ADVERTISEMENT

ಕಲಬುರಗಿ: ಅಪಘಾತದಲ್ಲಿ ಅಣ್ಣ ಸಾವು: ತಮ್ಮನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:30 IST
Last Updated 10 ಆಗಸ್ಟ್ 2025, 2:30 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಕಲಬುರಗಿ: ಬೈಕ್‌ ಸ್ಕಿಡ್‌ ಆಗಿ ಬಿದ್ದು ಅಣ್ಣ ಸ್ಥಳದಲ್ಲಿಯೇ ಮೃತಪಟ್ಟು, ತಮ್ಮ ಗಾಯಗೊಂಡಿರುವ ಘಟನೆ ಸುಲ್ತಾನಪುರ ಸೀಮಾಂತರದ ಗಡ್ಡೆಯಪ್ಪಾ ದೇವರ ಗುಡಿ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.

ADVERTISEMENT

ಜಂಬಗಾ (ಬಿ) ಗ್ರಾಮದ ಶಿವರಾಯ ಭೂತಿ ಮೃತಪಟ್ಟಿದ್ದು, ಬೈಕ್‌ ಚಲಾಯಿಸುತ್ತಿದ್ದ ಇವರ ಸಹೋದರ ಸಾಗರ ಭೂತಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಸಾಗರ ಅವರನ್ನು ಕಲಬುರಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವರಾಯ ಸುಮಾರು 2 ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಜಂಬಗಾ (ಬಿ) ಗ್ರಾಮ ಬಿಟ್ಟು ಕಲಬುರಗಿಗೆ ಬಂದಿದ್ದರು. ಆಳಂದ ರಸ್ತೆಯಲ್ಲಿರುವ ಶಕುಂತಲಾ ಡೆವಲಪರ್ಸ್‌ನಲ್ಲಿ ಕೂಲಿ ಕೆಲಸ ಮಾಡುತ್ತಾ ಪತ್ನಿ, ಮಕ್ಕಳೊಂದಿಗೆ ಮನೆ ಮಾಡಿಕೊಂಡು ವಾಸವಿದ್ದರು.

ಕೆಲಸದ ನಿಮಿತ್ತ ಜಂಬಗಾ (ಬಿ) ಗ್ರಾಮಕ್ಕೆ ಹೋಗಿ ರಾತ್ರಿ ತಮ್ಮನೊಂದಿಗೆ ಕಲಬುರಗಿಗೆ ಬರುವಾಗ ಅಪಘಾತ ಸಂಭವಿಸಿದೆ ಎಂದು ಮೃತನ ಪತ್ನಿ ವಿದ್ಯಾವತಿ ಎಸ್‌.ಭೂತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸಂಚಾರ ಪೊಲೀಸ್‌ ಠಾಣೆ–2ರಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಎರಡನೇ ಮದುವೆ: ಪತಿ ವಿರುದ್ಧ ವೈದ್ಯೆ ದೂರು

ಕಲಬುರಗಿ: ಎರಡನೇ ಮದುವೆ ಮಾಡಿಕೊಂಡ ಪತಿಯ ವಿರುದ್ಧ ವೈದ್ಯೆಯೊಬ್ಬರು ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇಲ್ಲಿನ ದೇವಾ ನಗರದ ವೈದ್ಯೆ ಡಾ.ರೂಪಾ ಅರವಿಂದ ಕಟ್ಟಿ ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ‘2016ರ ಏ.27ರಂದು ನಗರದ ಸಿಐಬಿ ಕಾಲೊನಿಯ ಡಾ.ಅರವಿಂದ ಕಟ್ಟಿ ಅವರೊಂದಿಗೆ ಮದುವೆ ಆಗಿದ್ದು, 5 ತೊಲ ಬಂಗಾರ, ₹ 1 ಲಕ್ಷ ವರದಕ್ಷಿಣೆ ನೀಡಲಾಗಿದೆ. ಮದುವೆ ನಂತರ 6 ತಿಂಗಳವರೆಗೆ ಗಂಡನ ಮನೆಯವರು ಅನ್ಯೋನ್ಯವಾಗಿದ್ದರು. 2017ರಲ್ಲಿ ಗರ್ಭಿಣಿಯಾದಾಗ ಪತಿ, ಅತ್ತೆ ಮಲ್ಲಮ್ಮ, ಮಾವ ಡಾ.ಸಿದ್ರಾಮ ಕಟ್ಟಿ ಅವರು ನನಗೆ ಗೊತ್ತಾಗದಂತೆ ಊಟದಲ್ಲಿ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದರು. ಇದಾದ ನಂತರ ವಿನಾಕಾರಣ ಸಣ್ಣಸಣ್ಣ ವಿಷಯಗಳಿಗೆ ತಕರಾರು ಮಾಡಿ, ತವರು ಮನೆಯಿಂದ ಇನ್ನೂ ಹೆಚ್ಚಿನ ಹಣ, ಚಿನ್ನ ತರಲು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ’ ಎಂದು ಡಾ.ರೂಪಾ ದೂರಿನಲ್ಲಿ ತಿಳಿಸಿದ್ದಾರೆ.

‘ಕಿರುಕುಳ ತಾಳದೇ 2020ರಲ್ಲಿ ತವರು ಮನೆಗೆ ಹೋಗಿ ಉಳಿದಿರುತ್ತೇನೆ. ಹಿರಿಯರು 3-4 ಸಲ ರಾಜೀ ಸಂಧಾನ ಮಾಡಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ 2023ರಲ್ಲಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಪತಿ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಅತ್ತೆ, ಮಾವ ಹಾಗೂ ಪತಿ ವಿರುದ್ಧ ಕ್ರಮ ಕೈಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಗಾಂಜಾ ಸೇವನೆ: 4 ಪ್ರತ್ಯೇಕ ಪ್ರಕರಣ

ಕಲಬುರಗಿ: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ನಗರದ ಬೇಲೂರ ಕ್ರಾಸ್‌ ಹತ್ತಿರ ಗಾಂಜಾ ಸೇವಿಸುತ್ತಿದ್ದ ಆರೋಪದ ಮೇಲೆ ವಿದ್ಯಾ ನಗರದ ರಾಹುಲ್‌ ಶ್ರೀಕಾಂತ ಕಲಶೆಟ್ಟಿ, ತೌಫಿಕ್ ಮಹ್ಮದ ರಫಿ, ಸೈಯದ ಸಬೂರ ಮತ್ತು ರೆಹಮತ್ ನಗರದ ಸೈಫ್ ತಾಂಡೂರಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.