ಕಲಬುರಗಿ: ನಗರದ ಓಝಾ ಬಡಾವಣೆಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಭರವಸೆ ನೀಡಿದರು.
ಇಲ್ಲಿಯ ಶ್ರೀಗುರು ಸ್ವತಂತ್ರ ಪಿ.ಯು ವಿಜ್ಞಾನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಓಝಾ ಕಾಲೊನಿ ನಿವಾಸಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಮ ಮಂದಿರ ವೃತ್ತದಿಂದ ನಾಗನಹಳ್ಳಿ ವೃತ್ತದತ್ತ ಹೋಗುವ ನಗರದ ವರ್ತುಲ ರಸ್ತೆಯಲ್ಲಿ ಕಾಲೊನಿಯ ಪ್ರವೇಶಕ್ಕೆ ವ್ಯವಸ್ಥೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಮಾತನಾಡಿ ನಿವಾಸಿಗಳ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಾಗುದು’ ಎಂದರು.
ದಿನದ 24 ಗಂಟೆ ನೀರು ಪೂರೈಸುವ ಯೋಜನೆಯಲ್ಲಿ ಕಂಡುಬಂದಿರುವ ವಿಳಂಬಕ್ಕೆ ಎಲ್ ಅಂಡ್ ಟಿ ಕಂಪನಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ‘ಯೋಜನೆಯನ್ನು 2026ರ ಅಂತ್ಯಕ್ಕೆ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ’ ಎಂದು ವಿವರಿಸಿದರು.
‘ನೀರು ಪೂರೈಕೆ ಪೈಪ್‌ಲೈನ್ ಹಾಕಲು ಅಗೆದ ರಸ್ತೆಗಳ ದುರಸ್ತಿ ಕಾರ್ಯವನ್ನು ಕೂಡಲೇ ಆರಂಭಿಸಲಾಗುವುದು’ ಎಂದು ಬಸವರಾಜ ಪಾಟೀಲ ಬಿರಾಳ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀನಿವಾಸ ಸಿರನೂರಕರ್, ‘ಸಂಘವು ಕೇವಲ ಬಡಾವಣೆ ಸಮಸ್ಯೆಗಳ ಬಗ್ಗೆಯಷ್ಟೇ ಅಲ್ಲದೇ ನಗರದ ಸುಧಾರಣಾ ಕಾರ್ಯದಲ್ಲೂ ಕೈಜೋಡಿಸುವ ಉದ್ದೇಶ ಹೊಂದಿದೆ’ ಎಂದರು.
ಶಾಸಕರಿಗೆ ಮನವಿಪತ್ರ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ನಿತಿನ್ ನಾಯ್ಕ, ಕೋಶಾಧಿಕಾರಿ ಅಂಕಿತ ಓಝಾ ಉಪಸ್ಥಿತರಿದ್ದರು.
ಗೌರಿ ನರಿಬೋಳ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಅಧ್ಯಾಪಕ ಬಾಳಿ ಸ್ವಾಗತಿಸಿದರು. ಅರುಣಕುಮಾರ ಕುಲಕರ್ಣಿ ಸಂಘದ ಧೇಯೋದ್ದೇಶ ವಿವರಿಸಿದರು. ಆನಂದಕುಮಾರ ಜೋಶಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.