಲು ಜಾಗ ಅಂತಿಮಗೊಳಿಸಿದೆ. ಮಹಾನಗರ ಪಾಲಿಕೆಯು ಕಾರ್ಮಿಕ ಇಲಾಖೆಗೆ ನಿರಾಕ್ಷೇಪಣಾ ಪತ್ರ ನೀಡುವುದು ಬಾಕಿ ಇದೆ. ಕಲಬುರಗಿ ರೈಲು ನಿಲ್ದಾಣದ ಸಮೀಪದ ಸರ್ಕಾರಿ ಅತಿಥಿಗೃಹದ ಬಳಿ ಹಾಗೂ ಸೇಡಂ ರಸ್ತೆಯ ವೀರೇಂದ್ರ ಪಾಟೀಲ ಬಡಾವಣೆಯ ಎದುರಿನ ಜಾಗದಲ್ಲಿ ಕಾರ್ಮಿಕರ ತಂಗುದಾಣಗಳು ನಿರ್ಮಾಣವಾಗಲಿವೆ.

ಸುಮಾರು 70ರಿಂದ 80 ಜನ ಕುಳಿತುಕೊಳ್ಳಲು ವ್ಯವಸ್ಥೆ ಶುದ್ಧ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ಕೂಲಿಕಾರರನ್ನು ಕೆಲಸಕ್ಕೆ ಕರೆದೊಯ್ಯುವವರ ಆಧಾರ್ ಕಾರ್ಡ್ ಹಾಗೂ ಕೆಲಸಕ್ಕೆ ಹೋಗುವವರ ಆಧಾರ್ ಕಾರ್ಡ್ ಪ್ರತಿಯನ್ನು ಪಡೆದುಕೊಳ್ಳಲಾಗುವುದು. ಜೊತೆಗೆ ಕಾರ್ಮಿಕ ಇಲಾಖೆಯಿಂದ ಒಬ್ಬ ಸಿಬ್ಬಂದಿ ಸ್ಥಳದಲ್ಲಿ ಇರಲಿದ್ದಾರೆ ಎಂದು ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.