ADVERTISEMENT

ಕಲಬುರಗಿ ಮಹಾನಗರ ಪಾಲಿಕೆ: ನಾಲ್ಕೂ ಸಮಿತಿಗಳಿಗೆ ಅವಿರೋಧ ಆಯ್ಕೆ

ಕಲಬುರಗಿ ಪಾಲಿಕೆಯ 23ನೇ ಅವಧಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 4:15 IST
Last Updated 25 ಸೆಪ್ಟೆಂಬರ್ 2025, 4:15 IST
ಕಲಬುರಗಿಯ ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳ ನೂತನ ಅಧ್ಯಕ್ಷರು ಮೇಯರ್‌ ಹಾಗೂ ಉಪಮೇಯರ್‌ ಅವರೊಂದಿಗೆ ವಿಜಯದ ಸಂಕೇತ ತೋರಿ ಸಂಭ್ರಮಿಸಿದರು. ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು
ಕಲಬುರಗಿಯ ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳ ನೂತನ ಅಧ್ಯಕ್ಷರು ಮೇಯರ್‌ ಹಾಗೂ ಉಪಮೇಯರ್‌ ಅವರೊಂದಿಗೆ ವಿಜಯದ ಸಂಕೇತ ತೋರಿ ಸಂಭ್ರಮಿಸಿದರು. ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು   

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 23ನೇ ಅವಧಿಗೆ ನಾಲ್ಕೂ ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಬುಧವಾರ ನಿರೀಕ್ಷೆಯಂತೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನಗರದ ಇಂದಿರಾ ಸ್ಮಾರಕ ಭವನದಲ್ಲಿ ಮೇಯರ್ ವರ್ಷಾ ಜಾನೆ ಹಾಗೂ ಉಪಮೇಯರ್ ತೃಪ್ತಿ ಲಾಖೆ ಸಮ್ಮುಖದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು. ಒಂದೊಂದೇ ಸಮಿತಿಯ ಅಧ್ಯಕ್ಷರ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸುವಂತೆ ಆಕಾಂಕ್ಷಿಗಳನ್ನು ಮೇಯರ್ ವರ್ಷಾ ಜಾನೆ ಅವರು ಆಹ್ವಾನಿಸಿದರು. ಬಳಿಕ ನಾಲ್ಕೂ ಸ್ಥಾಯಿ ಸಮಿತಿಗಳಿಂದ ಒಬ್ಬೊಬ್ಬರೇ ಉಮೇದುವಾರಿಕೆ ಸಲ್ಲಿಸಿದರು. ಇದರಿಂದ ಎಲ್ಲ ನಾಲ್ವರನ್ನೂ ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.

ಕರ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್‌ ನಂ.26ರ ಸದಸ್ಯೆ ಅನುಪಮಾ ರಮೇಶ ಕಮಕನೂರು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್‌ ನಂ. 17ರ ಸದಸ್ಯ ಮೊಹಮ್ಮದ್ ಅಯಾಜ್‌ ಖಾನ್‌, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್‌ ನಂ.40ರ ಸದಸ್ಯ ಶೇಖ ಹುಸೇನ್‌  ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್‌ ನಂ.1ರ ಸದಸ್ಯೆ ಪುತಲಿ ಬೇಗಂ ಆಯ್ಕೆಯಾದರು. ಆಯ್ಕೆ ಬಳಿಕ ಮೇಯರ್– ಉಪಮೇಯರ್, ಕುಡಾ ಅಧ್ಯಕ್ಷ ಮಜರ್‌ ಆಲಂಖಾನ್‌ ಸೇರಿದಂತೆ ಹಲವು ಮುಖಂಡರು ಸ್ಥಾಯಿ ಸಮಿತಿಗಳ ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ ಅಭಿನಂದಿಸಿದರು.

ADVERTISEMENT

ಸೆಪ್ಟೆಂಬರ್‌ 20ರಂದು ನಗರದ ಸಭೆಯಲ್ಲಿ ನಾಲ್ಕೂ ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಮೂರು ಸಮಿತಿಗಳಲ್ಲಿ ಕಾಂಗ್ರೆಸ್‌ನ ನಾಲ್ಕು ಸದಸ್ಯರು ಹಾಗೂ ಬಿಜೆಪಿಯ ಮೂವರು ಸದಸ್ಯರು ಇದ್ದಾರೆ. ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್‌ನ ನಾಲ್ವರು, ಬಿಜೆಪಿಯ ಇಬ್ಬರು ಸದಸ್ಯರು ಹಾಗೂ ಜೆಡಿಎಸ್‌ ಸದಸ್ಯ ವಿಶಾಲಕುಮಾರ ನವರಂಗ ಇದ್ದಾರೆ.

ಸ್ಥಾಯಿ ಸಮಿತಿ ಸದಸ್ಯರ ವಿವರ: ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಮೊಹಮ್ಮದ್ ಅಯಾಜ್‌ ಖಾನ್‌ (ಅಧ್ಯಕ್ಷ), ವಿಜಯಕುಮಾರ ಸೇವಲಾನಿ, ದಿಗಂಬರ್ ನಾಡಗೌಡ, ಯಲ್ಲಪ್ಪ ನಾಯಕೊಡಿ, ಪ್ರಕಾಶ ಎಚ್‌.ಕಪನೂರ, ಸೈಯದಾ ಮಸೀರಾ ನಸ್ರೀನ್‌ ಹಾಗೂ ವಿಶಾಲಕುಮಾರ ನವರಂಗ.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ: ಶೇಖ್‌ ಹುಸೇನ್‌ (ಅಧ್ಯಕ್ಷ), ಶಂಭುಲಿಂಗ ಪಾಟೀಲ, ಮೇಘನಾ ಕಳಸ್ಕರ, ಸೈಯದಾ ನೂರ್‌ಫಾತಿಮಾ, ಸೈಯದ್‌ ಅಹ್ಮದ್, ಫರ್ಹಾನಾಜ್‌ ಹಾಗೂ ಯಂಕಮ್ಮ.

ಕರ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ: ಅನುಪಮಾ ಕಮಕನೂರ (ಅಧ್ಯಕ್ಷೆ), ರೇಣುಕಾ ಗುಮ್ಮಟ, ತಹಸೀನ್‌, ರೇಣುಕಾ ಪರಶುರಾಮ, ಲತಾ ರವೀಂದ್ರಕುಮಾರ, ಕೃಷ್ಣರಾಜ ಹಾಗೂ ಗಂಗಮ್ಮ ಬಸವರಾಜ.

ಲೆಕ್ಕಪತ್ರ ಸ್ಥಾಯಿ ಸಮಿತಿ: ಪುತಲಿ ಬೇಗಂ(ಅಧ್ಯಕ್ಷೆ), ಗುರುರಾಜ, ಮಹಮ್ಮದ್ ಅಜೀಮೋದ್ದಿನ್‌, ಇರ್ಫಾನಾ ಪರವೀನ್‌, ರಾಗಮ್ಮ ಎಸ್‌.ಇನಾಮದಾರ್‌, ಮಲ್ಲು ಉದನೂರ ಹಾಗೂ ಅರುಣಾಬಾಯಿ ಅಂಬಾರಾಯ.

ಚುನಾವಣಾ ಪ್ರಕ್ರಿಯೆಯಲ್ಲಿ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಪಾಲಿಕೆಯ ಪರಿಷತ್‌ ಕಾರ್ಯದರ್ಶಿ ಪ್ರಲ್ಹಾದ್‌ ಬಿ.ಕೆ. ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಾಯಿ ಸಮಿತಿಯಲ್ಲಿ ‘ಸ್ತ್ರಿ’ ಬಲ

ಪಾಲಿಕೆಯ ನಾಲ್ಕೂ ಸ್ಥಾಯಿ ಸಮಿತಿಗಳ ಸದಸ್ಯರ ನೇಮಕದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 28 ಸದಸ್ಯರ ಪೈಕಿ 15 ಮಂದಿ ಮಹಿಳಾ ಸದಸ್ಯರಿದ್ದಾರೆ. ಇನ್ನುಳಿದ 13 ಮಂದಿ ಪುರುಷ ಸದಸ್ಯರು. ಇನ್ನು ನಾಲ್ಕು ಅಧ್ಯಕ್ಷ ಸ್ಥಾನಗಳ ಪೈಕಿ ಮೂರು ಅಧ್ಯಕ್ಷ ಸ್ಥಾನಗಳು ಮುಸ್ಲಿಂ ಸಮುದಾಯಕ್ಕೆ ದೊರೆತಿವೆ. ಉತ್ತರ– ದಕ್ಷಿಣ ಲೆಕ್ಕಾಚಾರ?‍ ‍ಪಾಲಿಕೆಯಲ್ಲಿ ಮೇಯರ್‌ ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕದಲ್ಲಿ ಉತ್ತರ–ದಕ್ಷಿಣ ಲೆಕ್ಕಾಚಾರ ನಡೆದಂತಿದೆ. ಮೇಯರ್‌ ಉಪಮೇಯರ್‌ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯವರಾದರೆ ಇನ್ನುಳಿದ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉತ್ತರ ಮತಕ್ಷೇತ್ರ ವ್ಯಾಪ್ತಿಯವರು ಎಂಬುದು ವಿಶೇಷ. ಸಂಭ್ರಮಾಚರಣೆ: ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯ ಬೆನ್ನಲ್ಲೆ ಇಂದಿರಾ ಸ್ಮಾರಕ ಭವನದ ಹೊರಗೆ ನಿಂತಿದ್ದ ಅವರ ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ ಬ್ಯಾಂಡ್‌ ಬಾರಿಸಿ ಸಂಭ್ರಮಾಚರಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.