
ಕಲಬುರಗಿ: ಅಕ್ರಮ ಚಟುವಟಿಕೆಗಳಿಂದ ಸುದ್ದಿಯಾಗಿದ್ದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದೀಗ ಮತ್ತೆ ಮೂರು ಸ್ಮಾರ್ಟ್‌ಫೋನ್‌ಗಳು, ಮೂರು ಸಿಮ್ ಕಾರ್ಡ್‌ಗಳು ಹಾಗೂ ಎರಡು ಇಯರ್ ಬಡ್ಸ್‌ಗಳು ದೊರೆತಿವೆ.
ಜನವರಿ 28ರಂದು ಬೆಳಿಗ್ಗೆ 8.30ರಿಂದ ಬೆ.9.10ರವರೆಗೆ ಕಾರಾಗೃಹದ 42 ಅಧಿಕಾರಿಗಳು–ಸಿಬ್ಬಂದಿ ದಿಢೀರ್ ತಪಾಸಣೆ ನಡೆಸಿದ್ದರು. ಜೈಲಿನ 11, 12 ಹಾಗೂ 13ನೇ ಬ್ಯಾರಕ್‌ಗಳು, ಕೈದಿಗಳು ಹಾಗೂ ಕಾರಾಗೃಹದ ಒಳಾಂಗಣದ, ಹೊರಾಂಗಣದಲ್ಲಿ ಶೋಧ ನಡೆದಿತ್ತು.
‘ಬ್ಯಾರಕ್ ಸಂಖ್ಯೆ 12ರ ಶೌಚಾಲಯದ ಟೈಲ್ಸ್‌ನಡಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಇಯರ್ ಬಡ್ಸ್‌ಗಳು ದೊರೆತಿವೆ. ಇವೆಲ್ಲ ಯಾರ ಹೆಸರಿನಲ್ಲಿವೆ? ಜೈಲಿನೊಳಗೆ ಯಾರು ಸರಬರಾಜು ಮಾಡಿದರು? ಹೇಗೆ ಸರಬರಾಜು ಮಾಡಿದರು? ಎಂಬುದರ ಬಗೆಗೆ ಕೂಲಂಕಷ ತನಿಖೆ ನಡೆಸಬೇಕು’ ಎಂದು ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಅವರು ನೀಡಿದ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
‘ತಪಾಸಣೆ ಅವಧಿಯಲ್ಲಿ ನಿಗದಿತ ಬ್ಯಾರಕ್‌ನಲ್ಲಿ ವಿಚಾರಣಾ ಕೈದಿಗಳಾದ ಶ್ರೀನಿವಾಸ ಅಲಿಯಾಸ್ ಪಾಪ್, ಪ್ರದೀಪ್ ಅಲಿಯಾಸ್ ದಾಸರಹಳ್ಳಿ ಪ್ರದೀಪ್, ದಿನೇಶ ಅಲಿಯಾಸ್ ಡಿಯೊ ದಿನಿ ದಾಖಲಿದ್ದರು. ಜೊತೆಗೆ ಬ್ಯಾರಕ್ ಸಂಖ್ಯೆ 11, 12 ಹಾಗೂ 13ರ ಕರ್ತವ್ಯದಲ್ಲಿ ಪಹರೆ ಸಿಬ್ಬಂದಿಯಾದ ಲವಕುಮಾರ ಮನಗೂಳಿ, ಅರುಣಕುಮಾರ ಬೋಲಾ ಹಾಗೂ ಮಲ್ಲಿಕಾರ್ಜುನ ಸಿಂಗಿ ಇದ್ದರು’ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.