ADVERTISEMENT

ಚಿಂಚೋಳಿ: ಬೆಳೆ ಹಾನಿ ಪರಿಶೀಲಿಸಿದ ಸಂಸದ ಸಾಗರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 7:14 IST
Last Updated 3 ಸೆಪ್ಟೆಂಬರ್ 2025, 7:14 IST
ಚಿಂಚೋಳಿ ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಯನ್ನು ಬೀದರ್‌ ಸಂಸದ ಸಾಗರ ಖಂಡ್ರೆ ಮಂಗಳವಾರ ಪರಿಶೀಲಿಸಿದರು. ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಇದ್ದರು
ಚಿಂಚೋಳಿ ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಯನ್ನು ಬೀದರ್‌ ಸಂಸದ ಸಾಗರ ಖಂಡ್ರೆ ಮಂಗಳವಾರ ಪರಿಶೀಲಿಸಿದರು. ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಇದ್ದರು   

ಚಿಂಚೋಳಿ: ಕಲಬುರಗಿ ಜಿಲ್ಲೆಗೆ ಮಂಜೂರಾಗಿರುವ ಬೆಳೆ ಹಾನಿಯ ಪರಿಹಾರದಲ್ಲಿ ಶೇ 50 ಮಾತ್ರ ಬಿಡುಗಡೆಯಾಗಿದ್ದು, ಉಳಿದ ಬಾಕಿ ಹಣ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಬೀದರ್ ಸಂಸದ ಸಾಗರ ಖಂಡ್ರೆ ತಿಳಿಸಿದರು.

ತಾಲ್ಲೂಕಿನ ವಿವಿಧೆಡೆ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಯ ಪರಿಶೀಲನೆಗೆ ಬಂದಿದ್ದ ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಯಿಂದ ಉಂಟಾಗಿರುವ ಹಾನಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

‘ಈಗಿರುವ ನಿಯಮಗಳ ಅಡಿಯಲ್ಲಿ ರೈತರಿಗೆ ಅಲ್ಪ ಪರಿಹಾರ ಸಿಗುತ್ತಿದೆ. ಹೀಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಕೇಂದ್ರ ಮತ್ತು ರಾಜ್ಯದ ಮಾರ್ಗಸೂಚಿಯಲ್ಲಿ ಬದಲಾವಣೆ ತರಲು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಭಾಗದ ಸಂಸದರ ನಿಯೋಗದಲ್ಲಿ ತೆರಳಿ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ADVERTISEMENT

ಅತಿವೃಷ್ಟಿಯಿಂದ ಕಬ್ಬು ಬೆಳೆಯೂ ಹಾಳಾಗಿರುವುದು ಕಂಡು ಬಂದಿದೆ. ಹೀಗಾಗಿ ಕಬ್ಬನ್ನೂ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಲು ಮತ್ತು ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.

ಬೀದರ್ ಜಿಲ್ಲೆಯ ಭಾಲ್ಕಿ, ಔರಾದ್, ಕಮಲನಗರ ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಚಿಂಚೋಳಿಯಲ್ಲಿ ಕಾಯಿಗಳು ಜೊಳ್ಳಾಗಿ ಇಳುವರಿ ಇಲ್ಲದಿರುವುದು ಮತ್ತು ಕೊಯ್ಲು ಸಮಯದಲ್ಲಿ ಮಳೆ ಸುರಿದು ಪೂರ್ಣಪ್ರಮಾಣದಲ್ಲಿ ಹಾಳಾಗಿರುವುದು ಕಂಡು ಬಂದಿದೆ ಎಂದರು.

‘ತಾಲ್ಲೂಕಿನಲ್ಲಿ ವಿಮಾ ಕಂಪನಿಗಳು ರೈತರಿಗೆ ಲಿಖಿತ ದೂರು ಪಡೆದರೂ ಸ್ವೀಕೃತಿ ನೀಡದ ಬಗ್ಗೆ ಗಮನಕ್ಕೆ ಬಂದಿದೆ. ಸ್ವೀಕೃತಿ ನೀಡಲು ಕ್ರಮಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ತೆಲಂಗಾಣ ರಾಜ್ಯದವರು ಕರ್ನಾಟಕದ ಭೂಮಿ ಒತ್ತುವರಿ ಮಾಡಿಕೊಂಡು, ಕರ್ನಾಟಕದ ಗಡಿಯ ಕಲ್ಲನ್ನು ಕಿತ್ತೊಗೆಯುತ್ತಿರುವ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ಸಂಸದರು ಭರವಸೆ ನೀಡಿದರು.

ಸಂಸದರೊಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಹಿರಿಯ ಮುಖಂಡ ಬಾಬುರಾವ್ ಪಾಟೀಲ, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಜೀತ ಪಾಟೀಲ, ನರಶಿಮ್ಲು ಸವಾರಿ, ಜಗನ್ನಾಥ ಈದಲಾಯಿ, ಲಕ್ಷ್ಮಣ ಅವುಂಟಿ, ಅಬ್ದುಲ್ ಬಾಷೀತ್, ಶರಣು ಪಾಟೀಲ, ಜಗನ್ನಾಥ ಕಟ್ಟಿ, ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಮಲ್ಲಿಕಾರ್ಜುನ ಗುತ್ತೇದಾರ, ಪುರಸಭೆ ಮುಖ್ಯಾಧಿಕಾರಿ ನಿಂಗಮ್ಮ ಬಿರಾದಾರ ಇದ್ದರು.

ಮಿಂಚಿನ ಸಂಚಾರ

ಸಂಸದ ಸಾಗರ ಖಂಡ್ರೆ ಅವರು ತಾಲ್ಲೂಕಿನ ನಾಗಾಈದಲಾಯಿ ಕೊಳ್ಳೂರು ಚಿಂಚೋಳಿ ಚಂದಾಪುರ ಪೋಲಕಪಳ್ಳಿ ಸೋಲಿಂಗದಳ್ಳಿ ಹಾಗೂ ಚಿಮ್ಮಾಈದಲಾಯಿ ಸುಲೇಪೇಟ ಮೊದಲಾದ ಕಡೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಸಂಸದರನ್ನು ಸನ್ಮಾನಿಸಿ ಜಯಘೋಷ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು

ಕೆಕೆಆರ್‌ಡಿಬಿ ಅನುದಾನದ ಬಡ್ಡಿಯ ಹೆಚ್ಚುವರಿ ಹಣದಲ್ಲಿ ತಲಾ ₹ 4.9 ಕೋಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕದ ಸಂಸದರಿಗೆ ಮಂಜೂರು ಮಾಡಿದ್ದಾರೆ. ಈ ಎಲ್ಲಾ ಅನುದಾನವನ್ನು ನಾನು ಚಿಂಚೋಳಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ನೀಡುತ್ತಿದ್ದೇನೆ.
ಸಾಗರ ಖಂಡ್ರೆ, ಸಂಸದ, ಬೀದರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.