ಕಲಬುರಗಿ: ಎರಡೂ ಬದಿಗೆ ಆಲಂಕಾರಿಕ ಗಿಡಗಳ ಸಾಲು. ಅಚ್ಚುಕಟ್ಟಾಗಿ ಜೋಡಿಸಿದ ಪೇವರ್ಸ್. ನಟ್ಟನಡುವೆ ಹೂದಾನಿಯಂಥ ನಳನಳಿಸುವ ಹಸಿರು ಪೊದೆ. ಬಂದವರಿಗೆ ಕೂರಲು ಸಿಮೆಂಟ್ ಬೆಂಚುಗಳು... ಕಾಂಪೌಂಡ್ ಸುತ್ತಲೂ ನೂರಾರು ಗಿಡಗಳು. ಚಿಂತನೆಗೆ ಹಚ್ಚುವ ಗೋಡೆಬರಹ...
ಇದು ಯಾವುದೋ ಉದ್ಯಾನದ ವರ್ಣನೆಯಲ್ಲ; ಕಲಬುರಗಿಯ ಸಂಜೀವನಗರದ ಸ್ಮಶಾನ ಮೊದಲ ನೋಟದಲ್ಲೇ ದಕ್ಕುವ ಪರಿ. ಸ್ಮಶಾನಗಳ ಕಲ್ಪನೆಯೇ ಭೀಕರ ಎನ್ನುವಂಥ ವಾತಾವರಣ ಎಲ್ಲೆಡೆ ಸಾಮಾನ್ಯ. 2024ರ ಆಗಸ್ಟ್‌ನಲ್ಲಿ ಈ ಸ್ಮಶಾನದ ಸ್ಥಿತಿಯೂ ಭಿನ್ನವಾಗಿರಲಿಲ್ಲ. ಆದರೆ, ಕಳೆದೊಂದು ವರ್ಷದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಸ್ಮಶಾನದ ನೋಟ, ಅದರ ಬಗೆಗಿನ ಕಲ್ಪನೆಯನ್ನು ಬದಲಿಸಿದೆ. ಇಡೀ ಸ್ಮಶಾನಕ್ಕೆ ‘ಅಂತಿಮ ಅರಮನೆ’ ಎಂದು ನಾಮಕರಣ ಮಾಡಲಾಗಿದೆ. ಈ ‘ಅರಮನೆ’ ನಿತ್ಯ ಹತ್ತಾರು ಮಂದಿಗೆ ಬೆಳಗಿನ ನಡಿಗೆಯ ತಾಣವಾಗಿಯೂ ಬದಲಾಗಿದೆ.
ನಾಲ್ಕು ಎಕರೆ ವಿಸ್ತಾರದ ಈ ರುದ್ರಭೂಮಿಗೆ ಸುತ್ತಲೂ ಕಾಂಪೌಂಡ್ ಇದೆ. ಜನರ ಪ್ರವೇಶಕ್ಕೆ ವಿಶಾಲ ಗೇಟ್ ಅಳವಡಿಸಲಾಗಿದೆ. ಗೇಟು ತೆರೆದು ಮುನ್ನಡೆದರೆ ಕಾಲಿಗೆ ಮಣ್ಣು ತಾಕದಂತೆ ಸುಸಜ್ಜಿತವಾಗಿ ಪೇವರ್ಸ್ ಜೋಡಿಸಲಾಗಿದೆ. ದಾರಿಯ ಎರಡೂ ಬದಿಗೆ ಬಗೆ–ಬಗೆಯ ಆಲಂಕಾರಿಕ ಗಿಡಗಳು, ಬಣ್ಣ–ಬಣ್ಣದ ಎಂಟು ಬೀದಿ ದೀಪಗಳು ಉದ್ಯಾನವನ್ನು ನೆನಪಿಸುತ್ತವೆ. ಪೇವರ್ಸ್ ಮದ್ಯದಲ್ಲಿ ಹೂದಾನಿಯಂತೆ ಸಸ್ಯಪೊದೆ ಬೆಳೆಸಲಾಗಿದೆ. ಮಣ್ಣಿಗೆ ಬಂದವರಿಗೆ ವಿರಮಿಸಲು 10 ಸಿಮೆಂಟ್ ಬೆಂಚ್ ಹಾಕಲಾಗಿದೆ.
ಸ್ಮಶಾನದ ಕಾಂಪೌಂಡ್ ಹೊರಬದಿಗೆ ‘ಸಾವಿಗಾಗಿ ನಾನೇಕೆ ಅಂಜಬೇಕು? ನಾನಿರುವವರೆಗೂ ಸಾವು ಬರಲ್ಲ. ಸಾವು ಬಂದಾಗ ನಾನಿರುವುದಿಲ್ಲ’ ಎಂಬ ಕವಿಸಾಲು, ‘ನಾಳೆ ಎಂಬುದು ಶತ್ರು, ಇವತ್ತು ಎಂಬುದೇ ಸಂಬಂಧಿಕರು, ಈಗ ಎಂಬುದೇ ಮಿತ್ರರು, ಈಕ್ಷಣ ಎಂಬುದೇ ಜೀವನ’, ‘ನಾವು ಯಾರನ್ನೇ ಕಳೆದುಕೊಂಡರು ಬದುಕಬಹುದು, ನಮ್ಮನ್ನೇ ನಾವು ಕಳೆದುಕೊಂಡರೆ ಬದುಕುವುದು ಕಷ್ಟ’. ‘ಇಡೀ ಜೀವಕುಲ ಯಾವುದರಿಂದ ವಂಚಿತವಾದರೂ ಇದರಿಂದ ಮಾತ್ರ ವಂಚಿತರಾಗಲು ಸಾಧ್ಯವೇ ಇಲ್ಲ... ಅದುವೇ ಸಾವು’ ಎಂಬಂಥ ಹತ್ತಾರು ವೇದಾಂತದ ಸಾಲುಗಳು ಬರೆಯಿಸಲಾಗಿದೆ.
ಅನಾಥರಿಗಾಗಿ ಕಾಳಜಿ
ನಗರ ಪ್ರದೇಶದಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದವರು ಮೃತಪಟ್ಟರೆ ಆ ಪಾರ್ಥಿವ ಶರೀರವನ್ನು ಬಾಡಿಗೆ ಮನೆಗೆ ತರಲು ಕೆಲವರು ಬಿಡಲ್ಲ. ಹೀಗಾಗಿ ಇಂಥ ಶವಗಳನ್ನು ಆಸ್ಪತ್ರೆಯಿಂದ ನೇರ ಸ್ಮಶಾನಕ್ಕೆ ತಂದು ಸಂಬಂಧಿಕರು ಬರುವ ತನಕ ಕೆಲವು ಗಂಟೆ ಸ್ಮಶಾನದಲ್ಲೇ ಕೂರಿಸಲು ವಿಶೇಷ ಕಟ್ಟೆ ನಿರ್ಮಿಸಲಾಗಿದೆ. ಮಣ್ಣಿಗೆ ಬರುವ ನೂರಾರು ಮಂದಿಗೆ ಬಿಸಿಲು–ಮಳೆಯಿಂದ ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಸುಸಜ್ಜಿತ ಶೆಡ್ ನಿರ್ಮಿಸಲಾಗಿದೆ. ಸ್ಮಶಾನದಲ್ಲಿ ಎರಡು ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದು, ಕತ್ತಲೆ ನೀಗಿ ಅರಿವಿನ ಬೆಳಕು ಮೂಡಿಸಲು ಯತ್ನಿಸಲಾಗಿದೆ.
ಸಮಾಜದ ಜನರು ಶುರು ಮಾಡಿದ ಸ್ಮಶಾನದ ಅಭಿವೃದ್ಧಿ ಕಾರ್ಯಕ್ಕೆ ಪಾಲಿಕೆಯಿಂದ ₹30 ಲಕ್ಷದಷ್ಟು ಅನುದಾನ ತಂದು ಕೈಜೋಡಿಸಲಾಗಿದೆ. ಇನ್ನಷ್ಟು ಅಭಿವೃದ್ಧಿಗೆ ಚಿಂತಿಸಲಾಗಿದೆ.– ಪ್ರಕಾಶ ಎಚ್.ಕಪನೂರ, ವಾರ್ಡ್ ನಂ.22ರ ಪಾಲಿಕೆ ಸದಸ್ಯ
‘ಆ ಸಾವಿನ ಬಳಿಕ ಬದಲಾಯ್ತು ಸ್ಥಿತಿ’
‘2024ರ ಆಗಸ್ಟ್ 7ರಂದು ನಮ್ಮ ಏರಿಯಾದವರೊಬ್ಬರು ನಿಧನರಾಗಿದ್ದರು. ಮಣ್ಣಿಗೆ ಬಂದಾಗ ಕಾಲಿಡಲೂ ಸಾಧ್ಯವಾಗದಂಥ ಸ್ಥಿತಿ. ಮರುದಿನವೇ ನಾವು ಕೆಲವರು ಸೇರಿ ಶುಚಿತ್ವ ಆರಂಭಿಸಿದೆವು. ಶಿವಶರಣಪ್ಪ ಬಿಲಕರ ಶರಣು ಬಾನೇಕರ ಸುರೇಶ ಗುಂಡೇಲೂರ ಸುನೀಲ ಹಳ್ಳಿಖೇಡ ಜೈಭೀಮ ಕನ್ನೂರ ಕಲ್ಯಾಣರಾವ ಸೇರಿದಂತೆ ನೂರಾರು ಸ್ಥಳೀಯರು ಕೈಜೋಡಿಸಿದರು.
ಸ್ಮಶಾನಕ್ಕೊಂದು ಕಚೇರಿ ನಿರ್ಮಿಸಿ ಆಲಂಕಾರಿಕ ಗಿಡ ನೆಟ್ಟೆವು. ಬಳಿಕ ಪಾಲಿಕೆ ಸದಸ್ಯ ಪ್ರಕಾಶ ಕಪನೂರ ಮಾಜಿ ಮೇಯರ್ ಯಲ್ಲಪ್ಪ ನಾಯಕೊಡಿ ನೆರವು ಪಡೆದು ಸುಸಜ್ಜಿತ ಶೆಡ್ ಗೇಟ್ ಪೇವರ್ಸ್ ಕಾಮಗಾರಿ ನಡೆಸಲಾಯಿತು. ಜೂನ್‌ನಲ್ಲಿ ಪರಿಸರ ದಿನ ಆಚರಣೆ ನಡೆಸಿ ಅರಣ್ಯ ಇಲಾಖೆಯಿಂದ 800 ಗಿಡಗಳನ್ನು ನಡೆಲಾಯಿತು. ಇದೀಗ ಪಾಲಿಕೆಯಿಂದ ಪಾರ್ಥಿವ ಶರೀರಗಳ ಸಂರಕ್ಷಣೆಗೆ ಫ್ರೀಜರ್ ಕೂಡ ಸಿಕ್ಕಿದೆ. ಒಂದು ವಿದ್ಯುತ್ ಚಿತ್ತಾಗಾರ ಹಾಗೂ ಸುತ್ತಲೂ ಸೌರದೀಪಗಳನ್ನು ಅಳವಡಿಸುವ ಉದ್ದೇಶವಿದೆ’ ಎನ್ನುತ್ತಾರೆ ಸ್ಮಶಾನ ಅಭಿವೃದ್ಧಿಗೆ ಶ್ರಮಿಸಿದರಲ್ಲೊಬ್ಬರಾದ ಕಾಶೀನಾಥ ಮಾಳಗಿ.
‘ಸ್ಮಶಾನ ಎಂದರೆ ಜನರಿಗೆ ಏನೋ ಮೌಢ್ಯ ಅವ್ಯಕ್ತ ಭಯ. ದೆವ್ವ–ಭೂತದ ಹೆದರಿಕೆ. ಅದನ್ನು ಹೋಗಲಾಡಿಸಲು ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಎರಡು ಹೈಮಾಸ್ಟ್ ದೀಪಗಳನ್ನು ನೆಟ್ಟು ಬೆಳಕು ಮೂಡಿಸಲಾಗಿದೆ. ಆ ಬೆಳಕು ಅಜ್ಞಾನದ ಕತ್ತಲೆ ಹೋಗಲಾಡಿಸಲಿ ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.