ಕಲಬುರಗಿ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಳಪೆ ಊಟ ಪೂರೈಕೆ, ಕಾಟ್, ಬೆಡ್ ಇಲ್ಲದಿರುವುದು, ಮೆನು ಪ್ರಕಾರ ಊಟ, ಉಪಾಹಾರ ನೀಡದಿರುವುದು, ಶುಚಿ ಕಿಟ್ ನೀಡದಿರುವುದು, ಶೌಚಾಲಯ ಸ್ವಚ್ಛತೆ ಕಾಯ್ದುಕೊಳ್ಳದೇ ಅಸಡ್ಡೆ ತೋರಿಸುವಂತಹ ಹಾಸ್ಟೆಲ್ ವಾರ್ಡನ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಈ ಸಂಬಂಧ ಹಾಸ್ಟೆಲ್ ಪರಿಸ್ಥಿತಿಗಳ ಯಥಾವತ್ ವರದಿ ನೀಡುವುದಕ್ಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಭಂವರ್ ಸಿಂಗ್ ಮೀನಾ ಅವರು ಪ್ರತಿ ಹಾಸ್ಟೆಲ್‌ಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಆ ವರದಿ ಆಧರಿಸಿ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಜೊತೆಗೆ, ತಪ್ಪಿತಸ್ಥ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲೂ ಮುಂದಾಗಿದ್ದಾರೆ.
ಮೊದಲ ಹಂತದಲ್ಲಿ ಜಿಲ್ಲಾ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಗೂ ವಸತಿಯುತ ಶಾಲೆಗಳಿಗೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಮಕ್ಕಳ ರಕ್ಷಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಮನರೇಗಾ ಯೋಜನೆಯ ಸಹಾಯಕ ನಿರ್ದೇಶಕರನ್ನು ಹಾಸ್ಟೆಲ್‌ಗಳಿಗೆ ಒದಗಿಸಲಾದ ಸೌಲಭ್ಯಗಳ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ತಮಗೆ ವರದಿ ನೀಡುವಂತೆ ಸಿಇಒ ಸೂಚಿಸಿದ್ದಾರೆ.
ಆಗಸ್ಟ್ 11ರಿಂದ 14ರ ಅವಧಿಯಲ್ಲಿ ಈ ಅಧಿಕಾರಿಗಳ ತಂಡವು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಭೇಟಿ ನೀಡಿ ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಎಣ್ಣೆ, ಮಸಾಲೆ ಪದಾರ್ಥ ಇತರೆ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಲಿದೆ. ಖುದ್ದಾಗಿ ವಿದ್ಯಾರ್ಥಿಗಳಿಗೆ ತಯಾರಿಸಲಾದ ಊಟವನ್ನು ಸೇವಿಸಿ ಅದರ ಗುಣಮಟ್ಟ ಪರಿಶೀಲಿಸಬೇಕು. ಮಕ್ಕಳ ಆರೋಗ್ಯ, ಆಟ, ಪಾಠ ಪ್ರವಚನಗಳ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವರದಿಯಲ್ಲಿ ಏನಿರಲಿದೆ?
ಹಾಸ್ಟೆಲ್‌ಗಳಿಗೆ ಭೇಟಿ ನೀಡಲಿರುವ ಅಧಿಕಾರಿಗಳು ಒಟ್ಟು 12 ಪ್ರಮುಖ ಅಂಶಗಳನ್ನು ಪರಿಶೀಲಿಸಿ ವರದಿ ನೀಡಬೇಕಿದೆ. ನಿಲಯದ ಹೊರಾಂಗಣದ ನಿರ್ವಹಣೆ ಮತ್ತು ಸುರಕ್ಷತೆ ಸಮರ್ಪಕವಾಗಿದೆಯೇ? ಕಟ್ಟಡ ಹಾಗೂ ಕೊಠಡಿಗಳು ವಾಸಯೋಗ್ಯವಾಗಿವೆಯೇ? ಮಂಚಗಳು, ಹಾಸಿಗೆ, ಹೊದಿಕೆ, ಆಲ್ಮೇರಾಗಳನ್ನು ನೀಡಲಾಗಿದೆಯೇ? ಅವು ಸುಸ್ಥಿತಿಯಲ್ಲಿವೆಯೇ? ಅಡುಗೆ ಕೊಠಡಿ ಸ್ವಚ್ಛವಾಗಿದೆಯೇ? ಅಗತ್ಯ ಪಾತ್ರೆ ಪರಿಕರಗಳು ಇವೆಯೇ? ತಾಜಾ ಹಾಗೂ ಗುಣಮಟ್ಟದ ಆಹಾರ ಪದಾರ್ಥ, ತರಕಾರಿಗಳನ್ನು ಪಡೆಯಲಾಗಿದೆಯೇ? ಮೆನು ಚಾರ್ಟ್ ಪ್ರಕಾರ ಆಹಾರ ಕೊಡಲಾಗುತ್ತಿದೆಯೇ? ಕುಡಿಯುವ ನೀರಿನ ಫಿಲ್ಟರ್ ಇದೆಯೇ? ಸುಸ್ಥಿತಿಯಲ್ಲಿದೆಯೇ? ಗ್ರಂಥಾಲಯದಲ್ಲಿ ಪುಸ್ತಕ, ದಿನಪತ್ರಿಕೆ, ಸ್ಪರ್ಧಾತ್ಮಕ ಪತ್ರಿಕೆ, ಕಂಪ್ಯೂಟರ್, ಇಂಟರ್ನೆಟ್ ಸೌಕರ್ಯ ಇದೆಯೇ? ಹಾಸ್ಟೆಲ್‌ನಲ್ಲಿ ಪೋಷಕರ ಸಭೆ ನಡೆಸಲಾಗಿದೆಯೇ? ಕಟ್ಟಡದ ದುರಸ್ತಿ ಅಥವಾ ಇತರ ಸಿವಿಲ್ ಕಾಮಗಾರಿಗಳ ಅವಶ್ಯಕತೆ ಇದೆಯೇ? ಹಾಸ್ಟೆಲ್‌ನಲ್ಲಿ ಕಂಡು ಬಂದಿರುವ ನ್ಯೂನತೆಗಳು ಹಾಗೂ ಸಿಬ್ಬಂದಿಗೆ ನೀಡಬೇಕಿರುವ ಸಲಹೆಗಳ ಬಗ್ಗೆ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಿ ಸಿಇಒಗೆ ನೀಡಬೇಕಿದೆ.
ಕಲಬುರಗಿ ನಗರದಲ್ಲಿರುವ ಹಾಸ್ಟೆಲ್‌ಗಳಿಗೆ ಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕರು, ಹಿಂದುಳಿದ ವರ್ಗಗಳ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ, ಜವಳಿ ಇಲಾಖೆ, ಮೀನುಗಾರಿಕೆ ಇಲಾಖೆಗಳ ಉಪನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಬ್ಬ ಅಧಿಕಾರಿ ಎರಡು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ತಿಳಿಸಬೇಕಿದೆ.
ಹಾಸ್ಟೆಲ್ ಗುಣಮಟ್ಟದ ಬಗ್ಗೆ ವಾಸ್ತವ ವರದಿ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ಮೊದಲಿಗೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು. ನಂತರ ಬಿಸಿಎಂ ಅಲ್ಪಸಂಖ್ಯಾತರ ಇಲಾಖೆ ಅಧೀನದ ಹಾಸ್ಟೆಲ್‌ಗಳ ವರದಿ ಪಡೆಯುತ್ತೇನೆಭಂವರ್ ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ
‘ಸಿಡಿಪಿಒ ಸೂಪರ್‌ವೈಸರ್‌ಗಳ ವಿರುದ್ಧ ಕ್ರಮ’
ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ವರದಿ ಪಡೆದಿದ್ದು ತಪ್ಪಿತಸ್ಥ ಅಂಗನವಾಡಿಗಳ ಮೇಲ್ವಿಚಾರಕರು ಹಾಗೂ ಮಕ್ಕಳ ರಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭಂವರ್ ಸಿಂಗ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು. ಕಳಪೆ ಗುಣಮಟ್ಟದ ಮೊಟ್ಟೆಗಳು ಅಂಗನವಾಡಿ ಹಾಗೂ ಶಾಲೆಗಳಿಗೆ ಪೂರೈಕೆಯಾಗುತ್ತಿದ್ದವು. ಅದನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಸಮಿತಿಗಳ ಮೂಲಕ ಪೂರೈಸಲಾಗುತ್ತಿದೆ. ಆಳಂದ ತಾಲ್ಲೂಕಿನ ಕೆಲ ಶಾಲೆಗಳು ಅಂಗನವಾಡಿಗಳಿಗೆ ಒಂದು ಚೀಲ ಗುಣಮಟ್ಟದ ತೊಗರಿ ಬೇಳೆ ಪೂರೈಕೆಯಾಗಿದ್ದರೆ ಮತ್ತೊಂದು ಚೀಲ ಕಳಪೆ ಬೇಳೆ ಪೂರೈಕೆಯಾಗಿದೆ. ಇದನ್ನು ಪತ್ತೆ ಹಚ್ಚಲಾಗಿದ್ದು ಪೂರೈಕೆದಾರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.