ADVERTISEMENT

ಕಲಬುರಗಿ: ಮನೆಗೆ ₹1 ಲಕ್ಷ ವಿದ್ಯುತ್‌ ಬಿಲ್‌!

ಮೀಟರ್‌ ದೋಷ ಸರಿಪಡಿಸದಿದ್ದರೆ ಪ್ರತಿಭಟನೆ: ಸಿಪಿಐ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:56 IST
Last Updated 6 ನವೆಂಬರ್ 2025, 5:56 IST
ಮಹೇಶಕುಮಾರ ರಾಠೋಡ
ಮಹೇಶಕುಮಾರ ರಾಠೋಡ   

ಕಲಬುರಗಿ: ‘ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಚಿಗರತಳ್ಳಿ, ಯಾಳವಾರ, ಕೊಡಚಿ, ಲಕಣಾಪುರ, ಖಾದ್ಯಾಪುರ, ಚಿಗರಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶೂನ್ಯ ಬರುತ್ತಿದ್ದ ಮನೆಗಳ ವಿದ್ಯುತ್‌ ಬಿಲ್‌ ₹1 ಲಕ್ಷದವರೆಗೆ ನೀಡಲಾಗಿದೆ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಆರೋಪಿಸಿದರು.

‘ಚಿಗರತಳ್ಳಿಯ ಆರ್‌ಆರ್‌ ಸಂಖ್ಯೆ: ಎಸ್‌ಐಜಿಎಲ್‌31 ಈ ಮನೆಯ ವಿದ್ಯುತ್‌ ಬಿಲ್‌ ಜುಲೈನಲ್ಲಿ ₹219 ಬಂದರೆ, ಅಕ್ಟೋಬರ್‌ನಲ್ಲಿ ಬಾಕಿ ₹581 ಸೇರಿ ₹44,291 ಬಂದಿದೆ. ಅದೇ ರೀತಿ ಆರ್‌ಆರ್‌ ಸಂಖ್ಯೆ: ಎಸ್‌ಐಜಿಎಲ್‌38020 ಈ ಮನೆಯ ವಿದ್ಯುತ್‌ ಬಿಲ್‌ ಅಕ್ಟೋಬರ್‌ನಲ್ಲಿ ಬಾಕಿ ₹1,201 ಸೇರಿ ₹1,10,944 ಬಂದಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಬಿಲ್‌ಗಳನ್ನು ಪ್ರದರ್ಶಿಸಿದರು.

‘ಅಧಿಕ ಮೊತ್ತದ ಬಿಲ್‌ಗಳ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಜನರದೇ ತಪ್ಪು ಅನ್ನುವ ರೀತಿಯಲ್ಲಿ ಜೆಸ್ಕಾಂ ಸಿಬ್ಬಂದಿ ವರ್ತಿಸುತ್ತಿದ್ದಾರೆ. 4 ದಿನಗಳಲ್ಲಿ ಮೀಟರ್‌ ದೋಷ ಸರಿಪಡಿಸದಿದ್ದರೆ, ಸಿಪಿಐ, ಆದರ್ಶ ಗ್ರಾಮ ಸಮಿತಿ ಯಾಳವಾರ ಹಾಗೂ ಜೇವರ್ಗಿ–ಯಡ್ರಾಮಿ ತಾಲ್ಲೂಕು ಅಭಿವೃದ್ಧಿ ಸಮಿತಿಗಳ ನೇತೃತ್ವದಲ್ಲಿ ನ.10ರಂದು ಜೇವರ್ಗಿಯ ಜೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಆದರ್ಶ ಗ್ರಾಮ ಸಮಿತಿ ಯಾಳವಾರ ಅಧ್ಯಕ್ಷ ಇಬ್ರಾಹಿಂ ಪಟೇಲ್‌, ಗ್ರಾ.ಪಂ ಸದಸ್ಯ ಸದ್ದಾಂ ಪಟೇಲ್‌ ಚಿಗರತಳ್ಳಿ ಮಾತನಾಡಿ, ‘ಹಸಿಬರಗಾಲದಿಂದ ರೈತರು, ಕೂಲಿಕಾರ್ಮಿಕರು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಈ ಹೊತ್ತಲ್ಲಿ ಜೆಸ್ಕಾಂ ನೌಕರರು ಬಿಲ್‌ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಿರುವುದು ಖಂಡನೀಯ. ಕೂಡಲೇ ಜೆಸ್ಕಾಂ ಅಧಿಕಾರಿಗಳು ದೋಷವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಬಾಬು ಬಿ., ರಾಜಾ ಪಟೇಲ್‌, ಮಹಮ್ಮದ್‌ ಚೌದರಿ, ಅಖಿಲ ಪಾಷಾ ಜಾಗೀರದಾರ, ಖಾಜಾ ಪಟೇಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.