ADVERTISEMENT

ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕನಸು ತೆರೆದಿಟ್ಟ ಪ್ರಿಯಾಂಕ್

ಪೊಲೀಸ್ ಪರೇಡ್ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:48 IST
Last Updated 27 ಜನವರಿ 2026, 7:48 IST
ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು
ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು   

ಕಲಬುರಗಿ: ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿನ ತಮ್ಮ ಭಾಷಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ, ಭವಿಷ್ಯದಲ್ಲಿ ಮಾಡಲಿರುವ ಕಾರ್ಯಗಳ ಮುನ್ನೋಟವನ್ನು ನೀಡಲು ಬಳಸಿಕೊಂಡರು. 

ಕೇಂದ್ರದ ಅಸಹಕಾರದ ನಡುವೆಯೂ ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಹೇಗೆ ಕೈಗೆತ್ತಿಕೊಳ್ಳುತ್ತಿದೆ ಎಂದು ವಿವರಿಸಿದರು.

‘ಕಳೆದ ಎರಡೂವರೆ ವರ್ಷದಲ್ಲಿ ಕೃಷಿ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ರಸ್ತೆ, ಉದ್ಯಾನಗಳ ಅಭಿವೃದ್ಧಿ ಹಾಗೂ ಇತರೆ ಮೂಲಸೌಲಭ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 2 ಸಿರಿಧಾನ್ಯ ಸಂಸ್ಕರಣ ‌ಕೇಂದ್ರಗಳು, ₹6 ಕೋಟಿ ವೆಚ್ಚದಲ್ಲಿ ತಾಲ್ಲೂಕುಗಳಲ್ಲಿ ಶೀಥಲೀಕರಣ ಘಟಕಗಳ ಸ್ಥಾಪನೆ, 7 ಮೈಕ್ರೋ ವಾಟರ್ ಶೆಡ್ ಟ್ರೀಟ್‌ಮೆಂಟ್ ಪ್ರೊಜೆಕ್ಟ್ ಸ್ಥಾಪನೆ, ತೊಗರಿ ಹಾಗೂ ಇತರೆ ಧಾನ್ಯಗಳ ಪ್ರಾಥಮಿಕ ಸಂಸ್ಕರಣ ಹಾಗೂ ಪ್ಯಾಕೇಜಿಂಗ್ ಘಟಕಗಳ ಸ್ಥಾಪನೆಗೆ ಕ್ರಮವಹಿಸಲಾಗಿದೆ’ ಎಂದರು.

ADVERTISEMENT

‘ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ್ದು, ₹1,000 ಕೋಟಿ ವೆಚ್ಚದಲ್ಲಿ ಕಲ್ಯಾಣ ಪಥ ಯೋಜನೆಯಡಿಯಲ್ಲಿ ರಸ್ತೆಗಳ ಅಭಿವೃದ್ಧಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾದರಿಯಲ್ಲಿ ಪ್ರಗತಿಪಥ ಯೋಜನೆಯಡಿ 157 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ ₹1,052 ಕೋಟಿ ವೆಚ್ಚದಲ್ಲಿ 8 ಕಡೆ ಈ ಯೋಜನೆ ಜಾರಿಗೊಳಿಸಲಾಗುತ್ತದೆ. ಎರಡು ವರ್ಷದ ಹಿಂದೆ‌ ನಾನು ಮಾತು ಕೊಟ್ಟಂತೆ ಕಲಬುರಗಿಯ ವಾಜಪೇಯಿ ಬಡಾವಣೆಯಲ್ಲಿ ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸೂಕ್ತ ತರಬೇತಿ ನೀಡುವ ಪ್ರಬುದ್ಧ ಅಕಾಡೆಮಿ ಸ್ಥಾಪಿಸಲಾಗಿದೆ. ಪ್ರಸ್ತುತ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 1500ಕ್ಕೇರಿಸುವ ಯೋಚನೆ ಇದೆ’ ಎಂದು ಹೇಳಿದರು.

‘ಕಲಬುರಗಿ ನಗರದ ಅಭಿವೃದ್ಧಿ ಕಾರ್ಯಗಳಿಗೆ ₹300 ಕೋಟಿಯ ನೀಲಿ ನಕ್ಷೆ ತಯಾರಿಸಲಾಗಿದೆ. ಈ ಯೋಜನೆಯಡಿಯಲ್ಲಿ ₹164 ಕೋಟಿ ವೆಚ್ಚದಲ್ಲಿ 43 ರಸ್ತೆಗಳ ಅಭಿವೃದ್ಧಿ, 25 ವೃತ್ತಗಳ ಅಭಿವೃದ್ಧಿ, ₹ 36 ಕೋಟಿ ವೆಚ್ಚದಲ್ಲಿ 33 ಉದ್ಯಾನಗಳ ಅಭಿವೃದ್ಧಿ ಮಾಡಲಾಗುವುದು’ ಎಂದರು.

ಶಾಸಕರಾದ ಅಲ್ಲಮಪ್ರಭು ‌ಪಾಟೀಲ, ಕನೀಜ್ ಫಾತಿಮಾ, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ. ಪಾಟೀಲ, ಮೇಯರ್ ವರ್ಷಾ ಜಾನೆ, ಉಪಮೇಯರ್ ತೃಪ್ತಿ ಲಾಖೆ, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕೆಕೆಆರ್‌ಟಿಸಿ ಎಂ.ಡಿ. ಡಾ.ಸುಶೀಲಾ ಬಿ., ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಚಿವರು ಆತ್ಮ ಯೋಜನೆ ಅಡಿಯಲ್ಲಿ 9 ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಣೆ ಮಾಡಿದರು. 2024–25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಶಿಕ್ಷಣ ಇಲಾಖೆಯು ಈ ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರ ಬಹುಮಾನವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಿದೆ. ನಂತರ ಸಿಎಂ ಸಹಕಾರ ರತ್ನ ಪ್ರಶಸ್ತಿ ಪಡೆದ ಪುರಸ್ಕೃತರನ್ನು ಸಚಿವರು ಸನ್ಮಾನಿಸಿದರು.

ರಾಷ್ಟ್ರಪತಿ ಪ್ರಶಸ್ತಿಗೆ ಆಯ್ಕೆಯಾದ ಸಿವಿಲ್ ಹೆಡ್ ಕಾನ್ಸಟೇಬಲ್ ಅವರನ್ನು ಸನ್ಮಾನಿಸಲಾಯಿತು.

ಗಣರಾಜ್ಯೋತ್ಸವದ ಅಂಗವಾಗಿ ಮಹಿಳಾ ಪೊಲೀಸ್ ಪಡೆಯವರು ಮೈದಾನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿ ಗೌರವ ವಂದನೆ ಸಲ್ಲಿಸಿದರು
ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್‌ಆರ್‌ಎನ್‌ ಮೆಹ್ತಾ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ತಿರಂಗಾವನ್ನು ಎತ್ತಿ ಹಿಡಿದಿದ್ದ ನೋಟ
ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಬುರಗಿಯ ಸಂಗಮ್ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಗಣರಾಜ್ಯೋತ್ಸವದ ಅಂಗವಾಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಧಕ ರೈತರನ್ನು ಸನ್ಮಾನಿಸಿದರು. ಅರುಣಕುಮಾರ್ ಎಂ. ಪಾಟೀಲ ಜಗದೇವ ಗುತ್ತೇದಾರ ಮಜರ್ ಆಲಂಖಾನ್ ತಿಪ್ಪಣ್ಣಪ್ಪ ಕಮಕನೂರ ಅಲ್ಲಮಪ್ರಭು ಪಾಟೀಲ ಕನೀಜ್ ಫಾತಿಮಾ ಫೌಜಿಯಾ ತರನ್ನುಮ್ ಶರಣಪ್ಪ ಎಸ್.ಡಿ ಸಿದ್ರಾಮಪ್ಪ ಪಾಟೀಲ ಧಂಗಾಪುರ ಭಂವರ್ ಸಿಂಗ್ ಮೀನಾ ಅಡ್ಡೂರು ಶ್ರೀನಿವಾಸಲು ಸಮದ್ ಪಟೇಲ್ ಇತರರು ಭಾಗವಹಿಸಿದ್ದರು 

ಕಲಬುರಗಿ ಜಿಲ್ಲೆಯ ಸೇಡಂ ರಸ್ತೆಯಲ್ಲಿ 43 ಎಕರೆ ಪ್ರದೇಶದಲ್ಲಿ ₹40 ಕೋಟಿ ವೆಚ್ಚದಲ್ಲಿ ಮೃಗಾಲಯ ಸ್ಥಾಪನೆ ಮಾಡಲಾಗುತ್ತಿದೆ. ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆ ನೆರವೇರಿಸಲಾಗುವುದು

–ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ

ಮನರೇಗಾ ಯೋಜನೆ ವಿರೂಪಕ್ಕೆ ಆಕ್ರೋಶ ಗ್ರಾಮೀಣ ಪ್ರದೇಶ ಕೋಟ್ಯಂತರ ಜನರಿಗೆ ಉದ್ಯೋಗ ನೀಡಲೆಂದು ಡಾ.ಮನಮೋಹನ್ ಸಿಂಗ್ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಬಡವರಿಗೆ ನೆಮ್ಮದಿ ಕಲ್ಪಿಸಿತ್ತು. ಆದರೆ ಕೇಂದ್ರ ಸರ್ಕಾರ ನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತರುವ ಮೂಲಕ ಈ ಕಾಯ್ದೆಯ ಆಶಯವನ್ನೇ ಮಣ್ಣುಪಾಲು ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ‘ಗ್ರಾಮ ಪಂಚಾಯಿತಿ ಅಧಿಕಾರ ಮೊಟುಕುಗೊಳಿಸಲಾಗಿದೆ. ಹೊಸ ಕಾಯ್ದೆಯಿಂದ ಗ್ರಾಮೀಣ ಕಾರ್ಮಿಕರು ಉದ್ಯೋಗದ ಹಕ್ಕು ಕಳೆದುಕೊಳ್ಳಲಿದ್ದಾರೆ. ಈ ಹಿಂದೆ 125 ದಿನ ಉದ್ಯೋಗ ಪಡೆದುಕೊಳ್ಳಬಹುದಾಗಿತ್ತು. ಈಗ ಹೊಸ ಕಾಯ್ದೆಯಿಂದ ಕಾರ್ಮಿಕರು ಗುತ್ತಿಗೆದಾರರ ಆಳುಗಳಂತೆ ಕೆಲಸ ಮಾಡಬೇಕಾಗುತ್ತದೆ. ಮೊದಲು ಕೇಂದ್ರದ ಪಾಲಿನ ಬದಲು ರಾಜ್ಯ ಸರ್ಕಾರ ಶೇ 40ರಷ್ಟು ಪಾಲು ಕೊಡಬೇಕಾಗುತ್ತದೆ. ಆ ಮೂಲಕ ರಾಜ್ಯಗಳ ಮೇಲೆ ಕೇಂದ್ರ ದೌರ್ಜನ್ಯ ಮಾಡಿದಂತಾಗಿದೆ. ಇಂತಹ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ಹೇಳಿದರು.

ಗಮನ ಸೆಳೆದ ಸ್ತಬ್ಧಚಿತ್ರಗಳು ಜೆಸ್ಕಾಂ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಇಲಾಖೆಯ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು. ತೋಟಗಾರಿಕೆ ಇಲಾಖೆಯು ಜಿಲ್ಲೆಯಲ್ಲಿ ಅಣಬೆ ಬೆಳೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಣಬೆಯ ಎರಡು ಪ್ರತಿಕೃತಿಗಳನ್ನು ನಿರ್ಮಿಸಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯು ಪ್ರಸ್ತುತಪಡಿಸಿದ ಕಲ್ಯಾಣ ಪಥದ ಸ್ತಬ್ಧಚಿತ್ರದಲ್ಲಿ ಸುಸಜ್ಜಿತ ರಸ್ತೆ ಶಾಲೆ ಬಸ್‌ಗಳು ಓಡಾಡುವುದನ್ನು ಚಿತ್ರಿಸಲಾಗಿತ್ತು. ಆರೋಗ್ಯ ಇಲಾಖೆಗೆ ಒದಗಿಸಲಾದ ಆರೋಗ್ಯ ಸೇತು ಹೆಸರಿನ ವಾಹನಗಳು ಸಹ ಪಥಸಂಚಲನದಲ್ಲಿ ಭಾಗವಹಿಸಿದ್ದವು. ಮೈದಾನದಲ್ಲಿ ಗಂಧರ್ವಲೋಕ ಸೃಷ್ಟಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಎಸ್‌ಆರ್‌ಎನ್‌ ಮೆಹ್ತಾ ಹಾಗೂ ಸಂಗಮ್ ಶಾಲೆಯ ವಿದ್ಯಾರ್ಥಿಗಳು ತರಹೇವಾರಿ ಉಡುಪುಗಳನ್ನು ಧರಿಸಿ ಗಂಧರ್ವಲೋಕವನ್ನೇ ಸೃಷ್ಟಿಸಿದ್ದರು. ಎಸ್‌ಆರ್‌ಎನ್‌ ಮೆಹ್ತಾ ಶಾಲೆಯ ಮಕ್ಕಳು ದೇಶಭಕ್ತಿಗೆ ಸಂಬಂಧಿಸಿದ ಹಾಡುಗಳಿಗೆ ನೃತ್ಯ ಹಾಗೂ ಯುದ್ಧದ ದೃಶ್ಯವನ್ನು ಮರು ಸೃಷ್ಟಿಸಿದರು. ಶಾಲೆಯ ವಿದ್ಯಾರ್ಥಿ ತನ್ನ ಸಹಪಾಠಿಗಳು ನಿರ್ಮಿಸಿದ ಮಾನವ ಸೇತುವೆಯನ್ನು ಏರಿ ಎತ್ತರದಲ್ಲಿ ನಿಂತು ತ್ರಿವರ್ಣ ಧ್ವಜವನ್ನು ಹಾರಿಸಿದ ದೃಶ್ಯಕ್ಕೆ ಪ್ರೇಕ್ಷಕರು ಫಿದಾ ಆಗಿ ಚಪ್ಪಾಳೆಯ ಸುರಿಮಳೆ ಸುರಿಸಿದರು. ಸಂಗಮ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಕನ್ನಡ ಹಿಂದಿ ತೆಲುಗು ಹಾಡುಗಳನ್ನು ಮಿಕ್ಸ್ ಮಾಡಿ ತಯಾರಿಸಿದ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.