ಕಲಬುರಗಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಮೂರು ಹೊಲಗಳಿಗೆ ಮಂಗಳವಾರ ಭೇಟಿ ನೀಡಿ ಹಾನಿ ಪರಿಶೀಲಿಸಿದರು.
ಮೊದಲಿಗೆ ಕಲಬುರಗಿ ತಾಲ್ಲೂಕಿನ ಸಾವಳಗಿ ಕ್ರಾಸ್ ಸಮೀಪದ ಪಟ್ಟಣ ಗ್ರಾಮ ವ್ಯಾಪ್ತಿಯ ರೈತ ಸೋಮಶೇಖರ ಪೊಲೀಸ್‌ಪಾಟೀಲ ಅವರ ತೊಗರಿ ಹೊಲಕ್ಕೆ ಭೇಟಿ ನೀಡಿದರು. ಐದು ಎಕರೆ ಹೊಲದಲ್ಲಿ ಒಂದು ಬದಿಗೆ ನೀರು ನಿಂತಿತ್ತು. ಅಲ್ಲಲ್ಲಿ ಕೆಲವು ತೊಗರಿ ಗಿಡಗಳಷ್ಟೇ ಉಳಿದಿರುವುದನ್ನು ನೋಡಿದರು.
‘ಎರಡು ಸಲ ತೊಗರಿ ಬಿತ್ತಿದ್ದೆ. ಜೂನ್‌ನಲ್ಲಿ ಬಿತ್ತಿದಾಗ ಮಳೆ ಇಲ್ಲದೇ ಒಣಗಿತು. 2ನೇ ಸಲ ಬಿತ್ತಿದಾಗ ಸೊಂಪಾಗಿ ಬೆಳೆದಿತ್ತು. ಆದರೆ, ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಕೊಳೆತು ಹೋಗಿದೆ’ ಎಂದು ರೈತ ಸೋಮಶೇಖರ ಅಳಲು ತೋಡಿಕೊಂಡರು.
‘ಬೆಳೆ ವಿಮೆ ಮಾಡಿಸಿದ್ದೀರಾ’ ಎಂದು ಸಚಿವರು ವಿಚಾರಿಸಿದರು. ಮೊದಲ ಭೇಟಿ ಮೂರ್ನಾಲ್ಕು ನಿಮಿಷಗಳಲ್ಲೇ ಮುಗಿದಿತ್ತು.
ಅಲ್ಲಿಂದ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಸರ್ವೆ ನಂ.135/2ರಲ್ಲಿ ರೈತ ಶಿವರಾಜ ಕುಡಕಿ ಮಳೆಯಿಂದ ಜಲಾವೃತವಾದ ನಾಲ್ಕು ಎಕರೆ ಪ್ರದೇಶವನ್ನು ರಸ್ತೆ ಬದಿಯಿಂದಲೇ ನೋಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ಹೊಲದಲ್ಲಿ ತೊಗರಿ ಹಾಗೂ ಸೋಯಾಬಿನ್ ಇತ್ತು. ನಾವೂ ಎರಡು ಸಲ ಬಿತ್ತಿದರೂ ಒಂದೂ ಗಿಡ ಉಳಿಯಂತೆ ಬೆಳೆ ಹಾನಿಗೀಡಾಗಿದೆ’ ಎಂದು ರೈತ ಸಂಕಟ ಹೇಳಿಕೊಂಡರು.
‘ಇಷ್ಟು ನೀರು ನಿಂತರೆ ಯಾವ ಬೆಳೆ ಬರಲು ಸಾಧ್ಯ’ ಎಂದು ಸಚಿವರೇ ಉದ್ಗರಿಸಿದರು.
ಬಳಿಕ ಅಲ್ಲಿಂದ ಹೊರಟ ಸಚಿವ ಚಲುವರಾಯಸ್ವಾಮಿ, ಅಫಜಲಪುರ ತಾಲ್ಲೂಕಿನ ಸರಡಗಿ ಬ್ಯಾರೇಜ್ ಹಿನ್ನೀರಿನ ಹೊಡೆತಕ್ಕೆ ಒಳಗಾದ ಸರಡಗಿ ಬಿ. ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿ ಭೀಮಾ ನದಿ ನೀರು ಹೊಕ್ಕಿದ್ದ ಪ್ರಜ್ವಲ ರವೀಂದ್ರ ಅವರ 3 ಎಕರೆ 26 ಗುಂಟೆ, ಅಬ್ಬಾಸ್‌ಅಲಿ ಲಾಲ್‌ಅಹ್ಮದ್ ಅವರ ನಾಲ್ಕು ಎಕರೆ ಹಾಗೂ ಯೂನುಸ್ ಹಸನ್‌ಸಾಬ್ ಅವರ 2 ಎಕರೆಯಲ್ಲಿ ಬೆಳೆದ ತೊಗರಿ, ರೈತ ಮಹಿಳೆ ಮಹಾದೇವಿ ಸಾಯಬಣ್ಣ ಅವರ 3 ಎಕರೆ 37 ಗುಂಟೆಯಲ್ಲಿ ಬೆಳೆದ ಹತ್ತಿ ಬೆಳೆ ಹಾನಿಯನ್ನು ಸಚಿವರು ವೀಕ್ಷಿಸಿದರು.
ಅವರಿಗೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಕೃಷಿ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಆಳಂದ ತಹಶೀಲ್ದಾರ್ ಅಣ್ಣಾರಾಯ ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಅರುಣ ಮೂಲಿಮನಿ ಮೊದಲಾದವರು ಇದ್ದರು.
ರೈತ ಸೋಮಶೇಖರ ಹೊಲಕ್ಕೆ ಭೇಟಿ ನೀಡಿದ್ದ ವೇಳೆ ಕೃಷಿ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಧಂಗಾಪುರ, ಹಿಂಗಾರಿಗೆ ಶೇ90ರಷ್ಟು ಸಬ್ಸಿಡಿಯಲ್ಲಿ ಬಿತ್ತನೆ ಬೀಜ ವಿತರಣೆ, ರೈತರ ಬೆಳೆ ಸಾಲ ಮನ್ನಾ ಸೇರಿದಂತೆ ರೈತರ ಬೇಡಿಕೆಗಳ ಕುರಿತು ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.