ಕಲಬುರಗಿ: ‘ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ಮಕ್ಕಳ ಅತ್ಯುತ್ತಮ ಹಿತಾಸಕ್ತಿ ಮುಖ್ಯವಾಗಬೇಕು. ಬಾಲ ನ್ಯಾಯ ಕಾಯ್ದೆಯಲ್ಲೂ ಇದನ್ನು ಒತ್ತಿ ಹೇಳಲಾಗಿದೆ. ಅದನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಲಿ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಸಲಹೆ ನೀಡಿದರು.
ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಸುರಕ್ಷತಾ ಜಾಲ ಬಂಧ ಯೋಜನೆ ಮತ್ತು ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಜಗತ್ತಿಗೆ ವ್ಯಾಪಿಸಿದ ಸಮಸ್ಯೆ. ಮಕ್ಕಳು ಮತ್ತು ಮಹಿಳೆಯರಿಗೆ ತುಂಬಾ ಶತ್ರುಗಳು. ಅವರ ಸುರಕ್ಷತೆಗಾಗಿ ಸಂವಿಧಾನ ಹೇಳಿದಂತೆ ಹತ್ತಾರು ಕಾಯ್ದೆ, ಕಾನೂನುಗಳು ರೂಪುಗೊಂಡಿವೆ. ಅವುಗಳ ಜಾರಿ ಹೊಣೆ ಹೊತ್ತವರು ಸೂಕ್ಷ್ಮತೆಯಿಂದ ವರ್ತಿಸಬೇಕು’ ಎಂದರು.
‘ಇತ್ತೀಚೆಗೆ ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಒಂದೇ ವಾಹನದಲ್ಲಿ ಪೊಲೀಸರು ಕರೆ ತಂದಿದ್ದರು. ಹೀಗೆಲ್ಲ ನಡೆದುಕೊಂಡರೆ ಮಕ್ಕಳ ಹಕ್ಕುಗಳ ರಕ್ಷಣೆ ಆಗಲ್ಲ. ಎಂಥದ್ದೇ ಪರಿಸ್ಥಿತಿಯಲ್ಲೂ ಮಕ್ಕಳ ಹಿತಾಸಕ್ತಿಯನ್ನು ಅತ್ಯುತ್ತಮವಾಗಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲರೂ ಹುದ್ದೆಯ ಪ್ರತಿಷ್ಠೆ, ಶಿಷ್ಟಾಚಾರ, ಅಹಂ ಸೇರಿದಂತೆ ಎಲ್ಲವನ್ನೂ ಬದಿಗೊತ್ತಿ ಮಕ್ಕಳು, ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು’ ಎಂದರು.
‘ವಯಸ್ಕರಿಗೆ ಸಂಬಂಧಿಸಿದಂತೆ ಕ್ರಿಮಿನಲ್ ನ್ಯಾಯ ಪದ್ಧತಿ ನೋಡಿದರೆ, ಒಂದು ಕೊಲೆ ಪ್ರಕರಣ ನಡೆದರೆ ಪೊಲೀಸರು, ಪ್ರಾಸಿಕ್ಯೂಷನ್, ನ್ಯಾಯಾಲಯ, ಬಂದೀಖಾನೆಯವರು ಅದರಲ್ಲಿ ಕೆಲಸ ಮಾಡುತ್ತಾರೆ. ಬಾಲನ್ಯಾಯ ಕಾಯ್ದೆಯಡಿ ಪೊಲೀಸರು, ಪ್ರಾಸಿಕ್ಯೂಷನ್, ನ್ಯಾಯಾಧೀಶರು, ಬಾಲಗೃಹಗಳು, ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಹತ್ತಾರು ಸಂಸ್ಥೆಗಳು ಕೆಲಸ ಮಾಡುತ್ತವೆ. ದೊಡ್ಡವರಿಗಿಂತಲೂ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲು ಇಂಥ ವ್ಯವಸ್ಥೆ ರೂಪಿಸಲಾಗಿದೆ. ಅವುಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲೆ–ತಾಲ್ಲೂಕು ಮಟ್ಟದಲ್ಲೂ ಸಮಿತಿಗಳಿವೆ’ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ ಮಾತನಾಡಿ, ‘2024–25ರಲ್ಲಿ 11 ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ದಾಳಿ ನಡೆಸಿ 47 ಮಕ್ಕಳನ್ನು ರಕ್ಷಿಸಿ ಜಿಲ್ಲಾ ಸಮಿತಿ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿದ್ದೇವೆ. ಆದರೆ, ಮಕ್ಕಳ ರಕ್ಷಣಾ ಕಾರ್ಯಾಚರಣೆ ಬಳಿಕ ಪ್ರಕರಣ ದಾಖಲಿಸುವಲ್ಲಿ ಪೊಲೀಸ್ ಇಲಾಖೆಯಿಂದ ಇನ್ನಷ್ಟು ಸಹಕಾರ ಬೇಕಿದೆ’ ಎಂದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ–1098, ಡಾನ್ ಬಾಸ್ಕೊ ಸಂಸ್ಥೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ್ಯ ಕೆ.ಇಜೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶಿವಶರಣಪ್ಪ, ಡಾನ್ ಬಾಸ್ಕೊ ಸಂಸ್ಥೆ ಕಲಬುರಗಿಯ ನಿರ್ದೇಶಕ ಫಾದರ್ ಕುರಿಯೋಕೋಸ್ ವೇದಿಕೆಯಲ್ಲಿದ್ದರು.
‘ರೈಲ್ವೆ ಹಳಿಯಂಥ ಸಮನ್ವಯ ಅಗತ್ಯ’
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ.ಪಾಟೀಲ ಮಾತನಾಡಿ ‘ಮಕ್ಕಳ ರಕ್ಷಣೆಯಲ್ಲಿ ಸರ್ಕಾರಿ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ನಡುವೆ ರೈಲ್ವೆ ಹಳಿಯಂಥ ಸಮನ್ವಯ ಅಗತ್ಯ. ರೈಲು ಕ್ರಮಿಸಲು ಹೇಗೆ ಎರಡು ಹಳಿ ಸರಿಯಾಗಿರುವುದು ಮುಖ್ಯವೋ ಅಂತೆಯೇ ಮಕ್ಕಳ ರಕ್ಷಣೆಯಲ್ಲಿ ವಿವಿಧ ಇಲಾಖೆಗಳ ನಡುವಣ ಸಮನ್ವಯ ಮುಖ್ಯವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.