ADVERTISEMENT

ಹಣ ಹೂಡಿಕೆಗೆ ಪ್ರೇರಣೆ | 2 ಪ್ರಕರಣಗಳಲ್ಲಿ ₹ 83 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 6:42 IST
Last Updated 6 ಸೆಪ್ಟೆಂಬರ್ 2025, 6:42 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದೊಡ್ಡ ಪ್ರಮಾಣದ ಲಾಭ ಗಳಿಸಬಹುದು ಎಂಬ ಪ್ರೇರೇಪಿಸಿದ ಸೈಬರ್‌ ವಂಚಕರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರಿಗೆ ಒಟ್ಟು ₹ 83 ಲಕ್ಷ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನವರಾದ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕು ನಿವಾಸಿ 36 ವರ್ಷದ ವೈದ್ಯ ಕೆ.ಚನ್ನಬಸವನಗೌಡ ಹೂಡಿಕೆ ಆಮಿಷಕ್ಕೆ ಒಳಗಾಗಿ ₹ 59.15 ಲಕ್ಷ ಹಣ ಕಳೆದುಕೊಂಡವರು. 

ADVERTISEMENT

‘ವೀರೇಂದ್ರ ಸಿಂಗ್‌, ಕ್ರಿಸ್ಟಿನ್‌ ಹಾಗೂ ಇತರರು ಸೇರಿಕೊಂಡು ಎರಡು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವಂಥ ಮೆಸೇಜ್‌ಗಳು, ಸ್ಕ್ರೀನ್‌ಶಾಟ್‌ಗಳನ್ನು ಗ್ರೂಪಿನಲ್ಲಿ ಹಾಕಿ ಹಣ ಹೂಡಿಕೆಗೆ ಪ್ರೇರೇಪಿಸಿದ್ದಾರೆ. ಮೋಸ, ವಂಚನೆ ಮತ್ತು ನಂಬಿಕೆ ದ್ರೋಹ ಮಾಡುವ ಉದ್ದೇಶದಿಂದ ‘ರಸೆಲ್‌–ಸಿ ಸಿಎಂ’ ಅಪ್ಲಿಕೇಷನ್‌ನಲ್ಲಿ ನಕಲಿ ಡಿಮ್ಯಾಟ್ ಖಾತೆ ತೆರೆದು ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹ 59.15 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಭರವಸೆ ನೀಡಿದಂತೆ ನಾನು ಹೂಡಿಕೆ ಮಾಡಿದ ಹಣವನ್ನಾಗಲಿ, ಅದರ ಲಾಭದ ಹಣವನ್ನಾಗಲಿ ಮರಳಿಸಿಲ್ಲ. ಸಂಪರ್ಕಕಕ್ಕೂ ಸಿಗದೇ ಆನ್‌ಲೈನ್‌ ಮೂಲಕ ವಂಚನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಕೆ.ಚನ್ನಬಸವನಗೌಡ ತಿಳಿಸಿದ್ದಾರೆ.

ಈ ಕುರಿತು ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹ 23.90 ಲಕ್ಷ ವಂಚನೆ

ಇನ್ನೊಂದು ಪ್ರಕರಣದಲ್ಲೂ ಷೇರುಪೇಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ ಸೈಬರ್‌ ವಂಚಕರು ನಿವೃತ್ತ ನೌಕರರೊಬ್ಬರಿಗೆ ₹ 23.90 ಲಕ್ಷ ವಂಚಿಸಿದ್ದಾರೆ. ಕಲಬುರಗಿ ನಗರದ ಹೊಸ ಜೇವರ್ಗಿ ರಸ್ತೆಯ ಮಹಾವೀರ ನಗರ ನಿವಾಸಿ, 65 ವರ್ಷದ ಕೆ.ಪ್ರಲ್ಹಾದ ಕುಲಕರ್ಣಿ ವಂಚನೆಗೆ ಒಳಗಾದವರು.

‘ಪ್ರಿಯಾ ದೇಸಾಯಿ ಹಾಗೂ ಇತರರು ಕೂಡಿಕೊಂಡು ‘ಎ–1–ಐಐಎಫ್‌ಎಲ್‌ ಕ್ಯಾಪಿಟಲ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌’ ಎನ್ನುವ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ನನ್ನ ಮೊಬೈಲ್‌ ಸಂಖ್ಯೆ ಸೇರಿಸಿಕೊಂಡು, ಷೇರು ಮಾರುಕಟ್ಟೆಗೆ ಸಂಬಂಧಿಸಿದ ‘ಐಐಎಚ್‌ಎನ್‌ಡಬ್ಲ್ಯುಎಫ್‌ಎಲ್‌’ ಆ್ಯಪ್‌ನಲ್ಲಿ  ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದರು. ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ, ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ–ಹಂತವಾಗಿ ಒಟ್ಟು ₹ 23.90 ಲಕ್ಷ ನನ್ನಿಂದ ವರ್ಗಾಯಿಸಿಕೊಂಡಿದ್ದರು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೆ.ಪ್ರಲ್ಹಾದ ಕುಲಕರ್ಣಿ ತಿಳಿಸಿದ್ದಾರೆ.

ಈ ದೂರಿನನ್ವಯ ನಗರದ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.