ವಂಚನೆ
ಕಲಬುರಗಿ: ಪಾಮ್ ಎಣ್ಣೆಯನ್ನು ಪೂರೈಸುವುದಾಗಿ ಹಂತ ಹಂತವಾಗಿ ₹ 62.76 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ನಗರದ ಪಾಟೀಲ ಟ್ರೇಡಿಂಗ್ ಕಂಪನಿಯ ಮಾಲೀಕ ಶಿವಾನಂದ ಪಾಟೀಲ ಅವರು ಅನ್ನಪೂರ್ಣ ಡಿಸ್ಟ್ರಿಬ್ಯೂಟರ್ಸ್‌ನ ಜಯಪ್ರಕಾಶ್ ರಾಮಸ್ವಾಮಿ ಎಂಬುವವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಮೊದಲೆಲ್ಲ ಹಣ ಹಾಕಿದ ಕೂಡಲೇ ಪಾಮ್ ಎಣ್ಣೆಯ ದಾಸ್ತಾನನ್ನು ಪೂರೈಸುತ್ತಿದ್ದರು. 2022ರ ಫೆಬ್ರುವರಿ 4ರಿಂದ 2022ರ ನವೆಂಬರ್ 15ರವರೆಗೆ ಅನ್ನಪೂರ್ಣ ಏಜೆನ್ಸಿ ಹೆಸರಿಗೆ ₹ 27,58,950 ಹಾಗೂ ರಾಮಸ್ವಾಮಿ ಏಜೆನ್ಸಿ ಹೆಸರಿಗೆ ₹ 6,67,460ನ್ನು ವರ್ಗಾವಣೆ ಮಾಡಲಾಗಿತ್ತು. ನಗದು ರೂಪದಲ್ಲಿ ₹ 28,50,000 ಸೇರಿದಂತೆ ಒಟ್ಟು 62,76,410.00 ಗಳನ್ನು ನೀಡಿದರೂ ಪಾಮ್ ಎಣ್ಣೆ ನೀಡದೇ ವಂಚಿಸಿದ್ದಾರೆ ಎಂದು ಎಂ.ಬಿ.ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
₹ 2.80 ಲಕ್ಷ ನಗದು, ಆಭರಣ ಕಳ್ಳತನ
ನಗರದ ಸೇಡಂ ರಸ್ತೆಯ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಕಳೆದ ಮಾರ್ಚ್ 6ರಂದು ನಡೆದ ಕಳ್ಳತನದ ಬಗ್ಗೆ ಸಂತ್ರಸ್ತರು ದೂರು ದಾಖಲಿಸಿದ್ದಾರೆ.
ನಾಗಪ್ಪ ಮದ್ದೂರ ಎಂಬುವವರು ತಮ್ಮ ಮನೆಯಲ್ಲಿಟ್ಟಿದ್ದ ಬಂಗಾರದ ಮೂರು ಎಳೆ ಚೈನ್, ಬಂಗಾರ ಲಾಕೆಟ್, ಮಕ್ಕಳ ಉಂಗುರ, ನಗದು ₹ 40 ಸಾವಿರ ಸೇರಿ ₹ 2.80 ಲಕ್ಷ ವೌಲ್ಯದ ಕಳ್ಳತನ ಆಗಿರುವುದಾಗಿ ಎಂ.ಬಿ. ನಗರ ಠಾಣೆಗೆ ದೂರು ನೀಡಿದ್ದಾರೆ.
ಪತ್ನಿಗೆ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆಗೆಂದು ಮಾ.6ರಂದು ಬೆಂಗಳೂರಿಗೆ ಹೋಗಿದ್ದರು. ಆ ವೇಳೆ ಮನೆಯ ಕೀಲಿ ಮುರಿದಿದ್ದು ನೋಡಿ, ಕರೆ ಮಾಡಿ ತಿಳಿಸಿದಾಗ ಕಳ್ಳತನ ಆಗಿದ್ದು ತಿಳಿದಿದೆ. ಮರುದಿನ ಪತ್ನಿ ನಿಧನ ಹೊಂದಿರುವ ಕಾರಣ ಅಂತ್ಯ ಸಂಸ್ಕಾರ ನಡೆಸಿದ್ದರು. ಬಳಿಕ ನೋಡಿದಾಗ ಅಲ್ಮೇರಾದಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದ್ದು ಗೊತ್ತಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.