ADVERTISEMENT

Kalaburagi Airport: ಕಾರ್ಮಿಕರಂತೆ ‘ಗುಳೆ’ ಹೋದ ವಿಮಾನಗಳು!

ಐದೇ ವರ್ಷದಲ್ಲಿ ಎರಗಿದ ‘ಆಪತ್ತು’; 200ರಿಂದ 26ಕ್ಕೆ ತಗ್ಗಿದ ಮಾಸಿಕ ವಿಮಾನ ಹಾರಾಟ

ಮಲ್ಲಿಕಾರ್ಜುನ ನಾಲವಾರ
Published 27 ಡಿಸೆಂಬರ್ 2024, 7:13 IST
Last Updated 27 ಡಿಸೆಂಬರ್ 2024, 7:13 IST
ಕಲಬುರಗಿ ವಿಮಾನ ನಿಲ್ದಾಣ
ಕಲಬುರಗಿ ವಿಮಾನ ನಿಲ್ದಾಣ   

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕೂಲಿ ಕಾರ್ಮಿಕರು ಕೆಲಸ ಅರಸಿ ಮೆಟ್ರೊ ನಗರಗಳಿಗೆ ‘ಗುಳೆ’ ಹೋಗುವುದು ಸಾಮಾನ್ಯ. ಆದರೆ, ನಾಲ್ಕೈದು ವರ್ಷಗಳಿಂದ ಕಲಬುರಗಿ ಏರ್‌ಪೋರ್ಟ್‌ ಸುತ್ತ ನಿತ್ಯ ಹಾರಾಡುತ್ತಿದ್ದ ವಿಮಾನಗಳೂ ಈ ಭಾಗದ ಕಾರ್ಮಿಕರಂತೆ ‘ಗುಳೆ’ ಹೋದವೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

2019ರ ನವೆಂಬರ್ 22ರಂದು ಪ್ರಯಾಣಿಕರ ಸೇವೆಗೆ ತೆರೆದುಕೊಂಡ ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಮತ್ತು ಪ್ರಯಾಣಿಕರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಕ್ಷೀಣಿಸುತ್ತಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಂಕಿ–ಅಂಶಗಳ ಪ್ರಕಾರ, ಕಲಬುರಗಿ ವಿಮಾನ ನಿಲ್ದಾಣದಲ್ಲಿ 2021ರಲ್ಲಿ ಗರಿಷ್ಠ 2,157 ವಿಮಾನಗಳು ಹಾರಾಟ ನಡೆಸಿದ್ದವು. 2024ರ 11 ತಿಂಗಳಲ್ಲಿ ಅವುಗಳ ಸಂಖ್ಯೆ 1,177ಕ್ಕೆ ಕುಸಿತವಾಗಿದೆ. ಶೇ 54ರಷ್ಟು ವಿಮಾನಗಳ ಹಾರಾಟ ಇಳಿಕೆಯಾಗಿದೆ.

ADVERTISEMENT

ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ತಗ್ಗಿದೆ. 2021ರಲ್ಲಿ 88,474 ಪ್ರಯಾಣಿಕರು ಕಲಬುರಗಿ ವಿಮಾನ ನಿಲ್ದಾಣವನ್ನು ಬಳಸಿದ್ದರು. 2024ರ 11 ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ 39,434ಕ್ಕೆ ತಲುಪಿದೆ. 2022ರ ಮಾರ್ಚ್‌ನಲ್ಲಿ 190 ವಿಮಾನಗಳಿಂದ 9,117 ಜನ ಪ್ರಯಾಣಿಸಿದ್ದರು. ಇದು ತಿಂಗಳೊಂದರಲ್ಲಿ ಅತಿಹೆಚ್ಚು ಜನ ಪ್ರಯಾಣಿಸಿದ ಮಾಸಿಕವಾಗಿತ್ತು. ಸಾಮಾನ್ಯ ದಿನಗಳಲ್ಲಿ ಅತಿ ಕಡಿಮೆ ಜನರು 2024ರ ನವೆಂಬರ್ ತಿಂಗಳಲ್ಲಿ (1,040) ಪ್ರಯಾಣಿಸಿದ್ದಾರೆ. (ಕೋವಿಡ್ ಸಾಂಕ್ರಾಮಿಕ ನಿರ್ಬಂಧಿತ ಅವಧಿಯ 2020ರ ಮೇ ತಿಂಗಳಲ್ಲಿ 20 ವಿಮಾನಗಳಿಂದ 391 ಜನ ಪ್ರಯಾಣ ಮಾಡಿದ್ದರು).

ಬೆಂಗಳೂರಿಗೆ ಸೀಮಿತ: ಹಿಂಡನ್ (ದೆಹಲಿ), ಮುಂಬೈ, ತಿರುಪತಿ ಮತ್ತು ಹೈದರಾಬಾದ್‌ ಸೇವೆ ಕಡಿತದ ಬಳಿಕ ಈಗ ಬೆಂಗಳೂರಿನ ಸಂಪರ್ಕವೊಂದೇ ಉಳಿದುಕೊಂಡಿದೆ. ಸ್ಟಾರ್‌ಏರ್ ವಿಮಾನವು ವಾರದಲ್ಲಿ ಸೋಮವಾರ, ಗುರುವಾರ ಮತ್ತು ಶನಿವಾರ ಮಾತ್ರವೇ ಹಾರಾಟ ನಡೆಸುತ್ತಿದೆ.

ರಾಜ್ಯದ ಅನ್ಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹಾಗೂ ವಿಮಾನ ಹಾರಾಟಗಳ ಸೇವೆ ವಿಸ್ತರಣೆಯಾಗಿ ಪ್ರಗತಿಯತ್ತ ಸಾಗುತ್ತಿವೆ. ಆದರೆ, ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನಗಳ ಸೇವೆ ಕಡಿತವಾಗಿ, ಪ್ರಯಾಣಿಕ ವಿಮಾನಗಳು ಗಂಟು ಮೂಟೆ ಕಟ್ಟಿಕೊಂಡು ಬೇರೆ ರಾಜ್ಯಗಳ ನಗರಗಳಿಗೆ ‘ಗುಳೆ’ ಹೋಗಿವೆ. ಅವುಗಳನ್ನು ವಾಪಸ್ ಕರೆತರುವ ಪ್ರಯತ್ನಗಳು ರಾಜಕಾರಣಿಗಳಿಂದ ನಡೆಯುತ್ತಿಲ್ಲ ಎಂಬುದು ಪ್ರಯಾಣಿಕರ ಬೇಸರ.

‘ದಕ್ಷಿಣ ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣ ಹಾಗೂ ಕಲಬುರಗಿ ನಡುವೆ ವಿಮಾನ ಸೇವೆ ನೀಡಲು ಅಲಯನ್ಸ್ ಏರ್ ಸಂಸ್ಥೆಯು ಮುಂದೆ ಬಂದಿತ್ತು. ಆದರೆ, ಕೇರಳದ ರಾಜಕೀಯ ಮುಖಂಡರೊಬ್ಬರು ತಮ್ಮ ಪ್ರಭಾವ ಬಳಸಿಕೊಂಡು, ಕಲಬುರಗಿಗೆ ಬರುತ್ತಿದ್ದ ವಿಮಾನವನ್ನು ಕೊಚ್ಚಿನ್‌– ಸೇಲಂ ನಡುವೆ ಹಾರಾಡುವಂತೆ ಮಾಡಿಕೊಂಡರು. ಜತೆಗೆ ಅಲಯನ್ಸ್ ಏರ್ ಸಂಸ್ಥೆಯು ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್‌ ಅಥವಾ ಉಡಾನ್‌) ಇರುವಲ್ಲಿ ಮಾತ್ರವೇ ವಿಮಾನಗಳ ಸೇವೆ ನೀಡುತ್ತಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.

ಕಲಬುರಗಿಯಿಂದ ವಿಮಾನಗಳ ಹಾರಾಟ ಸೇವೆಯನ್ನು ಪ್ರಮುಖ ನಗರಗಳಿಗೆ ವಿಸ್ತರಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರಗಳನ್ನು ಬರೆದಿದ್ದರೂ ಸ್ಪಂದನೆ ಸಿಗುತ್ತಿಲ್ಲ

–ಚಿಲಕಾ ಮಹೇಶ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ

–––

ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್‌ನ ಸರ್ವಡ್‌ (ಸೇವೆ) ಬದಲು ಸೀಮಿತ ಸೇವೆ(ಅಂಡರ್‌ಸರ್ವಡ್) ಅಡಿ ಆಯ್ದುಕೊಳ್ಳಬೇಕಿತ್ತು. ಇದರಿಂದ ಒಂದಿಷ್ಟು ವಿನಾಯಿತಿ ಸಿಕ್ಕು ದೊಡ್ಡ ಫ್ಲೈಟ್‌ಗಳೂ ಬರುತ್ತಿದ್ದವು

–ಸುನೀಲ್ ಕುಲಕರ್ಣಿ ಹೈದರಾಬಾದ್ ಕರ್ನಾಟಕ ರೈಲ್ವೆ ಗ್ರಾಹಕರ ವೇದಿಕೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.