ADVERTISEMENT

ಕಲಬುರಗಿ | ಬದುಕು ದುಸ್ತರಗೊಳಿಸಿದ ಮಳೆ–ಪ್ರವಾಹ: ಬೆಳೆಹಾನಿಯಿಂದ ಅನ್ನದಾತ ವಿಲವಿಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:17 IST
Last Updated 13 ಸೆಪ್ಟೆಂಬರ್ 2025, 5:17 IST
ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮಕ್ಕೆ ಭೇಟಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಬೆಳೆ ಹಾನಿ ಪರಿಶೀಲನೆ ನಡೆಸಿದರು.
ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮಕ್ಕೆ ಭೇಟಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಬೆಳೆ ಹಾನಿ ಪರಿಶೀಲನೆ ನಡೆಸಿದರು.   

ಜೇವರ್ಗಿ: ಅತಿವೃಷ್ಟಿ ಹಾಗೂ ಭೀಮಾ ನದಿಯ ಪ್ರವಾಹದಿಂದ ತಾಲ್ಲೂಕಿನ ರೈತರು ಸಂಕಷ್ಟಕ್ಕೀಡಾಗಿದ್ದು, ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕಳೆದ ಐದಾರು ವರ್ಷಗಳಿಂದ ತಾಲ್ಲೂಕಿನ ರೈತರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು, ಪ್ರಸಕ್ತ ವರ್ಷದ ಮಳೆ ಹಾಗೂ ಪ್ರವಾಹ ಅನ್ನದಾತನ ಬದುಕನ್ನು ಅಕ್ಷರಶಃ ದುರ್ಬಲಗೊಳಿಸಿದೆ.  

ಮಹಾರಾಷ್ಟ್ರ ಹಾಗೂ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣದಿಂದ ಭೀಮಾ ನದಿ ತುಂಬಿ ಹರಿಯುತ್ತಿದೆ. ಸಧ್ಯ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ತೀರದಲ್ಲಿರುವ ತಾಲ್ಲೂಕಿನ ಇಟಗಾ, ಅಂಕಲಗಾ, ಭೋಸಗಾ, ಹಂಚಿನಾಳ, ಸಿದ್ನಾಳ, ಬಣಮಿಗಿ, ಕೋನಾಹಿಪ್ಪರಗಾ, ಹರವಾಳ, ಕೂಡಿ, ಕೋಬಾಳ, ಹಂದನೂರ, ರಾಸಣಗಿ, ನೆಲೋಗಿ, ಕೂಟನೂರ ಸೇರಿದಂತೆ 30ಕ್ಕೂ ಅಧಿಕ ಗ್ರಾಮಗಳ ನೂರಾರು ಜನ ರೈತರ ಜಮೀನು ಜಲಾವೃತಗೊಂಡು ಬೆಳೆ ಹಾನಿಯಾಗಿದೆ.

ADVERTISEMENT

ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬೆಳೆದಿದ್ದ ಹೆಸರು ಬೆಳೆ ಮಳೆ ಹಾಗೂ ನೆರೆ ಹಾವಳಿಗೆ ನೀರು ಪಾಲಾಗಿದೆ. ಅತಿವೃಷ್ಟಿಯಿಂದ ಹಾಗೂ ಭೀಮಾ ಪ್ರವಾಹದಿಂದ ರೈತರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ.

ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ರೈತರು ಕಷ್ಟಪಟ್ಟು ಬೆಳೆದಿದ್ದ ತೊಗರಿ, ಹತ್ತಿ, ಮೆಕ್ಕೆಜೋಳ, ಹೆಸರು, ಉದ್ದು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.

ಕೃಷಿ ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ ಒಟ್ಟು 1.80 ಲಕ್ಷ ಹೆಕ್ಟೇರ್ ಮುಂಗಾರು ಹಂಗಾಮು ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 83,460 ಸಾವಿರ ಹೆಕ್ಟೇರ್‌ ತೊಗರಿ, 69,959 ಸಾವಿರ ಹೆಕ್ಟೇರ್ ಹತ್ತಿ, ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, 800 ಹೆಕ್ಟೇರ್‌ ಕಬ್ಬು, 1250 ಹೆಕ್ಟೇರ್ ಹೆಸರು ಸೇರಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.

ಆದರೆ, ಕಳೆದ 15 ದಿನಗಳಿಂದ ಸುರಿದ ಮಳೆಯಿಂದ ಹಳ್ಳ, ಕೆರೆ, ನದಿಯ ಬಳಿಯಿದ್ದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆಯೂ ಹಳದಿ ಬಣ್ಣಕ್ಕೆ ತಿರುಗಿ ಹಾನಿಗೊಳಗಾಗಿವೆ. ರೈತರೆ ಹೇಳಿದಂತೆ ಸುಮಾರು 40 ರಿಂದ 50 ಸಾವಿರ ಹೆಕ್ಟೇ‌ರ್ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾಳಾಗಿವೆ. ರೈತರ ಹೊಲಗಳಲ್ಲಿ ಬೆಳೆಗಳು ಮಳೆ ನೀರಿನಲ್ಲಿ ಜಲಾವೃತ ವಾಗಿದೆ. ತಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆಯ ಮಧ್ಯೆ ಮಳೆ ನೀರು ವ್ಯಾಪಕವಾಗಿದ್ದು, ಮುಂಗಾರಿನ ಮಧ್ಯದಲ್ಲಿ ಮಳೆ ಇಲ್ಲದೆ ಬೆಳೆಗಳು ಹಾಳಾದರೆ ರಾಶಿ ಹಂತದಲ್ಲಿ ಬೆಳೆಗಳು ಅಧಿಕ ಮಳೆಯಿಂದ ಹಾಳಾಗಿವೆ.

ಹುಲುಸಾಗಿ ಬೆಳೆದು ನಿಂತಿದ್ದ ಹೆಸರು, ಮೆಕ್ಕೆಜೋಳ ಬೆಳೆ ಹಲವು ದಿನಗಳಿಂದ ಬಿಟ್ಟೂಬಿಡದೆ ಸುರಿದ ಭಾರಿ ಮಳೆಗೆ ಹಾಗೂ ಪ್ರವಾಹಕ್ಕೆ ಸಂಪೂರ್ಣ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಕೋನಾಹಿಪ್ಪರಗಾ ಗ್ರಾಮದ ರೈತ ಅರುಣ ಗೌಡ ಮತ್ತು ಸರ್ಕಾರ ಅತಿವೃಷ್ಟಿಯಿಂದ ಉಂಟಾದ ಹಾನಿ ಕುರಿತು ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ಬಣಮಿಗಿ ಗ್ರಾಮದ ರೈತ ನಾನಾಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ಕೋನಾಹಿಪ್ಪರಗಾ ಗ್ರಾಮದಲ್ಲಿ ಭೀಮಾ ಪ್ರವಾಹದಿಂದ ಹೆಸರು ಬೆಳೆ ಹಾಳಾಗಿರುವುದು.
ಭೀಮಾ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
–ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ನಿರ್ದೇಶಕ ಜೇವರ್ಗಿ
ಭೀಮಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಸಾರ್ವಜನಿಕರು ಜಾಗರೂಕತೆಯಿಂದ ವರ್ತಿಸಬೇಕು. ಪ್ರವಾಹ ಪರಿಸ್ಥಿತಿ ನಿಭಾಯಿಸಲು ತಾಲ್ಲೂಕಾಡಳಿತ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ.
– ಮಲ್ಲಣ್ಣ ಯಲಗೋಡ, ತಹಶೀಲ್ದಾರ್ 
ಸರ್ಕಾರ ಕೂಡಲೇ ಅತಿವೃಷ್ಟಿ ಹಾಗೂ ಪ್ರವಾಹದಿಂದ ನೊಂದಿರುವ ರೈತರಿಗೆ ಸೂಕ್ತ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು.
–ಮಂಜುಳಾ ಭಜಂತ್ರಿ, ಜಿಲ್ಲಾಧ್ಯಕ್ಷೆ ಕರ್ನಾಟಕ ರಾಜ್ಯ ರೈತ ಸಂಘ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.