
ಕಲಬುರಗಿ: ಕ್ರಿಪ್ಟೊ ಕರೆನ್ಸಿ ವಹಿವಾಟಿನಲ್ಲಿ ಹೂಡಿಕೆ ಮಾಡುವಂತೆ ಪ್ರಚೋದಿಸಿದ ಸೈಬರ್ ವಂಚಕರು ನಗರದ ವ್ಯಾಪಾರಿಯೊಬ್ಬರಿಗೆ ₹29.63 ಲಕ್ಷ ವಂಚಿಸಿದ್ದಾರೆ.
ನಗರದ ಕನಕ ನಗರದ ನಿವಾಸಿ, 29 ವರ್ಷದ ಕಿರಣ ಇಲ್ಲಾಳ ವಂಚನೆಗೊಳಗಾದವರು. ವಂಚನೆಗೆ ಒಳಗಾದ ಬಹುತೇಕ 11 ತಿಂಗಳ ಬಳಿಕ ಕಿರಣ ಪೊಲೀಸರಿಗೆ ದೂರು ನೀಡಿದ್ದಾರೆ.
‘2025ರ ಫೆಬ್ರುವರಿ 25ರಂದು ವಿದೇಶಿ ಪ್ರಯಾಣ ಬೆಳೆಸುವ ಉದ್ದೇಶದಿಂದ ಅಂತರ್ಜಾಲದಲ್ಲಿ ಹಾಂಗ್‌ಕಾಂಗ್ ನಗರದ ಕುರಿತು ಶೋಧಿಸುತ್ತಿದ್ದೆ. ಆಗ ತನಾ ಲೀ ಎಂಬುವರು ಕರೆ ಮಾಡಿ ಕ್ರಿಪ್ಟೊ ಕರೆನ್ಸಿಯಲ್ಲಿ ಟ್ರೇಡಿಂಗ್ ನಡೆಸುವಂತೆ ಪ್ರಚೋದಿಸಿದರು. ಬಿಟ್‌ಗ್ಲೋಬ್‌ಎಯು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಕ್ರಿಪ್ಟೊ ಕಾಯಿನ್‌ಗಳನ್ನು ಟ್ರೇಡಿಂಗ್ ನಡೆಸುವಂತೆ ಹೇಳಿದರು. ಅದರಂತೆ ನಾನು ಹಣ ಹೂಡಿಕೆ ಮಾಡಿ ಕ್ರಿಪ್ಟೊ ಕಾಯಿನ್ ಖರೀದಿಸಿ ಅವರು ಹೇಳಿದ ಖಾತೆಗೆ ವರ್ಗಾಯಿಸಿದೆ. ಅದರ ಲಾಭಾಂಶ ನನ್ನ ಖಾತೆಯ ಡ್ಯಾಷ್‌ಬೋರ್ಡ್‌ನಲ್ಲಿ ತೋರಿಸುತ್ತಿತ್ತು. ಹಂತಹಂತವಾಗಿ ನಾನು ₹29.63 ಲಕ್ಷ ಹೂಡಿಕೆ ಮಾಡಿದ್ದೆ. ನನ್ನ ಡ್ಯಾಷ್ ಬೋರ್ಡ್‌ನಲ್ಲಿ ₹1.14 ಕೋಟಿ ತೋರಿಸುತ್ತಿತ್ತು. ಆದರೆ, ಅದನ್ನು ವಿತ್‌ಡ್ರಾ ಮಾಡಲು ಯತ್ನಿಸಿದಾಗ ತೆರಿಗೆ ಕಟ್ಟಿಸಿಕೊಂಡರೂ ಹಣ ವಿತ್‌ಡ್ರಾಗೆ ಅವಕಾಶ ನೀಡಲಿಲ್ಲ. ಆಗ ವಂಚನೆಗೆ ಒಳಗಾಗಿರುವುದು ತಿಳಿಯಿತು’ ಎಂದು ದೂರಿನಲ್ಲಿ ಕಿರಣ ತಿಳಿಸಿದ್ದಾರೆ.
ಈ ಕುರಿತು ತನಾ ಲೀ ಹಾಗೂ ಇತರರ ವಿರುದ್ಧ ಕಲಬುರಗಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕ ಸೇರಿ ಇಬ್ಬರ ಸಾವು
ಕಲಬುರಗಿ: ನಗರದ ಮರ್ತೂರ ಕ್ರಾಸ್‌ನಲ್ಲಿ ಜ.17ರಂದು ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಲಾರಿ ಚಾಲಕ, ಮಹಾರಾಷ್ಟ್ರದ ಸೋಲಾಪುರದ ಅಭಿಷೇಕ ನಗರ ನಿವಾಸಿ ಮೋಹಿನ್ ಜಾಗೀರದಾರ (26) ಹಾಗೂ ಬೈಕ್ ಸವಾರ ಶಹಾಬಾದ್ ನಿವಾಸಿ ಪ್ರಶಾಂತ ಹೂಗಾರ (32) ಮೃತರು.
‘ವೇಗವಾಗಿ ಲಾರಿ ಚಲಾಯಿಸಿಕೊಂಡು ಬಂದ ಮೋಹಿನ್ ಮೊದಲಿಗೆ ನನ್ನ ಲಾರಿಗೆ ಗುದ್ದಿದ. ನಾನು ಲಾರಿ ಪಕ್ಕಕ್ಕೆ ತೆಗೆದುಕೊಂಡು ನಿಲ್ಲಿಸುವಷ್ಟರಲ್ಲಿ ಎದುರಿನ ದ್ವಿಚಕ್ರಕ್ಕೆ ಗುದ್ದಿ, ರಸ್ತೆ ಪಕ್ಕದಲ್ಲಿರುವ ಚಿಕ್ಕ ಸೇತುವೆ ಬಳಿ ಲಾರಿ ಪಲ್ಟಿ ಹೊಡೆಸಿದ. ಅಪಘಾತದಲ್ಲಿ ನನ್ನ ಲಾರಿಯ ಎಡ ಬದಿಗೆ ಜಖಂಗೊಂಡಿದೆ’ ಎಂದು ತಮಿಳುನಾಡಿನ ಲಾರಿ ಚಾಲಕ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕಲಬುರಗಿ ಸಂಚಾರ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ; ಬೈಕ್ ಸವಾರ ಸಾವು
ಕಲಬುರಗಿಯ ರಿಂಗ್ ರಸ್ತೆಯಲ್ಲಿರುವ ಹೊಸ ಆರ್‌ಟಿಒ ಕಚೇರಿ ಹತ್ತಿರ ಬಲ್ಕರ್ ಟ್ಯಾಂಕರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ನಗರದ ಪೂಜಾ ಕಾಲೊನಿ ನಿವಾಸಿ ದಿಲೀಪ್ ಟಿಳ್ಳೆ (48) ಮೃತರು. ನಿಂಗಮ್ಮ ಪೊಲೀಸ್‌ಪಾಟೀಲ ಅಪಘಾತದಲ್ಲಿ ಗಾಯಗೊಂಡವರು.
ಈ ಕುರಿತು ಕಲಬುರಗಿ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ
ಕಲಬುರಗಿಯ ಶಹಾಬಜಾರ್ ನಾಕಾ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿ ವಿರುದ್ಧ ಕಾನೂನು ಕ್ರಮಕೈಗೊಂಡಿರುವ ಪೊಲೀಸರು ₹31,710 ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜಿಡಿಎ ಕಾವೇರಿ ನಗರದ 3ನೇ ಕ್ರಾಸ್‌ನ ಹನುಮಾನ ದೇವಸ್ಥಾನದ ಹತ್ತಿರ ಮನೆಯೊಂದರ ಎದುರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಐವರ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ.
ಆರೋಪಿಗಳಿಂದ ₹7,200 ಜಪ್ತಿ ಮಾಡಿಕೊಂಡಿದ್ದಾರೆ.
ಈ ಕುರಿತು ಚೌಕ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ತಲವಾರನಿಂದ ಹಲ್ಲೆ
‘ಮಹಿಳೆಯೊಬ್ಬರ ವಿಚಾರವಾಗಿ ಅವರ ಸಹೋದರ ಐದಾರು ಜನರ ಗುಂಪು ಕಟ್ಟಿಕೊಂಡು ಬಂದು ತಲವಾರನಿಂದ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಎಂಎಸ್‌ಕೆ ಮಿಲ್‌ನ ಶಹಾಜಿಲಾನಿ ದರ್ಗಾ ಪ್ರದೇಶದ ನಿವಾಸಿ, ಗಾಯಾಳು ಮೋಸಿನ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಐದು ಮಂದಿ ವಿರುದ್ಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.