ADVERTISEMENT

ಕಲಬುರಗಿ ಡ್ರಗ್ಸ್ ಮಾರಾಟದ ಕೇಂದ್ರ: ಎನ್. ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:03 IST
Last Updated 18 ಜುಲೈ 2025, 6:03 IST
ಎನ್‌.ರವಿಕುಮಾರ್‌
ಎನ್‌.ರವಿಕುಮಾರ್‌   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಡ್ರಗ್ಸ್ ಮಾರಾಟ ವ್ಯಾಪಕವಾಗಿದೆ. ಅದರಲ್ಲಿಯೂ ಕಲಬುರಗಿ ಡ್ರಗ್ಸ್‌ ಮಾರಾಟದ ಪ್ರಮುಖ ಕೇಂದ್ರವಾಗಿದೆ. ಇದರ ನೈತಿಕ ಹೊಣೆಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಸಚಿವರಿಂದಾಗಿ ಡ್ರಗ್ಸ್ ಮಾರಾಟ ಹೆಚ್ಚಾಗಿದೆ. ಸಾವಿರಾರು ಯುವಕರು ಅದರ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಶಿಷ್ಯಂದಿರು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆ. ಪೊಲೀಸರ ಬಂಧನದಿಂದ ಅವರನ್ನು ರಕ್ಷಿಸುತ್ತಿರುವ ಶಂಕೆ ಇದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದರು.

‘ರಾಜ್ಯ ಸರ್ಕಾರದ ರಕ್ಷಣೆಯಲ್ಲಿ ಡ್ರಗ್ಸ್ ಸಾಗಾಟ ಮಾಡಲಾಗುತ್ತಿದ್ದು, ಪೊಲೀಸರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಸಚಿವರಿಗೆ ಕಿವಿ ಇಲ್ಲ, ಬುದ್ಧಿ ಭ್ರಮಣೆಯಾಗಿದೆ. ರಾಜ್ಯದಲ್ಲಿ ನಡೆಯುವ ಎಲ್ಲಾ ತರಹದ ದಂಧೆಗಳು ಕಲ್ಯಾಣ ಕರ್ನಾಟಕದಲ್ಲೇ ನಡೆಯುತ್ತಿವೆ. ಮರಳು ಅಕ್ರಮ ಮಾರಾಟ, ಭ್ರಷ್ಟಾಚಾರ, ಡ್ರಗ್ಸ್, ಹಗಲು ವೇಳೆಯಲ್ಲಿ ಪಿಸ್ತೂಲ್ ತೋರಿಸಿ ದರೋಡೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಪಾಕಿಸ್ತಾನದಲ್ಲಿ ಆಗುತ್ತಿರುವ ಅರಾಜಕತೆ ಕರ್ನಾಟಕದಲ್ಲಿಯೂ ಆಗುತ್ತಿದೆ. ಅಭಿವೃದ್ಧಿ ಎಂಬುದೇ ಇಲ್ಲ. ಕಾಂಗ್ರೆಸ್ ನಾಯಕರು ಒಣ ಭಾಷಣ ಮಾಡುವಲ್ಲಿ ನಿರತವಾಗಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಮನೆಗಳನ್ನು ಪಡೆಯಲು ಲಂಚ ಕೊಡಬೇಕಿದೆ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧಮ್ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ರಣದೀಪ್‌ ಸಿಂಗ್‌ ಸುರ್ಜೇವಾಲಾ ಬಳಿ ಶಾಸಕರು ಹೇಳಿರುವ ಅಹವಾಲುಗಳನ್ನು ಬಹಿರಂಗಪಡಿಸಿದರೆ ಬಿಜೆಪಿ ಕಡೆಯಿಂದ ಮುಖ್ಯಮಂತ್ರಿಗೆ ಸನ್ಮಾನ ಮಾಡುತ್ತೇವೆ’ ಎಂದು ವ್ಯಂಗ್ಯವಾಡಿದರು.

ಈ ವೇಳೆ ಶಾಸಕ ಬಸವರಾಜ ಮತ್ತಿಮಡು, ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ಬಗಲಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಉಪಸ್ಥಿತರಿದ್ದರು.

ಮತ್ತೊಮ್ಮೆ ರವಿಕುಮಾರ್ ವಿಚಾರಣೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಗೆ ಜಾತಿ ನಿಂದನೆ ಮಾಡಿದ ಆರೋಪದ ಪ್ರಕರಣದಲ್ಲಿ ಎನ್.ರವಿಕುಮಾರ್ ಅವರನ್ನು ಕಲಬುರಗಿ ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಮತ್ತೊಮ್ಮೆ ವಿಚಾರಣೆ ನಡೆಸಲಾಯಿತು. ‘ಕಲಬುರಗಿ ಚಲೋ’ ಪ್ರತಿಭಟನೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಡಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂನ್ 2ರಂದು ರವಿಕುಮಾರ್ ಅವರು 5 ಗಂಟೆ ವಿಚಾರಣೆ ಎದುರಿಸಿದ್ದರು. ಗುರುವಾರ ಎರಡನೇ ಬಾರಿ ತನಿಖಾಧಿಕಾರಿ ಎಸಿಪಿ ಶರಣಪ್ಪ ಸುಬೇದಾರ್ ಅವರು ಕೆಲ ನಿಮಿಷಗಳು ವಿಚಾರಣೆ ನಡೆಸಿ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.