ಕಲಬುರಗಿ: ಕಲ್ಯಾಣ ಕರ್ನಾಟಕ ಸೇರಿದಂತೆ ದೇಶದ ಯುವ ಜನತೆಯ ಪೈಲಟ್ ಆಗುವ ಕನಸಿಗೆ ಕಲಬುರಗಿ ವಿಮಾನ ನಿಲ್ದಾಣವು ರೆಕ್ಕೆ ಮೂಡಿಸಿದೆ. ನಿಲ್ದಾಣ ಸುತ್ತಲಿನ ಸಮತಟ್ಟಾದ ಭೂಪ್ರದೇಶ, ಮಂಜುರಹಿತ, ತೆಳುವಾದ ಮೋಡಗಳು ಮತ್ತು ಕಡಿಮೆ ಮಳೆ ಬೀಳುವ ಹವಾಮಾನ ಪ್ರದೇಶವೂ ಪೈಲಟ್ ತರಬೇತಿಗೆ ಪೂರಕವಾಗಿದೆ.
ಪ್ರಸ್ತುತ ವಿಮಾನ ನಿಲ್ದಾಣದ 10 ಸಾವಿರ ಚ.ಮೀ. ಜಾಗದಲ್ಲಿ ರೆಡ್‌ಬರ್ಡ್ ವೈಮಾನಿಕ ತರಬೇತಿ ಅಕಾಡೆಮಿ ಹಾಗೂ ಏಷ್ಯಾ ಫೆಸಿಫಿಕ್ ವೈಮಾನಿಕ ತರಬೇತಿ ಅಕಾಡೆಮಿಗಳು ನೂರಾರು ವಿದ್ಯಾರ್ಥಿಗಳಿಗೆ ಪೈಲಟ್ ತರಬೇತಿ ನೀಡುತ್ತಿವೆ. ಇದುವರೆಗೂ ಹರಿಯಾಣ, ಪಂಜಾಬ್, ದೆಹಲಿ, ಕೇರಳ ಸೇರಿದಂತೆ ರಾಜ್ಯದ ಬೆಂಗಳೂರು, ಬೀದರ್‌ನ ಹುಮನಾಬಾದ್, ಯಾದಗಿರಿ, ಕಲಬುರಗಿಯ ಶಹಾಬಾದ್ ಸೇರಿದಂತೆ 400ಕ್ಕೂ ಹೆಚ್ಚು ಮಂದಿ ವಾಣಿಜ್ಯ ವಿಮಾನ ಪೈಲಟ್ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸುಲಭ, ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ನೆರವಾಗುವ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್‌ನ ಉಪಕರಣಗಳು, ರನ್‌ವೇ ಕೇಂದ್ರ ವಿದ್ಯುತ್, ರೇಡಾರ್ ಆಧಾರಿತ ಸುಧಾರಿತ ತಂತ್ರಜ್ಞಾನ ಹೊಂದಿರುವುದು ಸಹ ವೈಮಾನಿಕ ತರಬೇತಿ ಸಂಸ್ಥೆಗಳನ್ನು ಆಕರ್ಷಿಸುತ್ತಿದೆ. ಹೀಗಾಗಿಯೇ ರೆಡ್‌ಬರ್ಡ್ 30 ವರ್ಷಗಳಿಗೆ ಹಾಗೂ ಏಷ್ಯಾ ಫೆಸಿಫಿಕ್ 25 ವರ್ಷಗಳ ಅವಧಿಗೆ ತರಬೇತಿಯ ಒಪ್ಪಂದವನ್ನು ಮಾಡಿಕೊಂಡಿವೆ.
ವಾಯುಯಾನ ಹವಾಮಾನಶಾಸ್ತ್ರ ನ್ಯಾವಿಗೇಷನ್ ಏರೋಡೈನಾಮಿಕ್ ವೈಮಾನಿಕ ಎಂಜಿನ್ ಏರ್ ರೆಗ್ಯೂಲೇಷನ್ ಸಂಪನ್ಮೂಲಗಳ ನಿರ್ವಹಣೆ ಹವಾಮಾನದ ಅಂಶಗಳು ಮನೋವಿಜ್ಞಾನದ ಅಂಶಗಳನ್ನು ತರಬೇತಿಯ ಅವಧಿಯಲ್ಲಿ ಕಲಿಸಲಾಗುತ್ತಿದೆ.ಕ್ಯಾಪ್ಟನ್ ಕರಣ್ ಮಾನ್, ರೆಡ್‌ಬರ್ಡ್ ವೈಮಾನಿಕ ತರಬೇತಿ ಅಕಾಡೆಮಿಯ ಸಂಸ್ಥಾಪಕ
‘ಕಲಬುರಗಿ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ಅಳವಡಿಸಿಕೊಂಡಿದ್ದರಿಂದ ಯುವ ಪೈಲಟ್‌ಗಳ ಕಲಿಕೆಗೆ ಪ್ರಶಸ್ತವಾದ ನಿಲ್ದಾಣವಾಗಿದೆ. ಭಾರತದಲ್ಲಿಯೇ ಪೈಲಟ್ ತರಬೇತಿಗೆ ಅತ್ಯುತ್ತಮವಾದ ವಾತಾವರಣವನ್ನೂ ಹೊಂದಿದೆ. ಹೀಗಾಗಿ, 7 ಲಘು ವಿಮಾನಗಳಿಂದ 70 ವಿದ್ಯಾರ್ಥಿಗಳಿಗೆ 50ಕ್ಕೂ ಹೆಚ್ಚು ಸಿಬ್ಬಂದಿ ತರಬೇತಿ ನೀಡುತ್ತಿದ್ದಾರೆ’ ಎಂದು ರೆಡ್‌ಬರ್ಡ್ ವೈಮಾನಿಕ ತರಬೇತಿ ಅಕಾಡೆಮಿಯ ಸಂಸ್ಥಾಪಕ ಕ್ಯಾಪ್ಟನ್ ಕರಣ್ ಮಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಮಾನ್ಯವಾಗಿ ಬೆಳಿಗ್ಗೆ 9ರಿಂದ ಸಂಜೆ 6ವರೆಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ನೈಟ್ ಲ್ಯಾಂಡಿಂಗ್ ಸೌಕರ್ಯ ಇರುವುದರಿಂದ ಕೆಲವೊಮ್ಮೆ 24 ಗಂಟೆಯೂ ಪ್ರಾಯೋಗಿಕ ಹಾರಾಟ ನಡೆಸುತ್ತೇವೆ. ತರಬೇತಿಯ ಒಂದು ವರ್ಷದ ಅವಧಿಯಲ್ಲಿ ಒಬ್ಬ ವಿದ್ಯಾರ್ಥಿಗೆ 200 ಗಂಟೆ ಪ್ರಾಯೋಗಿಕ ಹಾರಾಟಕ್ಕೆ ಅವಕಾಶವಿದೆ. ವಿಮಾನ ಕಲಿಕೆಯು ಕೌಶಲ ಮತ್ತು ಸಾಮರ್ಥ್ಯ ಅವಲಂಬಿಸಿದ್ದರಿಂದ ಪ್ರಾಯೋಗಿಕ ಹಾರಾಟದ ಅವಧಿಯಲ್ಲಿ ಕೆಲವೊಮ್ಮೆ ಏರುಪೇರಾಗುತ್ತದೆ’ ಎಂದರು.
‘ಪ್ರತಿ ವಿದ್ಯಾರ್ಥಿಗೆ ₹ 50 ಲಕ್ಷ ಶುಲ್ಕವಿದ್ದು, ಪ್ರತಿ ಎರಡು ತಿಂಗಳಿಗೆ ಒಮ್ಮೆ ದೈಹಿಕ ಸಾಮರ್ಥ್ಯ ಹಾಗೂ ಆನ್‌ಲೈನ್ ಮೂಲಕ ಪ್ರವೇಶ ಪರೀಕ್ಷೆಗಳು ನಡೆಯುತ್ತವೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ತರಬೇತಿಯನ್ನು ನಿರ್ಧರಿಸಲಾಗುತ್ತದೆ. ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ (ಭೌತವಿಜ್ಞಾನ ಮತ್ತು ಗಣಿತ ಕಡ್ಡಾಯವಾಗಿ ಮುಗಿಸಿರಬೇಕು) ನಂತರ ಪೈಲಟ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ’ ಎಂದು ಮಾಹಿತಿ ನೀಡಿದರು.
‘10000 ಪೈಲಟ್‌ಗಳ ಅವಶ್ಯವಿದೆ’
‘ಆತ್ಮನಿರ್ಭರ ಭಾರತ ಅಭಿಯಾನದಡಿ ದೇಶಿಯವಾಗಿ 38 ಸಂಸ್ಥೆಗಳು 58 ಸ್ಥಳಗಳಲ್ಲಿ ವಿಮಾನ ತರಬೇತಿ ನೀಡುತ್ತಿವೆ. ದೇಶದಲ್ಲಿ 1500 ವಿಮಾನಗಳಿಗೆ ಹೊಸದಾಗಿ ಆರ್ಡರ್ ಮಾಡಲಾಗಿದ್ದು ಒಂದೊಂದು ವಿಮಾನಕ್ಕೆ 8ರಿಂದ 10 ಪೈಲೆಟ್‌ಗಳ ಬೇಕಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ 10 ಸಾವಿರ ಪೈಲಟ್‌ಗಳ ಅವಶ್ಯವಿದೆ’ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸ್ಥಳೀಯವಾಗಿ ಪೈಲಟ್ ತರಬೇತಿಯ ಮೂಲಕ ಭಾರತೀಯ ವೈಮಾನಿಕ ತರಬೇತಿ ವಾತಾವರಣ ಸೃಜಿಸಲಾಗುತ್ತಿದೆ. ಇದರ ಜತೆಗೆ ವಿದೇಶಕ್ಕೆ ಹರಿದು ಹೋಗುವ ಹಣವೂ ಉಳಿತಾಯ ಆಗುತ್ತಿದೆ. ಕಲಬುರಗಿ ವಿಮಾನ ನಿಲ್ದಾಣದ ಅತ್ಯಾಧುನಿಕ ಸೌಕರ್ಯಗಳು ಪ್ರಯಾಣಿಕರ ಜತೆಗೆ ವೈಮಾನಿಕ ತರಬೇತಿಯ ಸಂಸ್ಥೆಗಳಿಗೂ ನೆರವಾಗುತ್ತಿವೆ. ಈ ಭಾಗದ ಪೈಲಟ್‌ಗಳ ಕನಸಿಗೂ ಪೂರಕವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.