
ಕಲಬುರಗಿ: ‘ಭಾರತ ಸೌಹಾರ್ದ ಮತ್ತು ಅಧ್ಯಾತ್ಮ ಚಿಂತನೆಯ ನೆಲ. ಆದರೆ, ನುಡಿದಂತೆ ನಡೆದ ಮಹಾಪುರುಷರ ಚರಿತ್ರೆ ಮತ್ತು ಪರಂಪರೆಯ ಸಮಾಜದಲ್ಲಿ ಸೈದ್ಧಾಂತಿಕ ಮತ್ತು ಭಾವನಾತ್ಮಕತೆಯ ಕತ್ತಲು ಆವರಿಸಿ ಪ್ರಜ್ಞಾವಂತಿಕೆ ಮತ್ತು ಸೌಹಾರ್ದ ಈಗ ಮರೀಚಿಕೆಯಾಗಿದೆ’ ಎಂದು ಫರಹತಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಇಂದುಮತಿ ಪಾಟೀಲ ಅಭಿಪ್ರಾಯಪಟ್ಟರು.
ಕುಸನೂರು ರಸ್ತೆಯ ಜಿಡಿಎ ಬಡಾವಣೆಯಲ್ಲಿರುವ ಜನರಂಗ ಮತ್ತು ಬೆಂಗಳೂರಿನ ಜನ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಸ್ವಾಮಿ ವಿವೇಕಾನಂದ, ಪರಮಹಂಸ, ಕಡಕೋಳ ಮಡಿವಾಳಪ್ಪ ಪರಂಪರೆ ಚರಿತ್ರೆ ಇರುವ ಈ ನೆಲದಲ್ಲಿ ದೇಶಕ್ಕಾಗಿ ದುಡಿದು ಪ್ರಾಣತ್ಯಾಗ ಮಾಡಿದ ಮಹನೀಯರ ಕೊಡುಗೆ ಸ್ಮರಿಕೊಳ್ಳಬೇಕು. ಸದೃಢ ಭಾರತದಲ್ಲಿ ಸೌಹಾರ್ದ, ಸಮಾನತೆ ಮತ್ತು ಸ್ನೇಹಪರತೆಯನ್ನು ಜನಮನದಲ್ಲಿ ಬಿತ್ತಬೇಕಿದೆ’ ಎಂದರು.
ಯುವ ಬರಹಗಾರ ಪಿ. ನಂದಕುಮಾರ ಪುಸ್ತಕ ಕುರಿತು ಮಾತನಾಡಿ, ‘ಬರಗೂರು ರಾಮಚಂದ್ರಪ್ಪ ಅವರು ರಚಿಸಿರುವ ಈ ಕೃತಿಯಲ್ಲಿ 10 ಲೇಖನಗಳಿವೆ. ಸ್ವಾಮಿ ವಿವೇಕಾನಂದರ ಅಮೆರಿಕಾದ ಚಿಕಾಗೊ ನಗರದಲ್ಲಿ ಹಿಂದೂಧರ್ಮ ಕುರಿತ ಭಾಷಣ, ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ ಮತ್ತು ಸೌಹಾರ್ದ, ದ್ವೇಷ ಬಿಟ್ಟು ದೇಶ ಕಟ್ಟುವ ಅಂಶಗಳಿವೆ’ ಎಂದರು.
ಪತ್ರಾಗಾರ ಇಲಾಖೆಯ ವೀರಶೆಟ್ಟಿ ಗಾರಂಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಸೌಹಾರ್ದ ಮತ್ತು ನೈತಿಕ ಜವಾಬ್ದಾರಿಗಳು ಹೆಚ್ಚಾಗಿವೆ. ಹಿಂದೂ, ಮುಸ್ಲಿಂ ಅರಸರ ಆಳ್ವಿಕೆ ಕಾಲದಲ್ಲಿಯೂ ಪರಸ್ಪರ ಸೌಹಾರ್ದತೆ ಬೆಳೆದಿರುವುದು ಇತಿಹಾಸದಲ್ಲಿ ದಾಖಲಾಗಿವೆ’ ಎಂದರು.
ಜನರಂಗ ಅಧ್ಯಕ್ಷ ಶಂಕ್ರಯ್ಯ ಆರ್. ಘಂಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಚ್.ಎಸ್. ಬಸವಪ್ರಭು, ಅಜೀಂ ಪಾಷಾ, ಸುಭಾಶ್ಚಂದ್ರ ಗಂಧಿಗಡಿ, ಭೀಮಶೆಟ್ಟಿ ರುದ್ರಾಕ್ಷಿ, ಮಲ್ಲಿಕಾರ್ಜುನ ಎಸ್., ಬಸವರಾಜ ನೆಲೋಗಿ, ಅಬ್ದುಲ್ ವಹೀದ್ ಮುಂತಾದವರಿದ್ದರು. ಸಂಗಯ್ಯ ಹಳ್ಳದಮಠ ಶಿಶುನಾಳ ಷರೀಫರ ಅನುಭಾವಗೀತೆ ಹಾಡಿದರು. ಪತ್ರಿಕೋದ್ಯಮ ಉಪನ್ಯಾಸಕ ಕೆ. ಎಂ. ಕುಮಾರಸ್ವಾಮಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.