
ಕಲಬುರಗಿ: ‘ಪಂಚಾಯತ್ ರಾಜ್ ವಿಕೇಂದ್ರೀಕರಣ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಗ್ರಾಮಸಭೆ ಮೂಲಕ ಸ್ವೀಕೃತ ಎಲ್ಲಾ ಬೇಡಿಕೆ ಯೋಜನೆಗಳನ್ನು ಇದೇ ನವೆಂಬರ್ ಅಂತ್ಯಕ್ಕೆ ಜಿಲ್ಲಾ ಯೋಜನಾ ಸಮಿತಿ ಸಭೆಯ ಅನುಮೋದನೆಯೊಂದಿಗೆ ರಾಜ್ಯಕ್ಕೆ ಮಾದರಿಯಾಗಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳು 2026-27ರ ಕರಡು ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಶನಿವಾರ ಕಲಬುರಗಿ ವಿಭಾಗಮಟ್ಟದ 2026-27 ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಈಗಾಗಲೇ ಬೆಳಗಾವಿ ವಿಭಾಗದ ಸಭೆ ನಡೆಸಲಾಗಿದೆ. ಗಾಂಧೀಜಿ ಕಂಡ ಗ್ರಾಮಸ್ವರಾಜ್ ಕನಸು ನನಸು ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಹಳ್ಳಿ ಜನರ ಬದುಕು ಹಸನಗೊಳಿಸಲು ಅವರ ಬೇಡಿಕೆಗೆ ಅನುಗುಣವಾಗಿ ಕರಡು ಯೋಜನೆ ರೂಪಿಸಿ ಸಲ್ಲಿಸಿದಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಂದು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಆಯವ್ಯಯದಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ನಿಟ್ಟಿನಲ್ಲಿ ಈಗಾಗಲೇ ಸಿ.ಎಂ ಅವರು ತಳಹಂತದಿಂದ ವರದಿ ತೆಗೆದುಕೊಂಡು ಬರಲು ಸೂಚನೆ ನೀಡಿದ್ದಾರೆ’ ಎಂದರು.
‘ಬಹುತೇಕ ಹಳ್ಳಿಗಳಲ್ಲಿ ಭೂಮಿ ಖರೀದಿಸಿ ವಸತಿ ಯೋಜನೆ ರೂಪಿಸುತ್ತಿದ್ದೇವೆ. ಆದರೆ ನಿಧನ ಹೊಂದಿದ್ದರೆ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಇಲ್ಲ. ಸ್ಮಶಾನ ಭೂಮಿ ಮಂಜೂರು ಮಾಡುವಂತಹ ಕೆಲಸ ಆದ್ಯತೆ ಮೇಲೆ ಮಾಡಬೇಕು. ನಾವೆಲ್ಲ ಹಳ್ಳಿಯಿಂದಲೇ ಬಂದವರಾಗಿದ್ದೇವೆ. ಹಳ್ಳಿ ಜನರ ಸಮಸ್ಯೆ, ನೋವು ನಲಿವನ್ನು ಹತ್ತಿರದಿಂದ ಕಂಡ ನಮಗೆ ಅವರ ಸಂಕಷ್ಟಕ್ಕೆ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರಿಂದಾಗಬೇಕಿದೆ. ಹಳ್ಳಿಯಿಂದ ಪಟ್ಟಣಕ್ಕೆ, ಪಟ್ಟಣದಿಂದ ಹೈವೇಗೆ ರಸ್ತೆ ಮಾಡಿದರೆ ಸಾಲದು. ಕೃಷಿಯೇ ಜೀವನಕ್ಕೆ ಆಧಾರವಾಗಿರುವಾಗ ಮನೆಯಿಂದ ಹೊಲಕ್ಕೂ ರಸ್ತೆ ಬೇಕಲ್ಲವೇ? ಅಧಿಕಾರಿಗಳು, ಎಂಜಿನಿಯರ್‌ಗಳು ರಸ್ತೆ ಮಾಡುವಾಗ ಇದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕಡ್ಡಾಯವಾಗಿ ಗ್ರಾಮ ಸಭೆ ನಡೆಸಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ಜನಪರ ಆಡಳಿತ ಸಾಧ್ಯವಾಗಲಿದೆ’ ಎಂದು ಹೇಳಿದರು.
ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ಪಂಚಾಯಿತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಆದರೆ ಹಳ್ಳಿಯಲ್ಲಿ ಹೆಣ್ಣುಮಕ್ಕಳ ಬದಲಾಗಿ ಅವರ ಪತಿಯವರ ಕಾರುಬಾರು ಹೆಚ್ಚು. ಇದು ಬದಲಾಗಬೇಕಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಪರಸ್ಪರ ಸಭೆ ನಡೆಸಿದರೆ ಅದು ಗ್ರಾಮ ಪಂಚಾಯಿತಿ ಸಭೆಯಾಗುತ್ತಾ?. ಸರ್ಕಾರ ಅನೇಕ ನೀತಿ, ನಿಯಮಗಳನ್ನು ಜಾರಿಗೊಳಿಸಿದೆ. ಅದರೆ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಹೀಗಾಗಿ ವಿಕೇಂದ್ರೀಕರಣ ವ್ಯವಸ್ಥೆ ಸರಿಯಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ಹಳ್ಳಿ ಜನರ ಬದುಕು ಸುಧಾರಣೆ ಕಾಣಲು ಸಾಧ್ಯ’ ಎಂದರು.
ಸಭೆಯಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ಎಂಎಲ್ಸಿ ಬಿ.ಜಿ.ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಬೀದರ್ ಸಿಇಒ ಗಿರೀಶ್ ಡಿ.ಬದೋಲೆ, ಬಳ್ಳಾರಿ ಸಿಇಒ ಎಂ.ಡಿ.ಹರೀಶ್ ಸುಮೈರ್, ರಾಯಚೂರು ಸಿಇಒ ಈಶ್ವರಕುಮಾರ ಕಾಂದೂ, ಯಾದಗಿರಿ ಸಿಇಒ ಲವೀಶ್ ಒರಡಿಯಾ, ಕೊಪ್ಪಳ ಸಿಇಒ ವರ್ಣೀತ್ ನೇಗಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಏಳು ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಜಿ.ಪಂ ಉಪ ಕಾರ್ಯದರ್ಶಿ, ಸಿಪಿಒಗಳು, ಡಿಯುಡಿಸಿ ಯೋಜನಾ ನಿರ್ದೇಶಕರು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಗ್ರಾಮಸ್ವರಾಜ್ ಕನಸು ನನಸು ಮಾಡುವುದು ಅಧಿಕಾರಿಗಳ ಜವಾಬ್ದಾರಿ ಆದ್ಯತೆ ಮೇಲೆ ಸ್ಮಶಾನ ಭೂಮಿ ಮಂಜೂರು ಮಾಡಲು ಸಲಹೆ ಕರಡು ಯೋಜನೆ ಆಯವ್ಯಯದಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ
‘ಗ್ರಾಮ ಸಭೆ ವಾರ್ಡ್ ಸಭೆ ನಡೆಸಿ’
‘ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 3ಇ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಿಲ್ಲಾ ರಾಜ್ಯ ಕೇಂದ್ರ ವಲಯದ ಎಲ್ಲಾ ವಲಯದ ಕಾರ್ಯಕ್ರಮಗಳನ್ನು ಯೋಜನೆ ಅನುಷ್ಠಾನಕ್ಕೆ ತರುವ ಮೊದಲು ಮತ್ತು ಫಲಾನುಭವಿಗಳ ಆಯ್ಕೆಗೆ ಮುನ್ನ ಗ್ರಾಮ ಸಭೆಯಲ್ಲಿ ಇದನ್ನು ಚರ್ಚಿಸಿ ನಿರ್ಧರಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾಯ್ದೆಯನ್ನು ಸ್ಪಷ್ಟವಾಗಿ ಅರಿತು ಕಾರ್ಯನಿರ್ವಹಿಸಬೇಕು’ ಎಂದು ಡಿ.ಆರ್. ಪಾಟೀಲ ಸೂಚಿಸಿದರು. ‘ಗ್ರಾಮ ಸಭೆ ವಾರ್ಡ್ ಸಭೆ ನಡೆಸಿ ಜನರ ಬೇಡಿಕೆಯಂತೆ ಆದ್ಯತಾವಾರು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಕಾಯ್ದೆಯ ವಿಶೇಷ ಮೀಸಲು ಫಲವಾಗಿ ಕೆಕೆಆರ್‌ಡಿಬಿ ಇರುವುದರಿಂದ ಅಭಿವೃದ್ಧಿಯ ಅಂತರ ತುಂಬುವಿಕೆಗೆ ಯಾವುದೇ ಅನುದಾನದ ಸಮಸ್ಯೆ ಇಲ್ಲ’ ಎಂದರು.
‘ನಾಲ್ಕನೇ ಭಾನುವಾರ ಶ್ರಮದಾನ ಮಾಡಿ’
‘ಪ್ರತಿ ತಿಂಗಳ ನಾಲ್ಕನೇ ಭಾನುವಾರ ರಜಾ ದಿನದಂದು ಎಲ್ಲಾ ಅಧಿಕಾರಿ-ಚುನಾಯಿತ ಪ್ರತಿನಿಧಿಗಳು ಹಳ್ಳಿ ವಾರ್ಡ್‌ಗಳಲ್ಲಿ ಶ್ರಮದಾನ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಸ್ವಚ್ಛ ಪರಿಸರ ಇದ್ದಲ್ಲಿ ಅದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಮನುಷ್ಯನಲ್ಲಿ ಧನಾತ್ಮಕ ಚಿಂತನೆಗೂ ಅವಕಾಶ ಮಾಡಿಕೊಡುತ್ತದೆ’ ಎಂದು ಡಿ.ಆರ್.ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.