ಕಲಬುರಗಿ: ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಪಾಳುಬಿದ್ದ ಉದ್ಯಾನದಲ್ಲಿ ಮಂಗಳವಾರ ತಡರಾತ್ರಿ ಯುವಕರೊಬ್ಬರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಹಮಾಲವಾಡಿ ಅಪ್ಪರ್ ಲೈನ್ ಪ್ರದೇಶದ ನಿವಾಸಿ ಸೈಯದ್ ಮೆಹಬೂಬ್ (23) ಕೊಲೆಯಾದ ಯುವಕ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸಿಪಿ ಶರಣಬಸಪ್ಪ ಸುಬೇದಾರ, ಸ್ಟೇಷನ್ ಬಜಾರ್ ಇನ್‌ಸ್ಪೆಕ್ಟರ್ ಗುರು ಪಾಟೀಲ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೊಲೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಕಮಿಷನರ್ ಶರಣಪ್ಪ ಎಸ್.ಡಿ., ‘ಜನರ ಓಡಾಟ ಇಲ್ಲದ ಉದ್ಯಾನದಲ್ಲಿ ಯುವಕನೊಬ್ಬನ ಕೊಲೆ ನಡೆದಿದೆ. ಕೆಲವು ದಿನಗಳ ಹಿಂದೆ ಸ್ನೇಹಿತರೊಂದಿಗೆ ಆತ ಗಲಾಟೆ ಮಾಡಿಕೊಂಡಿದ್ದ. ಅದೇ ವೈಷಮ್ಯದಿಂದ ಪರಿಚಯಿಸ್ಥರೇ ಹತ್ಯೆ ನಡೆಸಿದ ಕುರಿತು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ನಿಖರ ಕಾರಣ ತಿಳಿಯಲಿದೆ’ ಎಂದರು.
‘ಕೊಲೆಯಾದ ಯುವಕ ಮನೆಗೆ ಬರುತ್ತಿದ್ದದ್ದೇ ಅಪರೂಪ ಎಂದು ಕುಟುಂಬಸ್ಥರು ಹೇಳಿದ್ದಾರೆ. ಜೊತೆಗೆ ಕೊಲೆಯಾದ ಯುವಕನ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಬೈಕ್ ಕಳವಿಗೆ ಸಂಬಂಧಿಸಿದಂತೆ ಎರಡು ಹಳೆಯ ಪ್ರಕರಣಗಳಿವೆ. ಈ ಕೊಲೆಯಲ್ಲಿ ರೌಡಿಶೀಟರ್‌ಗಳ ಪಾತ್ರವೂ ಸೇರಿದಂತೆ ಎಲ್ಲ ದೃಷ್ಟಿಕೋನಗಳಿಂದಲೂ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸುವೆ’ ಎಂದರು.
ಈ ಕುರಿತು ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.